Advertisement
ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಈಗ ಬೆಂಗಳೂರನ್ನು ವ್ಯಾಪಿಸುತ್ತಿದೆ. ಈಗಾಗಲೇ ಐವರಿಗೆ ಸೋಂಕು ತಗುಲಿದೆ. 20ಕ್ಕೂ ಹೆಚ್ಚು ಮಂದಿ ಸೋಂಕಿತರ ಸಂಪರ್ಕದ ಹಿನ್ನೆಲೆ ಶಂಕಿತರಾಗಿದ್ದಾರೆ. ಸಾವಿರಾರು ಮಂದಿ ಗೃಹ ಬಂಧನಕ್ಕೊಳಪಟ್ಟಿದ್ದಾರೆ. ವಾರದಮಟ್ಟಿಗೆ ಸರ್ಕಾರವು “ಆರ್ಥಿಕ ಎಂಜಿನ್’ಗೆ ಬೀಗ ಹಾಕಿದೆ. ಇದೆಲ್ಲವೂ ವೈರಾಣು ಹರಡದಿರಲು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇ ಆಗಿವೆ. ಆದಾಗ್ಯೂ ದಿನೇ ದಿನೆ ಆತಂಕ ಹೆಚ್ಚಾಗುತ್ತಲೇ ಇದ್ದು, ಸೋಂಕು ಪ್ರಕರಣಗಳು ದೃಢಪಡುತ್ತಿದೆ.
Related Articles
Advertisement
ಇಷ್ಟು ಮಂದಿಯನ್ನು ಅತ್ಯಲ್ಪ ಅವಧಿಯಲ್ಲಿ ತಪಾಸಣೆ ನಡೆಸಲು ಇರುವ ಸಿಬ್ಬಂದಿ ಸಂಖ್ಯೆ 36 (12 ವೈದ್ಯರು, 12 ಶುಶ್ರೋಷಕಿಯರು ಮತ್ತು 12 ಮಂದಿ ಸಹಾಯಕರು) ಮಾತ್ರ. ಇವರು ತಲಾ 18 ಮಂದಿಯಂತೆ ಎರಡು ಶಿಫ್ಟ್ ನಲ್ಲಿ ಕೆಲಸ ನಿರ್ವಹಿಸುತ್ತಾರೆ. ಅವಸರ ಮತ್ತು ಆತಂಕದಲ್ಲಿರುವ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿಯನ್ನು ಕ್ಷಣಮಾತ್ರದಲ್ಲಿ ಪಡೆದು, ಸಮಾಲೋಚನೆ ಮಾಡವುದು ಸಿಬ್ಬಂದಿಗೆ ಸವಾಲಿನ ಕೆಲಸ. ಇಲ್ಲಿ ಒತ್ತಡವೂ ಹೆಚ್ಚಾಗುತ್ತಿದ್ದು, ಇದರಿಂದಲೇ ಸೋಂಕಿತರ ಪೈಕಿ ಯಾರೂ ವಿಮಾನ ನಿಲ್ದಾಣದಲ್ಲಿ ಶಂಕಿತರು ಎಂದು ಗುರುತಾಗಲಿಲ್ಲ ಹಾಗೂ ಆಸ್ಪತ್ರೆಗೆ ನೇರವಾಗಿ ಬರಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅರ್ಥ ವ್ಯವಸ್ಥೆ ಮೇಲೆ ದೀರ್ಘಾವಧಿ ಪರಿಣಾಮ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ ಬಂದ್ ರಾಜ್ಯದ ಆರ್ಥಿಕ ಯಂತ್ರ (ಎಕನಾಮಿಕ್ ಎಂಜಿನ್)ವನ್ನು ಸ್ಥಗಿತಗೊಳಿಸಿದೆ. ಈ ಯಂತ್ರ ಅಲ್ಪಾವಧಿಗೆ ಸ್ತಬ್ಧಗೊಂಡಿದ್ದರೂ, ಅರ್ಥ ವ್ಯವಸ್ಥೆ ಮೇಲೆ ದೀರ್ಘಾವಧಿ ಪರಿಣಾಮ ಬೀರಲಿದೆ. ದೇಶಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ನಾಲ್ಕನೇ ರಾಜ್ಯ ಕರ್ನಾಟಕ. 2019-20ರ ಸರ್ಕಾರಿ ಅಂಶಗಳ ಪ್ರಕಾರವೇ ದೇಶದ ಜಿಡಿಪಿ (ಒಟ್ಟಾರೆ ಆಂತರಿಕ ಉತ್ಪಾದನೆ)ಯಲ್ಲಿ ರಾಜ್ಯದ ಕೊಡುಗೆ ಶೇ. 7.5ರಷ್ಟು ಅಂದರೆ 15.88 ಲಕ್ಷ ಕೋಟಿ ರೂ. ಆರ್ಥಿಕ ಬೆಳವಣಿಗೆಯಲ್ಲಿ ದಕ್ಷಿಣ ಭಾರತದಿಂದ ತಮಿಳುನಾಡು ನಂತರ ಅತ್ಯಧಿಕ ಪಾಲು ಕರ್ನಾಟಕದ್ದಾಗಿದೆ.
