ಬೆಂಗಳೂರು: ಅರ್ಚಕರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ದೇವರ ಮೇಲಿದ್ದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಕತ್ರಿಗುಪ್ಪೆಯ ಶ್ರೀನಿವಾಸನಗರದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಅರ್ಚಕ ಮಂಜುನಾಥ್ ದೇವಾಲಯದ ಬಾಗಿಲು ತೆರೆದು ಪೂಜೆಗೆ ನೀರು ತರಲು ಹೊರಗಡೆ ಹೋಗಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ಬಂದಿದ್ದನ್ನು ಗಮನಿಸಿದ ಮಂಜುನಾಥ್, ಭಕ್ತರೆಂದು ಭಾವಿಸಿದ್ದರು.
ಕಲ್ಯಾಣಿಯಲ್ಲಿ ನೀರು ತೆಗೆದುಕೊಂಡು ವಾಪಸ್ ಬರುವಾಗ ಅಪರಿಚಿತ ವ್ಯಕ್ತಿಗಳು ದೇವಾಲಯದ ಆವರಣದಲ್ಲಿ ಗಾಬರಿಯಿಂದ ಓಡಾಡುತ್ತಿದ್ದರು. ಇದರಿಂದ ಅನುಮಾನಗೊಂಡು ಅರ್ಚಕ ಮಂಜುನಾಥ್ ಪ್ರಶ್ನಿಸಿದ್ದಾರೆ. ಈ ವೇಳೆ ಖಾರದ ಪುಡಿ ಎರಚಿದ್ದಾರೆ. ಕೂಡಲೇ ಮಂಜುನಾಥ್ ಚೀರಾಡಿದ್ದರಿಂದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.
ಅಷ್ಟರಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಕಣ್ಣು ತೊಳೆದು ಕೊಂಡು ದೇವಾಲಯದ ಗರ್ಭಗುಡಿಗೆ ಹೋಗಿ ನೋಡಿದಾಗ ದೇವಿಯ ಮೇಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರ ದರೋಡೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯದ ಬಗ್ಗೆ ಪರಿಚಯ ಇದ್ದವರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ದೇವಸ್ಥಾನದ ಬಳಿ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೂಂದೆಡೆ ದೇವಾಲಯಕ್ಕೆ ಇಬ್ಬರು ಅರ್ಚಕರನ್ನು ನೇಮಿಸಲಾಗಿದ್ದು, ಇಬ್ಬರ ನಡುವೆ ಆಗಾಗ್ಗ ಜಗಳವಾಗುತ್ತಿರುವುದು ತಿಳಿದು ಬಂದಿದೆ. ಈ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದೆ. ಅಲ್ಲದೇ ಹಲ್ಲೆಗೊಳಗಾದ ಅರ್ಚಕ ಮಂಜುನಾಥ್ ಇದೇ ಮೊದಲ ಬಾರಿಗೆ ಆರೋಪಿಗಳನ್ನು ನೋಡಿದ್ದಾಗಿ ಹೇಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.