ಬೆಂಗಳೂರು: ಚಿತ್ರಕಲೆ ಎನ್ನುವುದು ಒಂದು ರೀತಿಯ ಧ್ಯಾನ. ಯಾವುದೇ ಒಂದು ಚಿತ್ರವನ್ನು ರಚಿಸುವಾಗ ಅಥವಾ ಆ ಕಲೆಯನ್ನು ವೀಕ್ಷಿಸುವಾಗ ನಮ್ಮದೇ ಆದಂತಹ ಯೋಚನೆಗೆ ಜಾರುತ್ತೇವೆ. ಚಿತ್ರಗಳಲ್ಲಿ ಭಾವನಾತ್ಮಕತೆ ಜೀವಂತವಾಗಿರುತ್ತದೆ ಎಂದು ಕಲಾ ಇತಿಹಾಸಕಾರರಾದ ಪ್ರೊ| ಚೂಡಮಣಿ ನಂದಗೋಪಾಲ್ ಅಭಿಪ್ರಾಯಪಟ್ಟರು.
ಉಡುಪಿಯ ಆರ್ಟಿಸ್ಟ್ ಫೋರಂನಿಂದ ನಗರದ ದ್ವಿಜ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ “ಆನ್ ಆರ್ಟ್ ಫ್ಯೂಷನ್’ ಶೇರ್ಷಿಕೆಯ ಉಡುಪಿಯ ಆರ್ಟಿಸ್ಟ್ ಫೋರಂನ ಸದಸ್ಯರ ಚಿತ್ರಕಲಾಕೃತಿಗಳ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಆರ್ಟಿಸ್ಟ್ ಫೋರಂನ ಮುಖ್ಯಸ್ಥರಮೇಶ್ ರಾವ್ ಮಾತನಾಡಿ, ಯಾವುದೇ ಒಂದು ಚಿತ್ರವನ್ನು ಅಭಿವೃದ್ಧಿಪಡಿಸಬೇಕೆಂದರೆ ಕ್ರಿಯಾಶೀಲತೆಯೂ ಪ್ರಮುಖ ಪಾತ್ರವಹಿಸುತ್ತದೆ. ಸೌಂದರ್ಯವು ಕಲೆಯ ಒಂದು ಭಾಗ. ಮೆದುಳು ಕ್ರಿಯಾಶೀಲತೆಯಾಗಿದ್ದರೆ, ಹೃದಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಕಲೆಗೆ ಕ್ರಿಯಾಶೀಲತೆ ಮತ್ತು ಸೌಂದರ್ಯ ಎರಡೂ ಮುಖ್ಯ ಎಂದರು. ಕಾರಣಾಂತರಗಳಿಂದ ಕಾರ್ಯ ಕ್ರಮಕ್ಕೆ ಗೈರುಹಾಜರಾಗಿದ್ದ ಮೇಘಾಲಯದ ರಾಜ್ಯಪಾಲರು ಸಿ.ಎಚ್. ವಿಜಯಶಂಕರ್ ಅವರು ಚಿತ್ರಕಲಾ ಪ್ರದರ್ಶನಕ್ಕೆ ಮತ್ತು ಕಲಾವಿದರಿಗೆ ಸಂದೇಶದ ಮೂಲಕ ಅಭಿನಂದಿಸಿದರು. ಡಿ. 14ರಂದು ವಿಜಯಶಂಕರ್ ಈ ಪ್ರದರ್ಶನಕ್ಕೆ ಅವರು ಆಗಮಿಸಲಿದ್ದಾರೆ ಎಂದು ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ತಿಳಿಸಿದರು.
ಕಲಾವಿದರಾದ ಚಿತ್ರಕಲಾವಿದ ಯು. ಭಾಸ್ಕರ್ ರಾವ್, ಎಚ್.ಕೆ. ರಾಮಚಂದ್ರ, ಜನಾರ್ದನ ಹಾವಂಜೆ, ಪವನ್ ಅತ್ತಾವರ, ನಾಗರಾಜ ಹನೇಹಳ್ಳಿ, ಶಿವ ಹಾದಿಮನಿ, ಸಿಂಧು ಕಾಮತ್, ಸಪ್ನ ನರೋನ್ಹಾ, ಕುರ್ಶಿದ್ ಯಾಕುಬ್, ಸಂತೋಷ್ ಪೈ, ಶರತ್ ಪಲಿಮಾರ್, ಸಿತಾರ ರಾವ್ ಮೊದಲಾದವರಿದ್ದರು.
ಉಡುಪಿಯ ಆರ್ಟಿಸ್ಟ್ ಫೋರಂನ 14 ಸದಸ್ಯರು ರಚಿಸಿರುವ 42 ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದ್ದು, ಡಿ. 15ರ ವರೆಗೆ ಇರಲಿದೆ.