ಇದರಲ್ಲಿ ಐಟಿ-ಬಿಟಿಯದ್ದು ಸಿಂಹಪಾಲು. ಈಗ ಕೊರೊನಾ ವೈರಸ್ ಆ ಆದಾಯ ಮೂಲಕ್ಕೇ ಕೈಹಾಕಿದೆ. ಈಗಾಗಲೇ ಕೇಂದ್ರದಿಂದ ಆದಾಯ ಕಡಿತ ಹಾಗೂ ನೆರೆಹಾವಳಿಯಿಂದ ತತ್ತರಿಸಿರುವ ರಾಜ್ಯಕ್ಕೆ ಇದು ಕೇವಲ ಎಂಟು ತಿಂಗಳ ಅಂತರದಲ್ಲಿ ಮೂರನೇ ಪೆಟ್ಟು. ಇದರಿಂದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೊಸ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಬೆಳವಣಿಗೆಯಲ್ಲಿ ಇದು ಪರಿಣಾಮ ಬೀರಲಿದೆ. ವಾರದಲ್ಲೇ ತೀವ್ರತೆ ಕಡಿಮೆಯಾದರೆ, ಅಲ್ಪಾವಧಿಯಲ್ಲೇ ಚೇತರಿಸಿಕೊಳ್ಳಬಹುದು. ಒಂದು ವೇಳೆ ನಂತರದಲ್ಲೂ ಮುಂದುವರಿದರೆ, ಕಷ್ಟ ಆಗಲಿದೆ’ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸೆೆ§ (ಅಸೋಚಾಮ್) ಕರ್ನಾಟಕ ಘಟಕದ ಅಧ್ಯಕ್ಷ ಸಂಪತ್ ರಾಮನ್ ತಿಳಿಸುತ್ತಾರೆ.
ಕೇವಲ ವಾರದಮಟ್ಟಿಗೆ ಆರ್ಥಿಕ ಯಂತ್ರ ಸ್ಥಗಿತಗೊಂಡರೂ, ಇದರಿಂದ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತದೆ. ಯಾಕೆಂದರೆ, ಐಟಿ-ಬಿಟಿ, ಜವಳಿ ರಫ್ತಿನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಜಾಗತಿಕ ಮಹಾಮಾರಿಯಿಂದ ಈ ರಫ್ತಿಗೆ ಬ್ರೇಕ್ ಬಿದ್ದಿದೆ. ಇನ್ನು ಕಂಪೆನಿಗಳು ಉದ್ಯೋಗಿಗಳನ್ನು ಮನೆಯಲ್ಲಿ ಕೂರಿಸಿ, ಯಾವುದೇ ಉತಾಾ³ದನೆ ಇಲ್ಲದಿದ್ದರೂ ವೇತನ ನೀಡಬೇಕಾಗುತ್ತದೆ. ಇದು ಅಗತ್ಯ ಮತ್ತು ಅನಿವಾರ್ಯ ಕೂಡ. ಆದರೆ, ಕಂಪೆನಿಗಳ ದೃಷ್ಟಿಯಿಂದ ಇದನ್ನು ವಿಶ್ಲೇಷಿಸಿದಾಗ ದೊಡ್ಡ ಹೊರೆ ಆಗುತ್ತದೆ ಎಂದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘ (ಬಿಸಿಐಸಿ) ಮಾಜಿ ಅಧ್ಯಕ್ಷ ಹಾಗೂ ವಲ್ಲಿಯಪ್ಪ ಗ್ರೂಪ್ ಅಧ್ಯಕ್ಷ ತ್ಯಾಗು ವಲ್ಲಿಯಪ್ಪ ಅಭಿಪ್ರಾಯಪಡುತ್ತಾರೆ.
