ಬೆಂಗಳೂರು: “ನಾನು ಅಂದು 13 ಪಕ್ಷಗಳನ್ನು ಕಟ್ಟಿಕೊಂಡು ನರ್ಮದಾ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ದಿಟ್ಟನಿಲುವು ತೆಗೆದುಕೊಂಡಿದ್ದಕ್ಕೆ ಸರ್ದಾರ್ ಸರೋವರ ಯೋಜನೆ ಬಂತು. ಇಂದು ಬಿಜೆಪಿ ಸಂಸತ್ತಿನಲ್ಲಿ 286 ಸೀಟು ಹೊಂದಿದ್ದರೂ ಮಹದಾಯಿ -ಕಾವೇರಿ ಸಮಸ್ಯೆ ಯಾಕೆ ಇತ್ಯರ್ಥವಾಗುತ್ತಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸಪ್ನ ಬುಕ್ ಹೌಸ್ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತ ಡಾ.ಪ್ರಧಾನ್ ಗುರುದತ್ತ ಮತ್ತು ಡಾ.ಸಿ. ನಾಗಣ್ಣ ರಚಿಸಿದ “ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಅತ್ಯುನ್ನತ ಸ್ಥಾನದಲ್ಲಿರುವವರಿಗೆ ತಾರತಮ್ಯ ಮನೋಭಾವ ಇರಬಾರದು. ಯಾವೊಂದು ಸಮಸ್ಯೆ ಬಗೆಹರಿಸುವಾಗ ಪಕ್ಷಾತೀತವಾಗಿ ದೇಶದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕೆಂದು ಸೂಕ್ಷ್ಮವಾಗಿ ಹೇಳಿದರು. ಕಾವೇರಿ ಮತ್ತು ಮಹದಾಯಿ ವಿಚಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕೇಂದ್ರ ಸರ್ಕಾರಕ್ಕೆ ಶಕ್ತಿ ಕೊಟ್ಟವರು ಇದೇ ಕರ್ನಾಟಕದ ಆರು ಕೋಟಿ ಜನ ಎಂಬುದನ್ನು ಮರೆಯಬಾರದು ಎಂದು ತರಾಟೆಗೆ ತೆಗೆದುಕೊಂಡರು.
ಕುರ್ಚಿ ಮುಖ್ಯವಲ್ಲ: “ಮನುಷ್ಯನಿಗೆ ಕುರ್ಚಿ ಮುಖ್ಯವಲ್ಲ; ಸಾಮಾಜಿಕ ಕಳಕಳಿ ಇರುವ ದೃಢ ನಿರ್ಣಯಗಳನ್ನು ಕೈಗೊಳ್ಳುವುದು ಮುಖ್ಯ. ಕಾವೇರಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಾನು ಪ್ರಧಾನಿಯಾಗಿದ್ದಾಗ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೊಗೇನಕಲ್ ಬಳಿ ಜಲಾಶಯ ನಿರ್ಮಿಸಿ, ನೀರು ಸಂಗ್ರಹಿಸೋಣ, ತಮಿಳುನಾಡಿಗೆ ತೊಂದರೆಯಾದಾಗ ನೀರು ಹರಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ಹೇಳಿದೆ. ಆದರೆ, ಅವರು ಕೇಳಲಿಲ್ಲ. ಹಾಗಾಗಿ, ಇತ್ಯರ್ಥ ಆಗಲಿಲ್ಲ ಎಂದು ಹೇಳಿದರು.
