Advertisement

Ayodhya: 75 ಕಲಾವಿದರ ಕುಂಚದಲ್ಲಿ ಅರಳಲಿದೆ ಶ್ರೀರಾಮನ ವ್ಯಕ್ತಿತ್ವ

08:19 PM Aug 20, 2023 | Team Udayavani |

ಅಯೋಧ್ಯೆ: ಆನೇಕ ದಶಕಗಳ ಕಾತರದ ನಂತರ ಉತ್ತರ ಪ್ರದೇಶದಲ್ಲಿರುವ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಇದೇ ವೇಳೆ ರಾಮಮಂದಿರದ ಆವರಣದಲ್ಲಿ ಶ್ರೀರಾಮನ ಮಾನವೀಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಚಿತ್ರಗಳು 75 ಪ್ರಖ್ಯಾತ ಕಲಾವಿದರ ಕುಂಚದಲ್ಲಿ ಅರಳಲಿವೆ.

Advertisement

“ರಾಮ್‌: ದಿ ಮ್ಯಾನ್‌ ಆ್ಯಂಡ್‌ ದಿ ಐಡಿಯಾ” ಥೀಮ್‌ ಅಡಿಯಲ್ಲಿ ರಾಮಮಂದಿರದ ಆವರಣದಲ್ಲಿ ಡಿಸೆಂಬರ್‌ ಎರಡನೇ ವಾರದಲ್ಲಿ 75 ಕಲಾವಿದರು ಚಿತ್ರಗಳನ್ನು ರಚಿಸಲಿದ್ದಾರೆ. ಇದಕ್ಕಾಗಿ ಸುಮಾರು ಎರಡು ವಾರಗಳು ಬೇಕಾಗಲಿದೆ. ಮುಂದಿನ ವರ್ಷ ಜನವರಿಯ ಸಂಕ್ರಾಂತಿಯಂದು ರಾಮ ಮಂದಿರ ಉದ್ಘಾಟನೆ ವೇಳೆಗೆ ಈ ಚಿತ್ರಗಳು ಸಿದ್ಧವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಇವುಗಳನ್ನು ಅನಾವರಣಗೊಳಿಸಲಿದ್ದಾರೆ’ ಎಂದು ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ವಿ.ನಾಗದಾಸ್‌ ತಿಳಿಸಿದ್ದಾರೆ.

ಖ್ಯಾತ ಕಲಾವಿದರಿಂದ ರಚನೆ:
“ಲಲಿತಾ ಕಲಾ ಅಕಾಡೆಮಿ ವತಿಯಿಂದ ಅಯೋಧ್ಯೆಯಲ್ಲಿ ದೊಡ್ಡ ಸಮಾರಂಭ ಏರ್ಪಡಿಸಲು ಯೋಜಿಸಿದ್ದೇವೆ. ಶ್ರೀರಾಮನ ಕುರಿತು ಖ್ಯಾತ ಕಲಾವಿದರಾದ ವಸುದೇವ್‌ ಕಾಮತ್‌, ಧಮೇಂದ್ರ ರಾಥೋಡ್‌, ಅದ್ವೆ„ತ್‌ ಗದಾನಾಯಕ್‌, ಹರ್ಷವರ್ಧನ್‌ ಶರ್ಮಾ ಸೇರಿದಂತೆ ಹಲವು ಕಲಾವಿದರು ರಚಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ರಾಮಾಯಣದ ಆದರ್ಶಗಳ ಪ್ರಚಾರ:
“ದಶಕಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಗಳ ಸಾಕ್ಷಾತ್ಕಾರವಾಗಿದೆ. ರಾಮಾಯಣದ ಆದರ್ಶಗಳ ಮೂಲಕ ಪ್ರೀತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಮಾಜದಲ್ಲಿ ಪ್ರಚುರಪಡಿಸುವುದು ಈ ಪ್ರದರ್ಶನದ ಗುರಿಯಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷರು ಹೇಳಿದ್ದಾರೆ.

“ಪ್ರದರ್ಶನದ ನಂತರ ಅರ್ಧದಷ್ಟು ಚಿತ್ರಗಳು ಅಕಾಡೆಮಿಯ ಶಾಶ್ವತ ಸಂಗ್ರಹದಲ್ಲಿ ಉಳಿಯಲಿದೆ. ಆಯ್ದ ಚಿತ್ರಗಳು ರಾಮಮಂದಿರ ಆವರಣದಲ್ಲಿ ಪ್ರದರ್ಶನವಾಗಲಿವೆ. ಕಲಾವಿದರ ಅಂತಿಮ ಪಟ್ಟಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗವುದು,’ ಎಂದು ವಿ.ನಾಗದಾಸ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next