ಐಟಿ-ಬಿಟಿ ಎಲ್ಲರೂ ಮನೆಯಿಂದ ಕೆಲಸ ಮಾಡಲು ಆಗುವುದಿಲ್ಲ. ಉದಾಹರಣೆಗೆ ಕೆಲವು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಕಚೇರಿಗೆ ತೆರಳಿಯೇ ನಿರ್ವಹಿಸಬೇಕಾಗುತ್ತದೆ ಎಂದ ಅವರು, ಈ ಹಿಂದೆ 1987ರಲ್ಲಿ ಪ್ಲೇಗ್ ಬಂದ ಸಂದರ್ಭದಲ್ಲಿ ಇದೇ ರೀತಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿತ್ತು. ಆದರೆ, ಆರು ತಿಂಗಳಲ್ಲಿ ಫಿನಿಕ್ಸ್ ರೀತಿಯಲ್ಲಿ ಚೇತರಿಕೆ ಕಂಡಿತ್ತು. ಪ್ರಸ್ತುತ ವೈರಸ್ ವ್ಯಾಪಿಸುವ ವ್ಯಾಪಕತೆ ಮೇಲೆ ಇದು ಅವಲಂಭಿಸಿದೆಎಂದೂ ಅವರು ಹೇಳಿದರು. ಪ್ರಯಾಣಿಕರ ಪ್ಯಾರಸಿಟಮಲ್ ಪ್ರಮಾದ: ಯಾರಾದರೂ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದ್ದರೆ, ಥರ್ಮಲ್ ಸ್ಕ್ಯಾನರ್‌ನಲ್ಲಿ ಯಾವುದೇ ಕಾರಣಕ್ಕೂ ಜ್ವರ ಇದ್ದರೆ ಅಥವಾ ದೇಹದ ತಾಪಮಾನ ಏರಿಕೆಯಾಗಿದ್ದರೆ ಗೊತ್ತಾಗುವುದಿಲ್ಲ. ಒಂದು ವೇಳೆ ವಿದೇಶದಿಂದ ಬರುವ ಪ್ರಯಾಣಿಕರು ತಮಗೆ ಜ್ವರ, ಶೀತ, ಕೆಮ್ಮಿನ ಮುನ್ಸೂಚನೆಯಿಂದ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದರೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶಂಕಿತರು ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಅಂಶವೂ ತಪಾಸಣೆಗೆ ಹಿನ್ನಡೆ ಉಂಟು ಮಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಪ್ರಯಾಣಿಕರೊಟ್ಟಿಗೆ ಸಮಾಲೋಚನೆ ಅತ್ಯಗತ್ಯವಿರುತ್ತದೆ. ಈ ಕುರಿತು ಪ್ರಯಾಣಿಕರು ಎಚ್ಚೆತ್ತುಕೊಳ್ಳುವುದು ಹಾಗೂ ಆರೋಗ್ಯ ಇಲಾಖೆಯು ಗಮನವಹಿಸಿ ಸಮಾಲೋಚನೆ ಅವಶ್ಯಕತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞ ನರೇಶ್ ಶೆಟ್ಟಿ. ವಿದ್ಯಾವಂತರಿಂದಲೇ ನಿರ್ಲಕ್ಷ್ಯ: ವಿದೇಶದಿಂದ ಬರುತ್ತಿರುವವರು ಕಡ್ಡಾಯವಾಗಿ ಮನೆಯಲ್ಲಿಯೇ 14 ದಿನ ನಿಗಾದಲ್ಲಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ, ಈ ಸೂಚನೆಯನ್ನು ವಿದೇಶದಿಂದ ಬಂದವರು ನಿರ್ಲಕ್ಷ್ಯ ಮಾಡುತ್ತಿರುವುದು ಸೋಂಕು ಹರಡಲು, ಅನಾವಶ್ಯಕವಾಗಿ ಶಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ವಿದೇಶದಿಂದ ಬಂದ ಸೋಂಕಿತರು ಮನೆಯ ಕೊಠಡಿಯಲ್ಲಿ ಉಳಿಯದೇ ಮಾಲ್‌ಗಳು, ಆಫೀಸ್, ಶಾಪಿಂಗ್ ಕಾಂಪ್ಲೆಕ್ಸ್ ಎಂದು ಅಲೆದಾಡುತ್ತಿದ್ದಾರೆ. ಇದರ ಪರಿಣಾಮವೇ ಟೆಕ್ಕಿ ಕುಟುಂಬದ ಇಬ್ಬರು ವಿದೇಶ ಪ್ರವಾಸ ಮಾಡದಿದ್ದರೂ ಸೋಂಕಿಗೆ ತುತ್ತಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಸೋಂಕಿತರ ಸಂಪರ್ಕ ಹಿನ್ನೆಲೆ ಸೋಂಕು ಪರೀಕ್ಷೆಗೊಳಗಾಗಿದ್ದಾರೆ. ಸೋಂಕಿತ ಮಗುವಿನ ಶಾಲೆಯ ಮಕ್ಕಳನ್ನು ಸೇರಿ ಸಾವಿರಾರು ಮಂದಿ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇನ್ನು ಸೋಂಕಿತರ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಿನ ಆರೋಗ್ಯ ಇಲಾಖೆಯ ಸವಾಲಿನ ಕೆಲಸವಾಗಿದೆ. “ವಿದೇಶಕ್ಕೆ ಹೋಗಿ ಬಂದವರು ತಮ್ಮ ಹಾಗೂ ಇತರರ ಸುರಕ್ಷಾ ದೃಷ್ಟಿಯಿಂದ ಮನೆಯಲ್ಲಿಯೇ ನಿಗಾದಲ್ಲಿರಬೇಕು. ಎಲ್ಲಾ ಮುಂಜಾಕ್ರತಾ ಕ್ರಮ ಕೈಗೊಳ್ಳಬೇಕು. ನಿಗಾ ಕುರಿತು ನಿರ್ಲಕ್ಷ್ಯ ಹೆಚ್ಚಾದರೆ ಸೋಂಕು ಹೆಚ್ಚಾಗುತ್ತದೆ. ಸಾಮಾನ್ಯ ಜನರು, ತಮ್ಮದಲ್ಲದ ತಪ್ಪಿಗೆ ಕೊರೊನಾ ಸೋಂಕಿನ ಪರಿಣಾಮ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ಆರೋಗ್ಯ ತಜ್ಞ ಡಾ.ಸುದರ್ಷನ್ ಬಲ್ಲಾಳ್. ಹೆದರಿ ಹಾರಿ ಬರುತ್ತಾರೆ!: ಭಾರತದಿಂದ ವಿದೇಶಕ್ಕೆ ತೆರಳಿದ್ದವರು ಹಾಗೂ ವಿದೇಶದಲ್ಲಿ ವಾಸವಿರುವ ಭಾರತೀಯರು ಅನಾರೋಗ್ಯ ಕಾಣಿಸಿಕೊಂಡ ಕೂಡಲೇ ಭಾರತಕ್ಕೆ ಹಿಂದಿರುಗುತ್ತಿದ್ದಾರೆ, ಕೆಲವರನ್ನು ಅಲ್ಲಿನ ಸರ್ಕಾರಗಳೇ ತಾಯ್ನಾಡಿಗೆ ತೆರಳುವಂತೆ ಹೇಳುತ್ತಿವೆ. ವಿದೇಶದಲ್ಲಿಯೇ ಅವರಿಗೆ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಇದು ಕೊರೊನಾ ಜಾಗತಿಕ ಮಾಹಾಮಾರಿ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಕಾನೂನಾತ್ಮಕ ಚೌಕಟ್ಟಿನ ಕೊರತೆಯನ್ನು ಸೂಚಿಸುತ್ತದೆ. ಇನ್ನಾದರು ಸರ್ಕಾರಗಳು ಎಚ್ಚೆತ್ತುಕೊಂಡು ಅನಾರೋಗ್ಯಕ್ಕೆ ಒಳಗಾದವರಿಗೆ ಆಯಾ ದೇಶಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ಕ್ರಮವಹಿಸಬೇಕಿದೆ ಎನ್ನುತ್ತಾರೆ ತಜ್ಞರು. ಹಾಟ್‌ಸ್ಪಾಟ್‌ಗಳಲ್ಲಿ ಇಲ್ಲ ಜಾಗೃತಿ, ಮುಂಜಾಗ್ರತೆ
