Advertisement

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

06:09 PM Nov 16, 2024 | Team Udayavani |

ಬುದ್ಧ ಮತ್ತು ಕಿಸಾಗೌತಮಿಯ ಕಥೆಯನ್ನು ನೀವು ಕೇಳಿರಬಹುದು, ಓದಿರಬಹುದು. ಪರಿಪೂರ್ಣ ಸುಖ, ಸಂತೋಷ ಎಂಬುದು ಯಾರಿಗೂ ಇಲ್ಲ ಎಂಬುದು ಅದು ತಿಳಿಸಿಕೊಡುವ ಸತ್ಯ. ನಾವು ಮರ್ತ್ಯರು. ಅಂದರೆ ಮರಣವನ್ನು ನಮ್ಮ ಬೆನ್ನಲ್ಲೇ ಕಟ್ಟಿಕೊಂಡವರು. ಸಾವು ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು ಕೂಡ ಅಲ್ಲ; ಒಂದರ ಬದಿಯಲ್ಲಿ ಇನ್ನೊಂದು. ಸುಖ-ದುಃಖ, ಸಂತೋಷ ಮತ್ತು ಬೇಸರ ಕೂಡ ಹೀಗೆಯೇ. ಒಂದರ ಪಕ್ಕದಲ್ಲಿ ಇನ್ನೊಂದು ಇರುತ್ತವೆ. ಯಾವುದಕ್ಕೂ

Advertisement

ಬಗ್ಗಬಾರದು, ಬೆದರಬಾರದು. ಜೀವನ  ಮುಂದುವರಿಯಬೇಕು,  ಮುಂದುವರಿಯುತ್ತದೆ ಅಷ್ಟೇ.ಇದು ಆಫ್ರಿಕ ದೇಶದ ಒಂದು ಕಥೆ. ಸಾವಿರಾರು ವರ್ಷಗಳ ಹಿಂದೆ ಉತ್ತರ ಆಫ್ರಿಕಾದ ಒಂದು ಊರಿನಲ್ಲಿ ಶ್ರೀಮಂತನೊಬ್ಬ ಇದ್ದನಂತೆ. ಹಲವು ಹೆಂಡತಿಯರು, ಮಕ್ಕಳು, ಮರಿಗಳಿಂದ ತುಂಬಿದ ದೊಡ್ಡ ಸಂಸಾರ, ಭಾರೀ ದೊಡ್ಡದಾದ ಮನೆ, ಬೇಕಾದಷ್ಟು ಆಳುಕಾಳುಗಳು ಎಲ್ಲವೂ ಇದ್ದ ಸಿರಿವಂತ ಅವನು. ಇಷ್ಟೆಲ್ಲ ಇದ್ದರೂ ಸಂತೋಷ ಎಂಬುದು ಅವನ ಹತ್ತಿರ ಸುಳಿಯುತ್ತಿರಲಿಲ್ಲ.

ಯಾವಾಗ ನೋಡಿದರೂ ಸಿಡುಕು ಮುಖ, ಕೆಂಪು ಸಿಡಿಯುವ ಕಣ್ಣುಗಳು, ಸದಾ ಕೋಪ. ನಿಜವಾಗಿಯೋ ಅವನು ಸುಖ-ಸಂತೋಷಗಳಿಂದ ಇರಬೇಕಿತ್ತು. ಆದರೆ ಹಾಗಿರಲಿಲ್ಲ. ತನ್ನ ಈ ಪರಿಸ್ಥಿತಿಯ ಬಗ್ಗೆ ಸ್ವತಃ ಶ್ರೀಮಂತನಿಗೂ ಅರಿವಿತ್ತು. ಖುಷಿಯಾಗಿರಬೇಕು ಎಂದು ಹಂಬಲಿಸುತ್ತಿದ್ದ. ಆದರೆ ಅದಾಗುತ್ತಲೇ ಇರಲಿಲ್ಲ. ಏನೇನು ಮಾಡಿದರೂ ಅದೊಂದು ಮಾತ್ರ ಅವನ ಬಳಿ ಬರುತ್ತಲೇ ಇರಲಿಲ್ಲ.

