Advertisement

ತಾಯಿ ಶವದೆದುರು ಮಕ್ಕಳ ಆರ್ತನಾದ

01:08 AM Jul 14, 2019 | Lakshmi GovindaRaj |

ಬೆಂಗಳೂರು: ಪತ್ನಿಯನ್ನು ಕೊಲೆಗೈದ ವ್ಯಕ್ತಿಯೊಬ್ಬ, ತನ್ನ ಮೂವರು ಮಕ್ಕಳನ್ನು ಮೃತದೇಹದೊಂದಿಗೆ ಬಿಟ್ಟು ಹೊರಗಡೆಯಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದು, ಮೂರೂ ಮಕ್ಕಳು ಎರಡು ಗಂಟೆಗೂ ಹೆಚ್ಚು ಹೊತ್ತು ತಾಯಿಯ ಮೃತದೇಹದ ಮುಂದೆ ಗೋಳಾಡಿದ ಘಟನೆ ಬಿಳಕೇಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಮೂವರು ಮಕ್ಕಳ ಆರ್ತನಾದ ಕೇಳಿದ ಅಕ್ಕ-ಪಕ್ಕದ ನಿವಾಸಿಗಳು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಉಮಾರಾಣಿ (30) ಕೊಲೆಯಾಗಿರುವ ಸಂಗತಿ ಗೊತ್ತಾಗಿದ್ದು, ಮಕ್ಕಳನ್ನು ಸಂತೈಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದ ಮೈಕೋ ಲೇಔಟ್‌ ಠಾಣೆ ಪೊಲೀಸರು, ಉಮಾರಾಣಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಗೈದು ಪರಾರಿಯಾಗಿರುವ ಆಕೆಯ ಪತಿ ಚಿನ್ನಸ್ವಾಮಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕುಡಿತ ಪ್ರಶ್ನಿಸಿದ್ದಕ್ಕೆ ಕೊಲೆ: ತಮಿಳುನಾಡು ಮೂಲದ ಚಿನ್ನಸ್ವಾಮಿ ಹಾಗೂ ಉಮಾರಾಣಿ 13 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ 11 ಹಾಗೂ 8 ವರ್ಷದ ಇಬ್ಬರು ಹೆಣ್ಣುಮಕ್ಕಳು, ಆರು ವರ್ಷದ ಮಗನಿದ್ದಾನೆ. ಬಿಳಕೇಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿ ನೆಲೆಸಿದ್ದು, ಉಮಾರಾಣಿ ಖಾಸಗಿ ಕಂಪನಿಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಚಿನ್ನಸ್ವಾಮಿ ಗುಜರಿ ಸಾಮಾನುಗಳ ವ್ಯಾಪಾರ ಮಾಡುತ್ತಿದ್ದ.

ಚಿನ್ನಸ್ವಾಮಿ, ಪ್ರತಿ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಚಿನ್ನಸ್ವಾಮಿ ಕುಡಿದು ಬಂದಿದ್ದರಿಂದ ಉಮಾರಾಣಿ ಪ್ರಶ್ನಿಸಿದ್ದಕ್ಕೆ ಜಗಳ ನಡೆದಿತ್ತು.

Advertisement

ಬಳಿಕ ಉಮಾರಾಣಿ ಮೂವರು ಮಕ್ಕಳ ಜತೆ ಕೋಣೆಯಲ್ಲಿ ಮಲಗಿದ್ದರು. ಆದರೆ, ಚಿನ್ನಸ್ವಾಮಿ ಮೂವರು ಮಕ್ಕಳನ್ನು ಎಬ್ಬಿಸಿ ಹಾಲ್‌ನಲ್ಲಿ ಮಲಗಿಸಿದ್ದಾನೆ. ಬಳಿಕ ಒಳಗಿನಿಂದ ಕೋಣೆ ಬಾಗಿಲು ಲಾಕ್‌ ಮಾಡಿ, ಮಲಗಿದ್ದ ಉಮಾರಾಣಿ ತಲೆ ಮೇಲೆ ಖಾಲಿ ಸಿಲಿಂಡರ್‌ ಎತ್ತಿ ಹಾಕಿ ಕೊಲೆಗೈದಿದ್ದಾನೆ.

ಉಮಾರಾಣಿ ಕಿರುಚಾಟ ಕೇಳಿ ಮಕ್ಕಳು ನಿದ್ದೆಯಿಂದ ಎದ್ದು ಕೂಗಿಕೊಂಡಿದ್ದಾರೆ. ಬಳಿಕ ಕೋಣೆ ಬಾಗಿಲು ತೆರೆದು ಹೊರಗೆ ಬಂದ ಚಿನ್ನಸ್ವಾಮಿ, ಮಕ್ಕಳನ್ನು ಒಳಗಡೆ ಬಿಟ್ಟು ಮನೆಯ ಬಾಗಿಲನ್ನು ಹೊರಗಡೆಯಿಂದ ಲಾಕ್‌ ಮಾಡಿಕೊಂಡು ಪರಾರಿಯಾಗಿದ್ದಾನೆ.

ಮೂವರು ಮಕ್ಕಳು ಹೊರ ಬರಲಾಗದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವದ ಮುಂದೆ ಎರಡು ಗಂಟೆಗೂ ಹೆಚ್ಚು ಕಾಲ ಗೋಳಾಡಿದ್ದಾರೆ. ಅಕ್ಕ-ಪಕ್ಕದ ಮನೆಯವರು ದಂಪತಿ ನಡುವಿನ ಜಗಳವಿರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ, ಮಕ್ಕಳ ಕೂಗು ಜೋರಾದಾಗ ಕೆಲವರುಮನೆ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕೊಲೆ ಸಂಗತಿ ಬಯಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಉಮಾರಾಣಿ ಹಿರಿಯ ಮಗಳು ಹಾಗೂ ಸ್ಥಳೀಯರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಚಿನ್ನಸ್ವಾಮಿ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿರುವ ಸಾಧ್ಯವಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next