“ಸಾಧನೆಯ ಶಿಖರಾರೋಹಣ’ ಕೃತಿಗೆ ನಾನು ಒಪ್ಪಿದ್ದು ಪ್ರಚಾರಕ್ಕಲ್ಲ. ಈ ಪ್ರಚಾರದಿಂದ ನನಗೆ ಆಗಬೇಕಾದ್ದೂ ಏನಿಲ್ಲ. ಒಂದು ಸಣ್ಣ ಹಳ್ಳಿಯ ರೈತನ ಮಗ ಹೇಗೆ ಆಡಳಿತ ನಡೆಸಿದ ಎನ್ನುವುದು ಜನರಿಗೆ ತಿಳಿಯಲಿ ಎಂಬ ಕಾರಣಕ್ಕೆ ನಾನು ಸಮ್ಮತಿಸಿದೆ ಎಂದು ಹೇಳಿದರು. ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಬಂದಾಗ ದೇಶದ ಅತ್ಯುನ್ನತ ಹುದ್ದೆಯನ್ನು ನಮ್ಮವರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಅಲ್ಲಿದ್ದ ನಮ್ಮಂತಹ ಕನ್ನಡಿಗರಲ್ಲಿತ್ತು. ಆದರೆ, ಅವರೊಬ್ಬ ಅತ್ಯುತ್ತಮ ಆಡಳಿತಗಾರ. ಇದನ್ನು ಸ್ವತಃ ನಿರೂಪಿಸಿದರು ಎಂದು ಕೊಂಡಾಡಿದರು. ನಾಡೋಜ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಸಾಧನೆಯ ಶಿಖರಾರೋಹಣ ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ಅನುವಾದ ಆಗಬೇಕು. ಆ ಮೂಲಕ ದೇಶಕ್ಕೆ ಪರಿಚಯ ಆಗಬೇಕೆಂದು ಹೇಳಿದರು. ಪ್ರಧಾನ್ ಗುರುದತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದೇಶಿ ಪ್ರವಾಸಕ್ಕೆ ಆಸಕ್ತಿ ತೋರಲಿಲ್ಲ
ನಾನು ಹೆಚ್ಚು ವಿದೇಶಿ ಪ್ರವಾಸಕ್ಕೆ ಆಸಕ್ತಿ ತೋರಿಸಲಿಲ್ಲ. ಬದಲಿಗೆ ನನ್ನ ನಾಡಿನ ಸಮಸ್ಯೆಗಳನ್ನು ಬಗೆಹರಿಸುವುದು ನನಗೆ ಆದ್ಯತೆಯಾಗಿತ್ತು. ಆಕಸ್ಮಿಕವಾಗಿ ಪ್ರಧಾನಿಯಾದ ನನ್ನ ಮುಂದೆ ಅನೇಕ ಸವಾಲುಗಳಿದ್ದವು. ತೈಲ ಪೂರೈಸಿದ ಅರಬ್ ದೇಶಗಳಿಗೆ 17,800 ಕೋಟಿ ರೂ. ಬಾಕಿ ಪಾವತಿ, ಜಮ್ಮು-ಕಾಶ್ಮೀರ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ಇದ್ದವು. ಆದರೆ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ದೇವೇಗೌಡರು ಸ್ಮರಿಸಿದರು.
ಬೆಳವಣಿಗೆಗೆ ಪತ್ನಿ ಸಾಥ್
“ನನ್ನ ಬೆಳವಣಿಗೆಗೆ ಪತ್ನಿ ಚೆನ್ನಮ್ಮ ಕಾರಣ. ಅವಳ ಸಹಕಾರ ಇಲ್ಲದಿದ್ದರೆ, ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿರಲಿಲ್ಲ’ ಎಂದು ದೇವೇಗೌಡರು ಬಣ್ಣಿಸಿದರು. ನನಗೆ ನಾಲ್ಕು ಮಕ್ಕಳು. ಇದರಲ್ಲಿ ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು. “ನನ್ನ ಮಕ್ಕಳಿಗೆ ಏನು ಮಾಡಿದೆ’ ಎಂದು ಯಾವತ್ತೂ ಪತ್ನಿ ಚೆನ್ನಮ್ಮ ಕೇಳಲಿಲ್ಲ. ನನ್ನ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಳು’ ಎಂದು ಸ್ಮರಿಸಿದರು.