ಒಂದು ಬಾರಿ ಆತ ತನಗೆ ಆಪ್ತರಾದ ಕೆಲವು ಸೇವಕರನ್ನು ಕರೆದು ಖುಷಿ ಕೊಡಬಲ್ಲ ಕೆಲವು ವಿಧಾನಗಳ ಸಲಹೆ ಕೇಳಿದ. ಅದಕ್ಕೆ ಒಬ್ಬ, “ಒಡೆಯಾ, ಆಕಾಶವನ್ನು ನೋಡಿ. ಅಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವೀಕ್ಷಿಸಿ. ಇದರಿಂದ ನಿಮಗೆ ಖುಷಿಯಾಗಬಹುದು’ ಎಂದ. ಶ್ರೀಮಂತನಿಗೆ ಸಂತೋಷವಾಗುವ ಬದಲು ಸಿಟ್ಟು ಬಂತು. “ಆಗಸ ನೋಡಿದರೆ ಸಂತೋಷವಾಗುವುದು ಹೇಗೆ? ಅಲ್ಲಿರುವ ನಕ್ಷತ್ರಗಳು ಕೈಗೆಟಕುವುದಿಲ್ಲವಲ್ಲ ಎಂದು ದುಃಖವಾಗುತ್ತದೆ’ ಎಂದನಾತ.

Advertisement

ಇನ್ನೊಬ್ಬ ಸೇವಕ, “ಸಂಗೀತ ಕೇಳಿದರೆ ಹೇಗೆ’ ಎಂದ. ಈಗ ಶ್ರೀಮಂತನಿಗೆ ಸಿಟ್ಟೇ ಬಂತು. “ಇಡೀ ದಿನ ಸಂಗೀತ ಕೇಳುತ್ತ ಇರುವುದಕ್ಕಾಗುತ್ತದೆಯೇ’ ಎಂದು ಗರ್ಜಿಸಿದ. ಸೇವಕರೆಲ್ಲರೂ ಬಾಯಿ ಮುಚ್ಚಿಕೊಂಡು ಹೊರಟು ಹೋದರು. ಸ್ವಲ್ಪ ಹೊತ್ತು ಕಳೆದ ಮೇಲೆ ಇನ್ನೊಬ್ಬ ಸೇವಕ ಮೆಲ್ಲನೆ ಸಿರಿವಂತನ ಬಳಿಗೆ ಬಂದು, “ಒಡೆಯಾ, ಒಂದು ಉಪಾಯವಿದೆ. ಈ ಪ್ರಾಂತದಲ್ಲಿ ಅತ್ಯಂತ ಸಂತೋಷವಾಗಿರುವ ಮನುಷ್ಯನನ್ನು ಹುಡುಕಬೇಕು. ಅವನನ್ನು ಕರೆತಂದು ಅವನ ಅಂಗಿಯನ್ನು ನೀವು ಧರಿಸಿದರೆ ಅವನ ಸಂತೋಷವೂ ನಿಮ್ಮದಾಗುತ್ತದೆ’ ಎಂದು ಹೊಸ ಉಪಾಯ ಸೂಚಿಸಿದ.

ಸಿರಿವಂತನಿಗೆ ಇದಾಗಬಹುದು ಎನ್ನಿಸಿತು. ಸೇವಕರನ್ನು ಕರೆದು ಅತೀವ ಸಂತೋಷದಿಂದಿರುವ ಮನುಷ್ಯನನ್ನು ಹುಡುಕಿ ಕರೆತರುವಂತೆ ಹೇಳಿದ. ಸೇವಕರು ಹಲವು ದಿನಗಳ ಕಾಲ ಊರೂರು ಸುತ್ತಿದರೂ ಸಂತುಷ್ಟ ಮನುಷ್ಯ ಸಿಗಲೇ ಇಲ್ಲ. ಕೊನೆಗೆ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಖುಷಿ ಖುಷಿ ವ್ಯಕ್ತಿ ಅವರ ಕಣ್ಣಿಗೆ ಬಿದ್ದ. ಆತ ಸದಾ ನಗುನಗುತ್ತ ಹಾಡು ಹೇಳುತ್ತ ಇದ್ದ. ಸೇವಕರು ಅವನನ್ನು ಸಿರಿವಂತನ ಅರಮನೆಗೆ ಕರೆತಂದರು. ಅದಾಗಲೇ ಸುದ್ದಿ ತಿಳಿದಿದ್ದ ಸಿರಿವಂತ ತನ್ನ ವಿಲಾಸಿ ಕೊಠಡಿಯಲ್ಲಿ ಅಂಗಿ ಬಿಚ್ಚಿಕೊಂಡು ಕುಳಿತಿದ್ದ. ಇನ್ನಾದರೂ ಖುಷಿಯಾಗಿರಬಹುದು ಎಂದುಕೊಂಡ ಶ್ರೀಮಂತ, “ಬಾರಯ್ಯ’ ಎಂದು ಸ್ವಾಗತಿಸಿದ. ಕಪ್ಪನೆಯ, ಕುಳ್ಳು ಬಡವನೊಬ್ಬ ಮೆಲ್ಲನೆ ಸಿರಿವಂತನ ಕೊಠಡಿಯೊಳಕ್ಕೆ ಹೊಕ್ಕ. ಆ ಅತ್ಯಂತ ಸುಖಿ ಮನುಷ್ಯನಿಗೆ ಅಂಗಿಯೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next