Advertisement

ಮಾರ್ಗ ಒಂದೇ, ಬೇಡಿಕೆಗಳು ಮಾತ್ರ ಭಿನ್ನ

12:21 PM Oct 03, 2018 | |

ಬೆಂಗಳೂರು: ಒಂದೇ ಮಾರ್ಗ ಮತ್ತು ಒಂದೇ ಮಾದರಿಯ ರೈಲು ಸೇವೆ. ಆದರೆ, ಅದರಲ್ಲಿ ಪ್ರಯಾಣಿಸುವವರ ಬೇಡಿಕೆಗಳು ಭಿನ್ನ! 

Advertisement

ಒಂದು ವರ್ಗಕ್ಕೆ ರೈಲುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿರಬೇಕು ಹಾಗೂ ಶೌಚಾಲಯಗಳೂ ಬೇಕು. ಮತ್ತೂಂದು ವರ್ಗಕ್ಕೆ ಶೌಚಾಲಯಗಳ ಅಗತ್ಯವಿಲ್ಲ ಹಾಗೂ ನಿಂತು ಪ್ರಯಾಣಿಸಿದರೂ ಚಿಂತೆ ಇಲ್ಲ ವೇಗವಾಗಿ ಹೋಗಬೇಕು. ಈ ಎರಡೂ ವರ್ಗಗಳು ಪ್ರಯಾಣಿಸುವ ಮಾರ್ಗ ಮತ್ತು ರೈಲು ಒಂದೇ ಆಗಿವೆ. ಈ ಇಬ್ಬರ ಬೇಡಿಕೆ ಪೂರೈಸುವುದೇ ರೈಲ್ವೆ ಇಲಾಖೆಗೆ ಸವಾಲಾಗಿದೆ. 

ಯಶವಂತಪುರ, ವೈಟ್‌ಫೀಲ್ಡ್‌ನಿಂದ ಪ್ರಯಾಣಿಸುವವರಿಗೆ ಶೌಚಾಲಯ ಅನಗತ್ಯ ಮತ್ತು ಕಡಿಮೆ ಸೀಟುಗಳ ಸಾಮರ್ಥ್ಯ ಇರುವ ಹೆಚ್ಚು ವೇಗವಾಗಿ ಚಲಿಸುವಂತಹ ರೈಲು ಸೇವೆ ಬೇಕು. ಇದಕ್ಕಾಗಿ “ಮೆಮು’ ರೈಲಿನ ಅಗತ್ಯವಿದೆ. ಅದೇ ರೀತಿ, ಮಾರಿಕುಪ್ಪಂ, ಜೋಲ್ಹಾರಪೇಟೆ ಮತ್ತಿತರ ಕಡೆಗಳಿಂದ ಪ್ರಯಾಣಿಸುವವರು ಬೆಳಗ್ಗೆ 5 ಗಂಟೆಗೆ ರೈಲು ಏರುತ್ತಾರೆ.

ಅವರಿಗಾಗಿ ಶೌಚಾಲಯಗಳು ಇರಬೇಕು ಹಾಗೂ ಸೀಟುಗಳ ಸಾಮರ್ಥ್ಯ ಹೆಚ್ಚಿರಬೇಕು. ಇದು ಸಾಂಪ್ರದಾಯಿಕ ರೈಲುಗಳಿಂದ ಮಾತ್ರ ಸಾಧ್ಯ. ಆದರೆ, ಒಂದೇ ಮಾರ್ಗದಲ್ಲಿ ಇರುವ ಈ ಎರಡೂ ವರ್ಗಕ್ಕೆ ಹೀಗೆ ಎರಡೂ ಪ್ರಕಾರದ ಸೇವೆಗಳನ್ನು ನೀಡಲು ಸಾಧ್ಯವಿಲ್ಲ. ಆದರೆ, ಎರಡೂ ವರ್ಗದ ಪ್ರಯಾಣಿಕರು ಆದಾಯದ ದೃಷ್ಟಿಯಿಂದ ಇಲಾಖೆಗೆ ಅಷ್ಟೇ ಮುಖ್ಯವಾಗಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ವತಃ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ ಅಸಹಾಯಕತೆ ವ್ಯಕ್ತಪಡಿಸಿದರು. “ನೀವು ಹೈಟೆಕ್‌ ಕಾರೊಂದರಲ್ಲಿ ಕುಳಿತು ಪ್ರಯಾಣಿಸುತ್ತಿದ್ದೀರಿ ಅಂದುಕೊಳ್ಳೋಣ. ಆದರೆ, ನಿಮ್ಮ ಮುಂದೆ ಒಂದು ಹಳೇ ಮಾದರಿ ಕಾರು ಚಲಿಸುತ್ತಿರುತ್ತದೆ. ಹಾಗಿದ್ದರೆ, ನಿಮ್ಮ ಕಾರಿನ ವೇಗ ಮುಂದಿರುವ ವಾಹನದ ವೇಗವನ್ನು ಅನುಸರಿಸುತ್ತದೆ.

