ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದು ಕಮಿಷನ್ ಪಡೆಯುವ ಸರ್ಕಾರವಲ್ಲ ಎನ್ನುತ್ತಿದ್ದಾರೆ. ಆದರೆ ದುಬಾರಿ ವಾಚ್‌ನಿಂದ ಹಿಡಿದು ಇತ್ತೀಚಿನ ಭ್ರಷ್ಟಾಚಾರಗಳ ಬಗ್ಗೆ ಒಂದು ಕೊಠಡಿ ಭರ್ತಿಯಾಗುವಷ್ಟು ದಾಖಲೆಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದು 10 ಪರ್ಸೆಂಟ್ ಸರ್ಕಾರ ಎನ್ನಲು ಪುರಾವೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅರ್ಕಾವತಿ ಬಡಾವಣೆ ಅಕ್ರಮ, ಮರಳು ದಂಧೆ, ಉಕ್ಕಿನ ಸೇತುವೆ, ಕಲ್ಲಿದ್ದಲು ಪೂರೈಕೆ ಒಪ್ಪಂದ, ಗೋವಿಂದರಾಜು ಡೈರಿ, ವೈಟ್ ಟಾಪಿಂಗ್ ಯೋಜನೆ ಅಕ್ರಮವನ್ನು ಸಿದ್ದರಾಮಯ್ಯ ಮರೆತಿರಬಹುದು. ಆದರೆ ಜನತೆ ಮರೆತಿಲ್ಲ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದು ಅಲ್ಲ, ಜೈನರೆಂದು ಸಿದ್ದರಾಮಯ್ಯ ಅವರು ಟೀಕಿಸಿರುವುದು ದುರದೃಷ್ಟಕರ. ಅಮಿತ್ ಶಾ ಅವರು ಸನಾತನ ಹಿಂದು. ಸಿದ್ದರಾಮಯ್ಯ ಅವರ ಹೇಳಿಕೆಯು ಅವರ ಒಡೆದು ಆಳುವ ನೀತಿಯನ್ನು ತೋರಿಸುತ್ತದೆ.
ಅಮಿತ್ ಶಾ ಅವರು ತಮ್ಮ ಪ್ರವಾಸದ ವೇಳೆ ಕೃಷಿಕರು ಸೇರಿದಂತೆ ನಾನಾ ಸಮುದಾಯಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಹೆದರಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಯಾತ್ರೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ಮೊದಲೇ ಫಲಿತಾಂಶ ಗೊತ್ತದಂತಾಗಿದೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಅವರ ಪಕ್ಷದವರೇ ಷಡ್ಯಂತ್ರ ನಡೆಸಿ ಸೋಲಿಸಿದ್ದರು. ಸಿದ್ದರಾಮಯ್ಯನವರಿಗೆ ಈಗ ಅದೇ ಚಿಂತೆ ಕಾಡುತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಮೂಲೆಗುಂಪಾಗಲಿದೆ ಎಂದು ಹೇಳಿದರು.