ಯಳಂದೂರು: ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತಿನಂತೆ ಗ್ರಾಮಗಳ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಮಾಡಿ, ಅಭಿವೃದ್ಧಿಪಡಿಸುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ವಂತ ಕಟ್ಟಡಕ್ಕೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಸೊಳ್ಳೆ, ತಿಗಣೆಗಳ ತಾಣವಾಗಿದ್ದು ಇಲ್ಲಿಗೆ ಬರುವ ಅತಿಥಿಗಳು ಇವುಗಳ ಕೈಯಲ್ಲಿ ಕಚ್ಚಿಸಿಕೊಂಡು ಕಾಟ ಪಡುವ ಸ್ಥಿತಿ ಇದೆ.
ಯಳಂದೂರು ತಾಲೂಕು ಕೇಂದ್ರದ ರಾಷ್ಟ್ರೀಯ ಹೆದ್ದಾರಿ 209ರ ಸಮೀಪವಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಪರಿವೀಕ್ಷಣಾ ಮಂದಿರದ ಇದೆ. ಇಲ್ಲಿ ಸಾಮಾನ್ಯ ಹಾಗೂ ವಿಐಪಿಗಳು ಉಳಿದು ಕೊಳ್ಳಲು ಎರಡು ಕಟ್ಟಡಗಳಿವೆ. ಆದರೆ, ಕಟ್ಟಡಗಳ ನಿರ್ವಹಣೆಗಾಗಿ ಸರಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಆ ಅನುದಾನವು ಸರಿಯಾಗಿ ಕಟ್ಟಡಕ್ಕೆ ಉಪಯೋಗಿಸದೆ ಇರುವುದಿರಂದ ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಇದರಿಂದ ಅಧಿಕಾರಿ ಹಾಗೂ ಸಾರ್ವಜನಿಕರ ವರ್ಗ ಇಲ್ಲಿಗೆ ಬರಲು ತಾತ್ಸಾರ ತೋರುತ್ತಿದ್ದಾರೆ.
ಬಿಡುಗಡೆಯಾದ ಅನುದಾನ: 2014-15ನೇ ಸಾಲಿನಲ್ಲಿ ಶೌಚಗೃಹ ಹಾಗೂ ಕಟ್ಟಡ ನವೀಕರಣ ಮಾರ್ಪಾಡು ದುರಸ್ತಿಗೆ 50,965 ರೂ., 2015-16ನೇ ಸಾಲಿನಲ್ಲಿ ಪರಿವೀಕ್ಷಣಾ ಮಂದಿರ ದುರಸ್ತಿ ಕಾಮಗಾರಿಗೆ 1,99,458 ರೂ. ಹಾಗೂ ಶೌಚಗೃಹ ನವೀಕರಣ ಮಾರ್ಪಾಡು, ಕಟ್ಟಡ ದುರಸ್ತಿಗೆ 28,0517 ರೂ., 2016-17ರಂದು ಪ್ರವಾಸಿ ಮಂದಿರ ಆವರಣದಲ್ಲಿರುವ ಕಾಂಪೌಂಡ್ ಹಾಗೂ ಇತರೆ ದುರಸ್ತಿ ಕಾಮಗಾರಿಗೆ 3,37,650 ರೂ. ಹಾಗೂ ಪೀಠೊಪಕರಣಗಳ ಹಾಗೂ ಇತರೆ ಸಾಮಾಗ್ರಿಗಳ ಸರಬರಾಜು ಕಾಮಗಾರಿಗೆ 80,019 ರೂ. ಖರ್ಚು ಮಾಡಲಾಗಿದೆ. ಸರ್ಕಾರದ ಹಣವು ನೀರಿನಂತೆ ಖರ್ಚಾಗಿದ್ದರೂ ಸಹ ಕಟ್ಟಡವು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಸೌಲಭ್ಯ ವಂಚಿತ ಪ್ರವಾಸಿ ಮಂದಿರ: ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅತಿಥಿಗಳ ವಿಶ್ರಾಂತಿಗೆ ಅಸ್ವತ್ಛತೆ, ಸೊಳ್ಳೆಗಳ ಕಾಟ ಭಂಗ ತರುತ್ತವೆ. ಸಾಕಷ್ಟು ಪಿಠೊಪಕರಣಗಳ ಕೊರತೆ ಇದೆ. ಅಡುಗೆೆ ತಯಾರಿಸುವ ಕೊಣೆಯೇ ಇಲ್ಲ, ಮಳೆಗಾಲದಲ್ಲಿ ಮಳೆ ನೀರಿನಿಂದ ಕೊಠಡಿಗಳು ಸೋರುತ್ತವೆ. ಬಿಸಿ ನೀರಿಗಾಗಿ ಕಟ್ಟಡದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್‌ಗಳು ಹಾಕಿದ್ದರೂ ಬಿಸಿ ನೀರು ದೊರೆಯುವುದಿಲ್ಲ. ವಿದ್ಯುತ್ ಕೈ ಕೊಟ್ಟರೆ ಯುಪಿಎಸ್ ಕೂಡ ಇಲ್ಲ. ಶೌಚಗೃಹದ ಪಿಟ್ ಗುಂಡಿಗಳು ತುಂಬಿವೆ. ಇದರಿಂದ ಇಡೀ ಪರಿಸರ ದುರ್ವಾಸನೆ ಬೀರುತ್ತದೆ. ಹೀಗೆ ಹಲವು ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿವೆ. ಅವ್ಯವಸ್ಥೆಗಳ ಆಗರವಾಗಿರುವ ಇದರ ಬಗ್ಗೆ ಅರಿವು ಇರುವವರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ.
