ಬೆಂಗಳೂರು: ಗುತ್ತಿಗೆ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಯಾಗದ ಪರಿಣಾಮ ಹಲವಾರು ಕಡೆಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಹಾಗೂ ಅವರಿಗೆ ನೇರವಾಗಿ ವೇತನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಭರವಸೆಗಳು ಹುಸಿಯಾಗಿದ್ದು, ಹಲವು ತಿಂಗಳುಗಳಿಂದ ವೇತನವನ್ನೂ ನೀಡಿದೆ ಪೌರಕಾರ್ಮಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.
ಪೌರಕಾರ್ಮಿಕರ ಸಂಖ್ಯೆ ಕಡಿತಗೊಳಿಸುವ ಪಾಲಿಕೆಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯಾ ವಾರ್ಡ್‌ಗಳಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಪೌರಕಾರ್ಮಿಕರನ್ನು ನೇಮಿಸುವ ಬಗ್ಗೆ ಆಯುಕ್ತರು ಈ ಹಿಂದೆ ಹೇಳಿದ್ದರು. ಆದರೀಗ 700 ಜನರಿಗೆ ಒಬ್ಬರು ಕಾರ್ಮಿಕರು ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಕೊಂಡಿದ್ದು, ಬಯೋಮೆಟ್ರಿಕ್ ಆಧಾರದ ಮೇಲೆ ಪಾಲಿಕೆಯಲ್ಲಿ 17,290 ಕಾರ್ಮಿಕರ ಕೆಲಸ ಮಾಡುತ್ತಿದ್ದಾರೆ.
ಆದರೆ, ಕಳೆದ ಎರಡು ಮೂರು ತಿಂಗಳಿಂದ ಅವರಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಈ ಹಿಂದಿಗಿಂತಲೂ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಹಣವನ್ನು ಮೀಸಲಿರಿಸಿದರೂ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗಿರುವುದೇಕೆ ಎಂದು ಪ್ರಶ್ನಿಸಿದರು.
ಕೋಟ್ಯಂತರ ರೂ. ದಂಡ ಪಾವತಿ: ಗುತ್ತಿಗೆ ಪೌರಕಾರ್ಮಿಕರ ಇಎಸ್‌ಐ ಹಾಗೂ ಪಿಎಫ್ ಖಾತೆಗಳಿಗೆ ಪಾಲಿಕೆಯಿಂದ ಸಕಾಲಕ್ಕೆ ವಂತಿಗೆಯನ್ನು ಪಾವತಿಸುತ್ತಿಲ್ಲ. ಇದರಿಂದಾಗಿ ಶೇ.12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತಿದೆ. ಪ್ರತಿ ಕಾರ್ಮಿಕರಿಗೆ 962 ರೂ. ಇಎಸ್‌ಐ ಹಾಗೂ 3725 ರೂ. ಪಿಎಫ್ ಪಾವತಿಸಬೇಕು.
ಅದರಂತೆ ಒಟ್ಟು 17,699 ಪೌರಕಾರ್ಮಿಕರಿಗೆ ವಾರ್ಷಿಕ 8.28 ಕೋಟಿ ರೂ. ಪಾವತಿಸಬೇಕು. ಆದರೆ, ಪಾಲಿಕೆಯಿಂದ ತಡವಾಗಿ ಪಾವತಿಸುತ್ತಿರುವುದರಿಂದ 1.82 ಕೋಟಿ ರೂ. ದಂಡ ಪಾವತಿಸಲಾಗುತ್ತಿದೆ. ಆದರೂ, ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.