ಬಸವಕಲ್ಯಾಣ: ಮಂಠಾಳ ಗ್ರಾಮದ ಧರಂಪೇಠ ಬಡಾವಣೆಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಜೀವನ ಸಾಗಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಪ್ರಮುಖ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಡಾವಣೆ ಇದಾಗಿದ್ದು, ಒಂದು ದಶಕದಿಂದ ಗ್ರಾಮ ಪಂಚಾಯತ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಸಿಸಿರಸ್ತೆ, ಚರಂಡಿ, ವಿದ್ಯುತ್ ಕಂಬಗಳ ವಿವಿಧ ಸೌಕರ್ಯಗಳ ಕೊರತೆಯಿಂದ ಧರಂಪೇಠ ನರಳುತ್ತಿದೆ.
ಚರಂಡಿ ಇಲ್ಲದ ಕಾರಣ ಬಡಾವಣೆಯ ಯಾವುದೇ ರಸ್ತೆಗೆ ಹೋಗಲಿ, ಪ್ರತಿ ಮನೆಯ ಮುಂದೆ ಮಲಿನ ನೀರು ಸಂಗ್ರಹ ವಾಗಿರುವುದು ಕಂಡುಬರುತ್ತದೆ. ಇದರಿಂದ ರಸ್ತೆ ಮಧ್ಯದಲ್ಲಿ ನಾಯಿ ಮತ್ತು ಹಂದಿಗಳು ಠಿಕಾಣಿ ಹೂಡುತ್ತಿವೆ. ಹಾಗಾಗಿ ಬಡಾವಣೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿ, ಸಾಂಕ್ರಾಮಿಕ ರೋಗಗಳು ಹರಡುವ ಭಯದಲ್ಲಿ ಮಕ್ಕಳು ಮತ್ತು ನಿವಾಸಿಗಳು ಸಂಚರಿಸುವಂತಾಗಿದೆ.
ಬಡಾವಣೆಯಲ್ಲಿ ವಿದ್ಯುತ್ ಕಂಬಗಳ ವ್ಯವಸ್ಥೆ ಇಲ್ಲ. ದೂರ ದೂರದ ಕಂಬಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ಇದರಿಂದ ಅಲ್ಲಲ್ಲಿ ಮನೆ ಮುಂದೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಆದರೂ ಸಂಬಂಧ ಪಟ್ಟವರು ನಮ್ಮ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದರು.
ಬಡಾವಣೆಯಲ್ಲಿ ವರ್ಷ ಕಳೆದಂತೆ ಮನೆಗಳ ಹಾಗೂ ಜನಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಸೌಕರ್ಯ ಕಲ್ಪಿಸಬೇಕೆಂದು ಸಾಕಷ್ಟು ಬಾರಿ ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿದೆ. ಮತ್ತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿ ಫಿರೋಜ್‌ಖಾನ್ ಅಳಲು ತೊಡಿಕೊಂಡರು.
ರಸ್ತೆ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಚರಂಡಿ ನಿರ್ಮಿಸುವುದು ತುಂಬಾ ಅವಶ್ಯವಾಗಿದೆ. ಏಕೆಂದರೆ ನಿತ್ಯ ಬಳಕೆ ಮಾಡಿದ ನೀರು ಮನೆ ಮುಂದೆ ನಿಲ್ಲುವುದು ಒಂದು ಸಮಸ್ಯೆ ಯಾದರೆ, ರಾತ್ರಿ ಸಮಯದಲ್ಲಿ ವಿದ್ಯುತ್ ಕೈ ಕೊಟ್ಟರೆ ಸೊಳ್ಳೆಗಳ ಕಾಟದಿಂದ ಯಾರೂ ನಿದ್ದೆ ಮಾಡದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಡಾವಣೆಯ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡರು.
ತಾಲೂಕಿನ ದೊಡ್ಡ ಗ್ರಾಮ ಪಂಚಾಯತ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಠಾಳ ಗ್ರಾಮದ ಧರಂಪೇಠ ಬಡಾವಣೆಯಲ್ಲಿ ಒಂದು ದಶಕದಿಂದ ಮೂಲಭೂತ ಸೌಕರ್ಯ ಕಲ್ಪಿಸದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಸ್ಪಂದಿಸಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ.