ಬೆಂಗಳೂರು: ವಿಜ್ಞಾನ ಹಾಗೂ ಧರ್ಮದ ಮುಖ್ಯ ಉದ್ದೇಶ ಸತ್ಯಾನ್ವೇಷಣೆಯೇ ಆಗಿದ್ದು, ಸಮಾಜದಲ್ಲಿ ಅವೆರಡನ್ನೂ ಬೆಸೆಯುವ ಕೆಲಸವಾಗಬೇಕಿದೆ ಎಂದು ಕೃಷಿ ವಿಜ್ಞಾನಿ ಕೆ.ಎನ್.ಗಣೇಶಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶ ಹಮ್ಮಿಕೊಂಡಿದ್ದ ಜಯಂತ ಕಾಯ್ಕಿಣಿ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಂಬಿಕೆಯ ಆಧಾರದ ಮೇಲೆಯೇ ವಿಜ್ಞಾನ ಹಾಗೂ ಧರ್ಮ ಸಾಗುತ್ತಿದ್ದರೂ, ಎರಡರಲ್ಲೂ ವಸ್ತುನಿಷ್ಠೆ ಹಾಗೂ ಪರಾಮರ್ಶೆ ಇದೆ. ಆದರೆ, ಇಂದು ಧರ್ಮದ ಪರ ಮಾತನಾಡಿದರೆ ಒಂದು ಪಕ್ಷಕ್ಕೆ, ಧರ್ಮವನ್ನು ದ್ವೇಷಿಸಿದರೆ ಮತ್ತೂಂದು ಪಕ್ಷಕ್ಕೆ ಸೇರಿಸುತ್ತಾರೆ ಎಂದು ಬೇಸರ ವ್ಯಕ್ತಪಡೆಸಿದರು.
ಜಯಂತ್ ಕಾಯ್ಕಿಣಿಯವರು ವಿಜ್ಞಾನ ಕ್ಷೇತ್ರದಲ್ಲಿ ಭಾವನೆಗಳಿಗೆ ಕೊರತೆ ಇದೆ ಎಂದು ಸಾಹಿತ್ಯ ಕ್ಷೇತ್ರ ಆಯ್ಕೆ ಮಾಡಿಕೊಂಡವರು. ಸರಳ ಪದಗಳಲ್ಲಿ ಅಡಗಿರುವ ಸಿರಿವಂತಿಕೆಯನ್ನು ಎತ್ತಿಹಿಡಿಯುವ ಕಾಯ್ಕಿಣಿ ಮಾತನಾಡಿದರೆ ರೂಪಕಗಳೇ ಹುಟ್ಟುತ್ತವೆ. ಮೈಸೂರು ಮಲ್ಲಿಗೆಯ ಕೆ.ಎಸ್.ನರಸಿಂಹ ಸ್ವಾಮಿಯವರ ನಂತರ ಪ್ರೇಮ ಪಲ್ಲವಿಯ ಮೂಲಕ ಸಾಕಷ್ಟು ಅಭಿಮಾನಿಗಳ ಮನಗೆದ್ದ ಕವಿ ಜಯಂತ್ ಕಾಯ್ಕಿಣಿ ಎಂದು ಶ್ಲಾ ಸಿದರು.
ವಿಶೇಷ ಉಪನ್ಯಾಸ ಮಾಡಿದ ಭಾಷಾತಜ್ಞಾ ಕೆ.ಪಿ.ರಾವ್, ಮಾತಿಗೆ ಅಮರತ್ವವಿಲ್ಲ. ಅದು ಬರಹವಾದರೆ ಸಾವಿರಾರು ವರ್ಷ ಉಳಿಯುತ್ತದೆ. ಹಾಗಾಗಿ ಅಕ್ಷರಗಳೇ ನಿಜವಾದ ಪ್ರಪಂಚವೆನಿಸಿ ಲಿಪಿ ಅಧ್ಯಯನಕ್ಕೆ ಮುಂದಾದೆ. ಬದುಕಿನಲ್ಲಾಗುವ ಬದಲಾವಣೆಗಳಿಂದ ಕಲೆ, ಸಂಗೀತ, ಸಾಹಿತ್ಯ, ಸಿನಿಮಾ, ವಿಜ್ಞಾನ ಕ್ಷೇತ್ರಗಳನ್ನು ಪ್ರವೇಶಿಸಿದೆ. ಇದರಿಂದ ರಿಷಿಕೇಶ್ ಮುಖರ್ಜಿ, ಜಿ.ಅರವಿಂದನ್, ಬೇಂದ್ರೆಯಂತಹ ಅನೇಕ ಮಹನೀಯರ ಪರಿಚಯವಾಗಿ ಸಾಧನೆ ಸುಲಭವಾಯಿತು ಎಂದರು.
ಸಾಹಿತಿ ಜಯಂತ್ ಕಾಯ್ಕಿಣಿ ಮಾತನಾಡಿ, ಮಹಾನ್ ಸಾಹಿತಿಗಳು ಬರೆದ ಪುಸ್ತಕಗಳೇ ಇಂದು ನಮ್ಮ ಬದುಕಿನ ಪಠ್ಯ ಪುಸ್ತಕಗಳಾಗಿದ್ದು, ಅವುಗಳನ್ನು ಓದಿ ತಿಳಿಯಬೇಕಾದ್ದು ಸಾಕಷ್ಟಿರುತ್ತದೆ. ಇಂದು ನನ್ನ ಎರಡು ಪುಸ್ತಕಗಳು ಬಿಡುಗಡೆಯಾಗುತ್ತಿದ್ದು, ಒಂದು ನನ್ನ ಪತ್ರಿಕಾ ಬರಹಗಳ ಸಂಗ್ರಹ ರೂಪವೇ ಆದ “ಗುಲ್‌ಮೊಹರ್ ನುಡಿ ನೋಟಗಳು’.
ಗಂಗಾಧರ್ ಚಿತ್ತಾಲ ಹಾಗೂ ಗೋಪಾಲಕೃಷ್ಣ ಅಡಿಗರ ನೆನಪಿಗಾಗಿ ಇದಕ್ಕೆ ಗುಲ್‌ಮೊಹರ್ ಎಂದು ಹೆಸರನ್ನಿಟ್ಟಿದ್ದೇನೆ. ಇನ್ನು ನನ್ನ ರೂಪಾಂತರ ನಾಟಕಗಳಾದ ಸೇವಂತಿ ಪ್ರಸಂಗ, ಜತೆಗಿಹನು ಚಂದಿರನು, ಇಂತಿ ನಿನ್ನ ಅಮೃತಗಳನ್ನು ಸೇರಿಸಿ “ರೂಪಾಂತರಿಸಿದ ನಾಟಕಗಳು’ ಪುಸ್ತಕ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿನಿಮಾ ನಟ ರಾಜೇಶ್ ನಟರಂಗ, ನಿರ್ದೇಶಕ ಸೂರಿ, ಹಿರಿಯ ಕಲಾವಿದರು ಹಾಗೂ ಜಯಂತ್ ಕಾಯ್ಕಿಣಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.