Advertisement

ಸಚಿವರ ತವರಲ್ಲಿ ನಿಂತಿಲ್ಲ ಬೀದಿ ಶೌಚ

12:40 PM Oct 10, 2018 | |

ವಿಜಯಪುರ: ಸ್ವತ್ಛ ಭಾರತದ ಭಾಗವಾದ ಬಯಲು ಶೌಚ ಮುಕ್ತ ಭಾರತ ಕಟ್ಟುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಕನಸು. ಈ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕವಾಗಿ ನೈರ್ಮಲ್ಯ ಖಾತೆ ಸೃಷ್ಟಿಸಿ ಸಚಿವರನ್ನು ನೇಮಿಸಿದ್ದಾರೆ. ಆದರೆ ಪ್ರಸಕ್ತ ವರ್ಷವೇ 40 ಕೋಟಿ ರೂ. ಖರ್ಚು ಮಾಡಿದರೂ ಕೇಂದ್ರದ ನೈರ್ಮಲ್ಯ ಖಾತೆ ಸಚಿವರ
ತವರಿನಲ್ಲೇ ಘೋಷಿತ ಗ್ರಾಮಗಳಲ್ಲೇ ಇನ್ನೂ ಬೀದಿ ಶೌಚ ನಿಂತಿಲ್ಲ.

Advertisement

ಕೇಂದ್ರ ಸರ್ಕಾರದ ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಕರ್ನಾಟಕ ರಾಜ್ಯದವರೇ ಆಗಿದ್ದು ವಿಜಯಪುರ ಲೋಕಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಹಿರಿಯ ಸಚಿವ. ನೈರ್ಮಲ್ಯ ಸಚಿವರ ತವರು ರಾಜ್ಯ ಕರ್ನಾಟಕ ಈಗಾಗಲೇ
20 ಜಿಲ್ಲೆಗಳು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಿದ್ದು, 7 ಜಿಲ್ಲೆಗಳು ಘೋಷಣೆಗೆ ಕಾಯುತ್ತಿವೆ.

ಉತ್ತರ ಕರ್ನಾಟಕ ಭಾಗದ ವಿಜಯಪುರ, ಬೀದರ ರಾಯಚೂರು ಜಿಲ್ಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ನವೆಂಬರ್‌ ಅಂತ್ಯದವರೆಗೆ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸಂಪೂರ್ಣವಾಗಿ ಪ್ರತಿ ಕುಟುಂಬಗಳು ಶೌಚಾಲಯ ಹೊಂದಿ ಕರ್ನಾಟಕ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯ ಎಂಬ ಗುರಿ ಸಾಧಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ನೂರಾರು ಕೋಟಿ ರೂ. ಅನುದಾನ ನೀಡುತ್ತಿದ್ದು, ಹಣ ಬಳೆಯತ್ತ ಅಧಿಕಾರಿಗಳು ಚಿತ್ತ ನೆಟ್ಟಿದ್ದಾರೆ.

ಆದರೆ ಬಯಲು ಶೌಚಾಲಯ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡ ಹಳ್ಳಿಗಳಲ್ಲೇ ಬಯಲು ಶೌಚ ಮುಕ್ತವಾಗಿಯೇ ನಡೆದಿದೆ. ಅಧಿಕಾರಿಗಳು ಹಣ ಬಳಕೆ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣದ ಗುರಿ ಸಾಧನೆಗೆ ಆದ್ಯತೆ ನೀಡುತ್ತಿದ್ದಾರೆಯೇ ಹೊರತು, ಬಯಲು ಶೌಚ ಮುಕ್ತಗೊಳಿಸುವ ಆಶಯ ಈಡೇರಿಸುವಲ್ಲಿ ಆಸಕ್ತಿ ತೋರಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ಗ್ರಾಮ ಯೋಜನೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಬಸವನಬಾಗೇವಾಡಿ ಶೇ. 100 ಸಾಧನೆ ಮಾಡಿದ್ದರೆ, ಇಂಡಿ, ವಿಜಯಪುರ, ಮುದ್ದೇಬಿಹಾಳ ಶೇ. 90 ಗಡಿ ದಾಡಿದೆ. ಸಿಂದಗಿ ಇನ್ನೂ ಶೇ. 80 ಗಡಿಯಲ್ಲಿ ನಿಂತಿದೆ. ಇದಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಸರ್ಕಾರ 52 ಕೋಟಿ ರೂ. ನೀಡಿದ್ದು, ಸುಮಾರು 40 ಕೋಟಿ ರೂ. ಖರ್ಚು ಮಾಡಿದ್ದರೂ ಇನ್ನೂ ಬಯಲು ಶೌಚಾಲಯಕ್ಕೆ ಮುಕ್ತಿ ದೊರಕಿಲ್ಲ.

