ನೆಲಮಂಗಲ: ತಾಲೂಕಿನ 65 ಖಾಸಗಿ ಆಸ್ಪತ್ರೆಗಳು ಬೆಳಗ್ಗೆ 6 ಗಂಟೆಯಿಂದ ಒಪಿಡಿ ಬಂದ್ ಮಾಡಿದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ವೈದ್ಯರಿಲ್ಲದೆ ಪರದಾಡಿದರು. ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆ 12ಗಂಟೆಯ ವೇಳೆಗೆ 8 ವೈದ್ಯರಲ್ಲಿ 7 ವೈದ್ಯರ ಕೊಠಡಿಗಳು ಲಾಕ್ ಮಾಡಲಾಗಿತ್ತು. ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು, ಮಧ್ಯಾಹ್ನ 3 ಗಂಟೆಯವರೆಗೂ ಯಾವ ವೈದ್ಯರು ಪತ್ತೆಯಿಲ್ಲದ ಕಾರಣ, ಬಂದ್ ಹಿನ್ನಲೆ ರಜೆ ಹಾಕಿದ್ದಾರೆ ಎಂದು ರೋಗಿಗಳು ವಾಪಸ್ಸು ತೆರಳಿದರು.
ರಾಜ್ಯಾಧ್ಯಂತ ಒಪಿಡಿ ಬಂದ್ ಎಂಬುದಾಗಿ ಗುರುವಾರವೇ ತಿಳಿದು ಮೇಲಾಧಿಕಾರಿಗಳು ರಜೆ ಹಾಕದಂತೆ ಸೂಚಿಸಿದ್ದರೂ, ಆಸ್ಪತ್ರೆಯಲ್ಲಿ ವೈದ್ಯರ ಕೊಠಡಿ ಮಾತ್ರ ಖಾಲಿಖಾಲಿಯಾಗಿದ್ದವು. ವೈದ್ಯರ ಬರುವಿಕೆಗಾಗಿ ಶಾಲೆಯ ಮಕ್ಕಳು ಜ್ವರ ಹಾಗೂ ವಿಪರೀತ ಸುಸ್ತುನಿಂದ ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ನೆಲದಲ್ಲಿ ಕುಳಿತು ವೈದ್ಯರಿಗಾಗಿ ಕಾದು ಕುಳಿತಿದ್ದರು.
ಬಾಗಿಲಿಗೆ ಬೀಗ: ತಾಲೂಕು ಸರಕಾರಿ ಆಸ್ಪತ್ರೆಯ 4 ಮುಖ್ಯ ಪ್ರವೇಶದ್ವಾರಗಳು ಶುಕ್ರವಾರ ಹೊರರೋಗಿಗಳಿಗಾಗಿ ಸೀಮಿತವಿರುವ 2 ಮುಖ್ಯದ್ವಾರಗಳನ್ನು ಮುಚ್ಚವ ಮೂಲಕ ಕೇವಲ ಒಳರೋಗಿಗಳ ಪ್ರವೇಶದ್ವಾರ ಹಾಗೂ ತುರ್ತು ವಿಭಾಗದ ಬಾಗಿಲುಗಳು ತೆರೆಯಲಾಗಿತ್ತು.
ಆಸ್ಪತ್ರೆಯೇ ಖಾಲಿ ಖಾಲಿ: ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೂ ವೈದ್ಯರಿಲ್ಲದಿರುವುದನ್ನು ಕಂಡ ನೂರಾರು ರೋಗಿಗಳು ಮನೆಗಳಿಗೆ ಹಿಂತಿರುಗಿದರೇ, 3ಗಂಟೆಯ ನಂತರ ಹೊರರೋಗಿಗಳಿಲ್ಲದೆ ಆಸ್ಪತ್ರೆ ಖಾಲಿಖಾಲಿಯಾಗಿತ್ತು, ಆದರೆ ಆ ಸಮಯದಲ್ಲಿ ಕೆಲವು ವೈದ್ಯರು ಹಾಜರಾಗಿದ್ದರು.
ಮುಖ್ಯ ವೈದ್ಯಾಧಿಕಾರಿ ನರಸಿಂಹಯ್ಯ ಪ್ರತಿಕ್ರಿಯಿಸಿ ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರು ಇರುವಚಂತೆ ತಿಳಿಸಲಾಗಿದೆ, ವೀರಾಪುರದಲ್ಲಿ ಸಿಎಂ ಕಾರ್ಯಕ್ರಮವಿರುವುದರಿಂದ ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ ಎಂದು ದೂರಾವಣಿಯ ಮೂಲಕ ತಿಳಿಸಿದರು. ಚಿಕಿತ್ಸೆಗೆ ಬಂದಿದ್ದ ಮಹಿಳೆ ಲಕ್ಷ್ಮಮ್ಮ ಪ್ರತಿಕ್ರಿಯಿಸಿ ಬೆಳಗ್ಗೆಯೇ ಆಸ್ಪತ್ರೆಗೆ ಬಂದರೆ ವೈದ್ಯರ ಮುಷ್ಕರ ಯಾರು ಬರುವುದಿಲ್ಲ ಎಂದರು.
ಸರಕಾರಿ ಆಸ್ಪತ್ರೆಗೆ ಬಂದೆ ಇಲ್ಲಿಯೂ ಯಾವ ವೈದ್ಯರು ಇಲ್ಲ, ನನಗೆ ಬಂದ್ ವಿಚಾರ ಮೊದಲೇ ತಿಳಿದಿದ್ದರೇ ಬರುತ್ತಿರಲಿಲ್ಲ ಎಂದರು. ತಾಲೂಕು ಆರೋಗ್ಯಾಧಿಕಾರಿ ಹರೀಶ್ ಪ್ರತಿಕ್ರಿಯಿಸಿ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ರಜೆ ಹಾಕದಂತೆ ತಿಳಿಸಲಾಗಿತ್ತು, ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹಾಜರಾಗಿಲ್ಲದ ಬಗ್ಗೆ ಮಾಹಿತಿ ಇಲ್ಲ, ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದರು.