Advertisement

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

01:23 AM Jan 10, 2025 | Team Udayavani |

ವಿಟ್ಲ : ಬೋಳಂತೂರಿನ ಸುಲೈಮಾನ್‌ ಹಾಜಿ ಮನೆಯಿಂದ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಅಪಾರ ನಗದು ದೋಚಿದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ದರೋಡೆ ಕೋರರು ಬಳಸಿದ್ದ ಎರ್ಟಿಗಾ ಕಾರಿನ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಆರೋಪಿಗಳು ವ್ಯವಸ್ಥಿತವಾಗಿ ವಿದೇಶಕ್ಕೆ ಪರಾರಿಯಾಗಿರಬಹುದೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Advertisement

ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಸದ್ಯಕ್ಕೆ ಊಹಾಪೋಹಗಳು ಹರಡುತ್ತಿದ್ದು, ಖಚಿತ ಮಾಹಿತಿ ಸಿಕ್ಕಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಸುಳಿವು ಸಿಕ್ಕಿದಾಗ ತಿಳಿಸುತ್ತೇವೆ. ಯತೀಶ್‌ ಎನ್‌.,
ಪೊಲೀಸ್‌ ವರಿಷ್ಠಾಧಿಕಾರಿ

ಕೇರಳದಿಂದ ಮರಳಿದ ಪೊಲೀಸರ ತಂಡ
ಬಂಟ್ವಾಳ:ಕೆಲವು ದಿನಗಳಿಂದ ಕೇರಳದಲ್ಲಿ ಬೀಡುಬಿಟ್ಟಿದ್ದ ಪೊಲೀಸರ ತಂಡ ಜಿಲ್ಲೆಗೆ ಮರಳಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಬಂಟ್ವಾಳ ಡಿವೈಎಸ್‌ಪಿ ಕಚೇರಿಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಮುಂದಿನ ತನಿಖೆ ಕುರಿತು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಎಸ್‌ಪಿ ಯತೀಶ್‌ ಎನ್‌. ಅವರು ಜ. 8ರಂದು ಬಂಟ್ವಾಳ ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿ ಡಿವೈಎಸ್‌ಪಿ ಎಸ್‌.ವಿಜಯಪ್ರಸಾದ್‌ ಸಹಿತ ತನಿಖಾ ತಂಡದ ಇನ್‌ಸ್ಪೆಕ್ಟರ್‌, ಪಿಎಸ್‌ಐಗಳ ಜತೆಗೆ ಸರಣಿ ಮಾತುಕತೆ ನಡೆಸಿದ್ದಾರೆ. ಕೇರಳ ಭಾಗದಿಂದ ಸಂಗ್ರಹಿಸಿಕೊಂಡು ಬಂದಿರುವ ಮಾಹಿತಿಗಳ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.

ಹೊರ ರಾಜ್ಯದಲ್ಲಿ ತನಿಖೆ ನಡೆಸಿ ಮರಳಿರುವ ತಂಡಕ್ಕೆ ಮಹತ್ವದ ಸುಳಿವುಗಳು ಸಿಕ್ಕಿರುವ ಸಾಧ್ಯತೆಗಳೂ ಇದ್ದು, ಆರೋಪಿಗಳಿಗೆ ಅನುಕೂಲವಾಗಬಾರದು ಎಂಬ ನಿಟ್ಟಿನಲ್ಲಿ ಗೌಪ್ಯತೆ ಕಾಪಾಡಿಕೊಂಡಿರುವ ಸಾಧ್ಯತೆ ಇದೆ. ಪ್ರಕರಣವನ್ನು ಶೀಘ್ರದಲ್ಲೇ ಭೇದಿಸುವ ವಿಶ್ವಾಸವನ್ನು ಪೊಲೀಸ್‌ ಇಲಾಖೆ ವ್ಯಕ್ತಪಡಿಸುತ್ತಿರುವುದನ್ನು ಗಮನಿಸುವಾಗ ಸುಳಿವು ಸಿಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ರಮಾನಾಥ ರೈ ಭೇಟಿ
ಸುಲೈಮಾನ್‌ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದುಕೊಂಡರು. ಜತೆಗೆ ರಾಜ್ಯ ಗೃಹ ಸಚಿವರು, ಪಶ್ಚಿಮ ವಲಯ ಐಜಿಪಿ ಹಾಗೂ ಎಸ್‌ಪಿ ಜತೆಗೆ ದೂರವಾಣಿ ಮೂಲಕ ಮಾತನಾಡಿ, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next