ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವು ನಂತರವೂ ಭಣಗುಡುತ್ತಿದ್ದ ಮಾಲ್ ಗಳಿಗೆ ವಾರಾಂತ್ಯದಲ್ಲಿ ಗ್ರಾಹಕರ ಸಂಚಾರ ತುಸು ಹೆಚ್ಚಿರುವುದು ಕಂಡು ಬಂದಿತು. ಫೋರಂ ಮಾಲ್, ಗರುಡಾ ಮಾಲ್, ಒರಾಯನ್ ಮಾಲ್, ಮಂತ್ರಿ ಮಾಲ್ ಸೇರಿ ನಗರದ ಪ್ರಮುಖ ಮಾಲ್‌ಗಳಲ್ಲಿ ಗ್ರಾಹಕರ ಆಗಮನ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಿದೆ.
ಪ್ರತಿದಿನ ಸುಮಾರು 400- 500 ಜನರು ಬರುತ್ತಿದ್ದ ಗ್ರಾಹಕರ ಸಂಖ್ಯೆ ವಾರಾಂತ್ಯದಲ್ಲಿ ಹೆಚ್ಚಾಗಿದೆ. ನಗರದ ಮಾಲ್‌ಗಳು ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಮಾರ್ಗಸೂಚಿ ಪಾಲಿಸುತ್ತಿದ್ದು, ಮಾಲ್ ಮುಂಭಾಗ ಮತ್ತು ಒಳಗಿರುವ ಮಳಿಗೆ ಯಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಮಾಸ್ಕ್ ಧರಿಸಿ ದವರಿಗೆ ಮಾತ್ರ ಒಳ ಪ್ರವೇಶ ಎಂಬ ಫಲಕ ಹಾಕಲಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಮಾಲ್‌ಗೆ ಬಂದವರ ಸಂಖ್ಯೆ ಶನಿವಾರ ಮತ್ತು ಭಾನುವಾರ ಏರಿಕೆ ಕಂಡಿದೆ. ಗ್ರಾಹಕರು ಹೆಚ್ಚಾದ ಕಾರಣ ಮಾಲ್‌ನಲ್ಲಿ ಗಂಟೆಗೊಮ್ಮೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಸೌಂದರ್ಯವರ್ಧಕಗಳು ಹಾಗೂ ಬಟ್ಟೆ ಖರೀದಿ ಮಳಿಗೆಗಳ ಬಳಿ ಗ್ರಾಹಕರ ಸಂಖ್ಯೆ ಹೆಚ್ಚು ಇತ್ತು. ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಕೋರಮಂಗಲದ ಫೋರಂ ಮಾಲ್ ನಲ್ಲಿರುವ ಮಳಿಗೆಯೊಂದರ ಮಾಲೀಕರು ತಿಳಿಸಿದರು.
ಮಾಲ್‌ಗಳಲ್ಲಿನ ಚಿತ್ರಮಂದಿರಗಳು ಆರಂಭವಾದರೆ, ಇನ್ನೂ ಹೆಚ್ಚಿನ ಗ್ರಾಹಕರು ಮಾಲ್ ಗಳತ್ತ ಬರುತ್ತಾರೆ. ಇದೀಗ ಬಟ್ಟೆ, ಮನೆ ಬಳಕೆ ವಸ್ತುಗಳನ್ನು ಕೊಳ್ಳಲು ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರಾಂತ್ಯದಲ್ಲಿ ಉತ್ತಮ ವ್ಯವಹಾರ ನಡೆದಿದೆ ಎಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಮಾಲ್‌ನ ವ್ಯವಸ್ಥಾಪಕರು ತಿಳಿಸಿದರು.
ಗ್ರಾಹಕರನ್ನು ಸೆಳೆಯಲು ರಿಯಾಯಿತಿ: ನಗರದ ಕೆಲ ಹೋಟೆಲ್‌ಗಳು ಗ್ರಾಹಕರನ್ನು ಸೆಳೆಯಲು ಶೇ.10ರಷ್ಟು ರಿಯಾಯಿತಿ ನೀಡುತ್ತಿವೆ. ಹೋಟೆಲ್ ತೆರೆಯಲು ಅವಕಾಶ ಕೊಟ್ಟಿದ್ದರೂ ವಿಜಯನಗರ, ದೀಪಾಂಜಲಿ ನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರದಲ್ಲಿದ್ದ ಕೆಲ ಉತ್ತರ ಕರ್ನಾಟಕ ಊಟದ ಹೋಟೆಲ್‌ಗಳು ಆರಂಭವಾಗಿಲ್ಲ ಎಂದು ಹೋಟೆಲ್ ಸಿಬ್ಬಂದಿ ಮಹೇಶ್ ಹೇಳಿದರು.