Advertisement

ಇದೇ ಸಮಸ್ಯೆ ಉದ್ದೇಶಿತ ಬೆಂಗಳೂರು-ಜೋಲ್ಹಾರಪೇಟೆ ಮಾರ್ಗದಲ್ಲೂ ಆಗುತ್ತಿದೆ’ ಎಂದು ಸೂಚ್ಯವಾಗಿ ಉದಾಹರಿಸಿದರು. “ಇಲ್ಲಿ ಎರಡೂ ವರ್ಗದ ಪ್ರಯಾಣಿಕರ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ, ಎರಡೂ ವರ್ಗಕ್ಕೆ ಒಮ್ಮೆಲೆ ಎರಡೂ ಪ್ರಕಾರದ ಸೇವೆ ನೀಡಲು ಸಾಧ್ಯವಿಲ್ಲ’ ಎಂದ ಅವರು,

“ಮುಂಬೈ ಮಾದರಿ ಉಪನಗರ ರೈಲು ಸೇವೆ ಬೆಂಗಳೂರಿನಲ್ಲೂ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಮುಂಬೈ “ಮೆಮು’ ರೈಲುಗಳಲ್ಲಿ ಶೌಚಾಲಯಗಳೇ ಇಲ್ಲ. ಅಲ್ಲಿ ನಿಲ್ದಾಣ ಬರುತ್ತಿದ್ದಂತೆ ಶೌಚಾಲಯಕ್ಕೆ ತೆರಳಿ ಜನ ವಾಪಸಾಗುತ್ತಾರೆ. ಆದರೆ, ನಗರದಲ್ಲಿ “ಮೆಮು’ ರೈಲುಗಳಲ್ಲಿ ಎರಡು ಶೌಚಾಲಯಗಳಿದ್ದರೂ ಈ ಸಂಖ್ಯೆ ಡಬಲ್‌ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ’ ಎಂದು ತಿಳಿಸಿದರು.

ವರ್ಷವಿಡೀ ಸ್ವತ್ಛತೆ ಜಾಗೃತಿ: ಇದಕ್ಕೂ ಮುನ್ನ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ “ಸ್ವತ್ಛ ಹೀ ಸೇವಾ’ (ಸ್ವತ್ಛತೆಯೇ ಸೇವೆ) ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಹದಿನೈದು ದಿನಗಳಲ್ಲಿ ಬೆಂಗಳೂರು ವಿಭಾಗದಿಂದ ವಿವಿಧ ನಿಲ್ದಾಣಗಳಲ್ಲಿ ಶ್ರಮದಾನ, ಜಾಗೃತಿ ನಡೆಸಲಾಗಿದೆ. ಜತೆಗೆ, ಪ್ರಭಾತ್‌ಪೇರಿ, ನಾಟಕ ಪ್ರದರ್ಶನ ನಡೆಸಲಾಯಿತು. ಈ ಅಭಿಯಾನ ಕೇವಲ ಗಾಂಧಿ ಜಯಂತಿಗೆ ಸೀಮಿತವಾಗಿರದೆ, ವರ್ಷವಿಡೀ ಆಚರಿಸಲಾಗುವುದು ಎಂದರು. 

ರೈಲು ಮತ್ತು ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ವಿರುದ್ಧ ಸುಮಾರು 600 ಪ್ರಕರಣಗಳನ್ನು ದಾಖಲಿಸಿಕೊಂಡು, 1.50 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಕ್ಸೇನಾ ತಿಳಿಸಿದರು. ಇದಕ್ಕೂ ಮುನ್ನ ಗಾಂಧೀಜಿ ಕುರಿತ ಪ್ರಬಂಧ ಸ್ಪರ್ಧೆ, ಅತ್ಯುತ್ತಮ ಘೋಷ ವಾಕ್ಯಗಳು, ಸ್ವತ್ಛತೆ ಮತ್ತಿತರ ವಿಭಗಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next