ಇಲ್ಲಿನ ಅವ್ಯವಸ್ಥೆಗಳು ಗೊತ್ತಿಲ್ಲದ ಪ್ರವಾಸಿಗರು ಬಂದು ಸೌಲಭ್ಯ ವಂಚಿತ ಪ್ರವಾಸಿ ಮಂದಿರಕ್ಕೆ ಹಿಡಿಶಾಪ ಹಾಕಿ ಹೋಗುತ್ತಾರೆ. ಇದರ ಮುಂಭಾಗ ಉದ್ಯಾನವನವೂ ಇದ್ದು, ಇದರಲ್ಲಿ ಹುಲ್ಲು, ಕಳೆ ಸಸ್ಯಗಳು ಬೆಳೆದಿದ್ದು, ಇದರ ಅಭಿವೃದ್ಧಿಯೂ ಮರೀಚಿಕೆಯಾಗಿದೆ. ಸುತ್ತಲೂ ಕಳೆ ಸಸ್ಯಗಳಿದ್ದು, ರಾತ್ರಿ ವೇಳೆ ಹಾವು ಸೇರಿದಂತೆ ವಿಷಜಂತುಗಳು ಇಲ್ಲೇ ಓಡಾಡುವುದರಿಂದ ರಾತ್ರಿ ವೇಳೆ ಬರಲು ಭಯಪಡುವ ಸ್ಥಿತಿ ಇದೆ ಎಂದು ಪರಶಿವಮೂರ್ತಿ, ಸಿದ್ದರಾಜು, ರಾಜಣ್ಣ ಸೇರಿದಂತೆ ಹಲವರ ಆರೋಪಿಸಿದ್ದಾರೆ.
ಸುಣ್ಣ ಬಣ್ಣ ಬಳಿದಿಲ್ಲ: ಕಟ್ಟಡಕ್ಕೆ ಹಲವು ವರ್ಷಗಳಿಂದ ಸುಣ್ಣ ಬಣ್ಣ ಇಲ್ಲದೇ ಇರುವುದರಿಂದ ಗೋಡೆಗಳಲ್ಲಿ ಗಾರೆಗಳು ಉದುರುತ್ತಿದೆ. ಇದರಿಂದ ಮಳೆ ಸಮಯದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಕಟ್ಟಡ ಕಳೆಗುಂದಿದೆ. ಕಟ್ಟಡ ಮತ್ತಷ್ಟು ಶಿಥಿಲ ಹಂತ ತಲುಪುವ ಸಾಧ್ಯತೆಯೂ ಇದೆ. ಯಳಂದೂರು ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಾಲಯ ಇಲ್ಲ. ಕೊಳ್ಳೇಗಾಲದಲ್ಲಿ ಕಚೇರಿ ಇದ್ದು, ಇವರು ಹೆಚ್ಚಿನ ಆದ್ಯತೆ ಈ ಭಾಗಕ್ಕೆ ನೀಡುವುದರಿಂದ ಈ ಕಟ್ಟಡ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ.
ಪಟ್ಟಣದಲ್ಲಿರುವ ಪ್ರವಾಸಿ ಪರಿವೀಕ್ಷಣಾ ಮಂದಿರದ ಕಟ್ಟಡದಲ್ಲಿ ಸೋಲಾರ್ ಸರಿಪಡಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಶೌಚಗೃಹ, ಕಟ್ಟಡದಲ್ಲಿ ನೀರು ಸೋರಿಕೆ, ಸುತ್ತಮುತ್ತಲಿನ ಪರಿಸರದ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಎಇಇ ಅವರಿಗೆ ಮಾಹಿತಿ ನೀಡಿ, ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ನೀಗಿಸಲು ಕ್ರಮ ವಹಿಸಲಾಗುವುದು.
-ರಾಜು, ಜೆ ಇ, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ
* ಫೈರೋಜ್‌ಖಾನ್