Advertisement

Shriva: ಸಮಸ್ಯೆ ಪರಿಹಾರವಾಗುವವರೆಗೆ ಕಚೇರಿ ತೆರೆಯಲು ಬಿಡಲ್ಲ!

05:36 PM Jul 30, 2024 | Team Udayavani |

ಶಿರ್ವ: ಕಳೆದ 5-6 ದಿನಗಳಿಂದ ಶಿರ್ವಪದವು, ಇರ್ಮಿಜ್‌, ಕಾಡಿಕಂಬಳ ಪರಿಸರದಲ್ಲಿ ವಿದ್ಯುತ್‌ ಕಡಿತ, ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ ಮತ್ತು ಶಿರ್ವ ಮೆಸ್ಕಾಂ ಕಚೇರಿಯಲ್ಲಿನ ಸಿಬಂದಿ ಕೊರತೆ ಸಮಸ್ಯೆಯನ್ನು ಪ್ರತಿಭಟಿಸಿ ಜು.29ರಂದು ಬೆಳಗ್ಗೆ ಶಿರ್ವ ಮೆಸ್ಕಾಂ ಕಚೇರಿಯಮುಂದೆ ಬಳಕೆದಾರರು ಪ್ರತಿಭಟನೆ ನಡೆಸಿ ವಿದ್ಯುತ್‌ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶಿರ್ವ ಗ್ರಾ.ಪಂ. ಸದಸ್ಯ ಡೋಲ್ಪಿ ಕ್ಯಾಸ್ತಲಿನೋ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ವಿದ್ಯುತ್‌ ಸಮಸ್ಯೆಯಿಂದ ಕೃಷಿಕರು, ಫ್ರಿಡ್ಜ್ನಲ್ಲಿಟ್ಟ ಇನ್ಸುಲಿನ್‌ ತೆಗೆದುಕೊಳ್ಳುವ ರೋಗಿಗಳು, ವಿದ್ಯಾರ್ಥಿಗಳಿಗೆ, ಗೃಹಿಣಿಯರು, ವ್ಯಾಪಾರಸ್ಥರು, ಉದ್ದಿಮೆದಾರರು,ವರ್ಕ್‌ ಫ್ರಂ ಹೋಂ ಮಾಡುತ್ತಿರುವ ಉದ್ಯೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು , ಮೆಸ್ಕಾಂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ.ಸಮಸ್ಯೆ ಪರಿಹಾರವಾಗುವವರೆಗೆ ಮೆಸ್ಕಾಂ ಕಚೇರಿ ತೆರೆಯಲು ಬಿಡುವುದಿಲ್ಲ ಎಂದು ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಉಗ್ರ ಹೋರಾಟ
ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಮಾತನಾಡಿ ಅನಿಯಮಿತವಾಗಿ ವಿದ್ಯುತ್‌ ಕಡಿತವಾಗುತ್ತಿರುವುದರಿಂದ ಬಳಕೆದಾರರು ರೋಸಿ ಹೋಗಿದ್ದು, ಜನರ ತಾಳ್ಮೆಗೂ ಒಂದು ಮಿತಿ ಇದೆ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸಿಬಂದಿ ಸಮಸ್ಯೆ ಸರಿಪಡಿಸಲು ಸೂಚಿಸಿದ್ದರೂ ಕಾರ್ಯಗತಗೊಂಡಿಲ್ಲ.ಪದೇಪದೇ ತಲೆದೋರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು. ಬಳಕೆದಾರರು ಎದುರಿಸುತ್ತಿರುವ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸುವ ವ್ಯವಸ್ಥೆಯಾಗಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನಕಾರರಿಗೆ ಭರವಸೆ
ಉಡುಪಿ ಮೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಸನ್ನ ಕುಮಾರ್‌ ಮೊಬೈಲ್‌ ಮೂಲಕ ಪ್ರತಿಭಟನಕಾರೊಂದಿಗೆ ಮಾತನಾಡಿ, ಸಿಬಂದಿ ಕೊರತೆಯಿಂದ ಸಮಸ್ಯೆ ಉಂಟಾಗಿದ್ದು ಹೆಚ್ಚುವರಿಯಾಗಿ ಸಿಬಂದಿ ಒದಗಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಕಾರರಿಗೆ ಭರವಸೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅರವಿಂದ್‌ ಕೆ.ಮತ್ತು ಶಿರ್ವ ಸೆಕ್ಷನ್‌ ಆಫಿಸರ್‌ ಮಂಜಪ್ಪ ಅವರು ಸಂಜೆಯೊಳಗೆ ವಿದ್ಯುತ್‌ ಸಮಸ್ಯೆ ಸರಿಪಡಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಚದುರಿದರು.

Advertisement

ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯೆ ಲೀನಾ ಮಚಾದೋ, ವಿಲ್ಫ್ರೆಡ್ ಮಿನೇಜಸ್‌, ಆರ್ಥರ್‌ ಮಿನೇಜಸ್‌, ಹೆರಿಕ್‌ ಡಿ’ಸೋಜಾ, ಪ್ರವೀಣ್‌ ದೇವಾಡಿಗ, ನಿತಿನ್‌ ಪೂಜಾರಿ, ಶಾಂತಿ ಡೇಸಾ, ಫ್ಲಾವಿಯಾ, ಫಿಲಿಪ್‌ ಡಿ’ಸೋಜಾ, ಶಶಾಂಕ್‌ ಪ್ರಭು, ಸತೀಶ, ಕೇಶವ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿದ್ಯುತ್‌ ಬಳಕೆದಾರರು ಭಾಗವಹಿಸಿದ್ದರು

ಕೆಲಸಕ್ಕೆ ಜನ ಸಿಗುತ್ತಿಲ್ಲ
ಮುಂದಿನ 6 ತಿಂಗಳೊಳಗೆ 3,000 ಸಿಬಂದಿ ನೇಮಕವಾಗಲಿದೆ. ಅಲ್ಲಿಯವರೆಗೆ ತಾತ್ಕಾಲಿಕ ಸಿಬಂದಿ ನೇಮಿಸಿಕೊಂಡು ಕೆಲಸ ನಿರ್ವಹಿಸಲು ಮೇಲಧಿಕಾರಿಗಳ ಆದೇಶವಿದೆ. ಜಾಹೀರಾತು ನೀಡಿ ದರೂ ಸ್ಥಳೀಯ ನುರಿತ ಜನರು ಕೆಲಸಕ್ಕೆಸಿಗುತ್ತಿಲ್ಲ. ಪ್ರತಿಭಟನೆಯ ಮುಖಂಡರು ಸ್ಥಳೀಯವಾಗಿ ಕೆಲಸ ಮಾಡಲು ನುರಿತ ಜನರನ್ನು ಹೊಂದಿಸಿಕೊಟ್ಟರೆ ಕೂಡಲೇ ಸಮಸ್ಯೆ ಪರಿಹಾರ ಸಾಧ್ಯ.

– ಪ್ರಸನ್ನಕುಮಾರ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಉಡುಪಿ

ಸುದಿನ ವರದಿ
ಶಿರ್ವ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿ ದೊಡ್ಡದಿದ್ದು ಸಿಬಂದಿ ಕೊರತೆ ಎದುರಿಸುತ್ತಿದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಈ ಭಾಗದ ಕೃಷಿಕರು ಮತ್ತು ವಿದ್ಯುತ್‌ ಬಳಕೆದಾರರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಜು. 22ರಂದು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next