ವಿಜಯಪುರ ಜಿಲ್ಲೆಯಲ್ಲೇ ಶೇ. 93.54 ಗುರಿ ಸಾಧನೆ ಮಾಡಿದ್ದು, 16,777 ಕುಟುಂಬಗಳು ಮಾತ್ರ ವೈಯಕ್ತಿ ಶೌಚಾಲಯ ನಿರ್ಮಾಣ ಬಾಕಿ ಇದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಸರ್ಕಾರ ಗುರಿ ಸಾಧನೆಗೆ ತಾಕೀತು ಮಾಡುತ್ತಿರುವ ಕಾರಣ ಸಾಧನೆಯ ದಾಖಲೆ ಮಾಡುವ ಧಾವಂತದಲ್ಲಿ ಅಧಿಕಾರಿಗಳು ಸರ್ಕಾರ ನೀಡಿದ ಅನುದಾನ ಬಳಕೆ ಮಾಡುವ ಆರ್ಥಿಕ ಗುರಿ ಸಾಧನೆಗೆ ಸರ್ಕಾರಿ ದಾಖಲೆಯಲ್ಲಿ ಬಯಲು ಶೌಚಾಲಯ ಮುಕ್ತ ಗ್ರಾಮಗಳು ಎಂದು ಘೋಷಣೆ ಮಾಡಲು ಆರಂಭಿಸಿದ್ದಾರೆ. ವಾಸ್ತವಿಕವಾಗಿ ಜಿಲ್ಲೆಯಲ್ಲಿ ಬಯಲು ಶೌಚಮುಕ್ತ ಘೋಷಿತ ಗ್ರಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಯಲು ಶೌಚ ನಿಂತಿಲ್ಲ.

Advertisement

ಜಿಲ್ಲಾ ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ತೊರವಿ ಗ್ರಾಮ ಬಯಲು ಶೌಚ ಮುಕ್ತ ಎಂದು ಸರ್ಕಾರಿ ದಾಖಲೆಯಲ್ಲಿ ಸೇರ್ಪಡೆ ಆಗಿದೆ. ಆದರೆ ವಾಸ್ತವಿಕವಾಗಿ ಘೋಷಿತ ಬಹುತೇಕ ಹಳ್ಳಿಗಳಲ್ಲಿ ಇನ್ನೂ ರಸ್ತೆ ಬದಿಗಳು, ಮುಳ್ಳಿನ ಪೊದೆಗಳು ಇನ್ನೂ ಬಯಲು ಶೌಚಾಲಯ ಜೀವಂತಕ್ಕೆ ಸಾಕ್ಷಿ ನೀಡುತ್ತವೆ. ಸರ್ಕಾರದ ಸಾಧನೆ ಹಣ ಖರ್ಚು ಮಾಡಲು, ಕಾಗದದಲ್ಲಿ ಸಾಧನೆ ಮೆರೆಯಲು ಎಂದು ಅಣಕವಾಡುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಧಾವಂತದ ಸಾಧನೆ-ದಾಖಲೆ ಮಾಡುವುದಕ್ಕಿಂತ ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಧನೆ ಮಾಡಬೇಕಿದೆ.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next