* ವಿದೇಶ ಪ್ರವಾಸಿಗರು, ಅವರೊಟ್ಟಿಗೆ ಸಂಪರ್ಕ ಸಾಧ್ಯತೆಗಳಿರು ವವರು , ಟೆಕ್ಕಿಗಳು ಹೆಚ್ಚು ಓಡಾಡುವ ನಗರದ ಹಾಟ್‌ಸ್ಪಾಟ್‌ಗಳಾದ ವಿಮಾನ ನಿಲ್ದಾಣ ರಸ್ತೆ, ಎಂ.ಜಿ. ರಸ್ತೆ, ಬ್ರಿಗೈಡ್ ರಸ್ತೆ, ಇಂದಿರಾನಗರ, ಕೋರಮಂಗಲದ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಪ್ರಮುಖ ರಸ್ತೆಗಳು, ಅಲ್ಲಿನ ಕಾಫಿ ಡೇಗಳು, ಯಾವುದೇ ವಾಣಿಜ್ಯ ಮಳಿಗಳಲ್ಲಿ ಕೊರೊನಾ ಕುರಿತು ಯಾವುದೇ ಜಾಗೃತಿ ಫಲಕಗಳಿಲ್ಲ. * ವಿದೇಶದಿಂದ ಹೊರ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲು, ಬಸ್ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ನಗರದ ಯಾವ ರೈಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್, ಶಾಂತಿನಗರ ಬಸ್‌ನಿಲ್ದಾಣಗಳಲ್ಲಿ ಕ್ರಮಕೈಗೊಂಡಿಲ್ಲ. ಯಾವುದೇ ಜಾಗೃತಿ, ಸೂಚನಾ ಫಲಕಗಳೂ, ಮಾಹಿತಿ ಕೇಂದ್ರವೂ ಇಲ್ಲ. ಈ ಕುರಿತು ಬಿಬಿಎಂಪಿ , ಆರೋಗ್ಯ ಇಲಾಖೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. * ಟೆಕ್ಕಿಗಳು ಹೆಚ್ಚು ಓಡಾಟ ನಡೆಸುವ ಹಾಗೂ ಜನದಟ್ಟಣೆ ಇರುವ ಮೆಟ್ರೋ ಯಾವ ನಿಲ್ದಾಣದಲ್ಲಿಯೂ ತಪಾಸಣೆ ವ್ಯವಸ್ಥೆ ಇಲ್ಲ. ಇನ್ನು ಮೆಟ್ರೋ ಪ್ರಯಾಣಿಕರ ಭದ್ರತಾ ತಪಾಸಣೆಗೆ ಮಾಡುವವರಿಗೂ ಮಾಸ್ಕ್ ನೀಡಿಲ್ಲ. * ವಿದೇಶದಿಂದ ಬರುವವರ ಪೈಕಿ ಹೆಚ್ಚಿನವರು ತಂಗಲು ತೆರಳುವ ಐಷಾರಾಮಿ ಹೋಟೆಲ್‌ಗಳಲ್ಲಿಯೂ ಕೊರೊನಾ ಮುನ್ನೆಚ್ಚರಿಗೆ ಆದ್ಯತೆ ನೀಡಿಲ್ಲ. ಬಹುತೇಕ ಐಷಾರಾಮಿ ಹೋಟೆಲ್‌ಗಳು ಗ್ರಾಹಕರ ಸಮಾಲೋಚನೆ, ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ. ಇದಕ್ಕಾಗಿಯೇ ಪ್ರತ್ಯೇಕ ಕಾನೂನು ಅಗತ್ಯವಿದೆ. * ಬಹುತೇಕ ಎಟಿಎಂಗಳ ಕೇಂದ್ರಗಳಲ್ಲಿ ಟಚ್ ಸ್ಕ್ರೀನ್ ಮೂಲಕವೇ ವ್ಯವಹಾರ ನಡೆಯುತ್ತಿದೆ. ಕ್ಷಣ ಮಾತ್ರದಲ್ಲಿಯೇ ಒಬ್ಬರ ನಂತರ ಮತ್ತೂಬ್ಬರು ಎಟಿಎಂ ಟಚ್ ಸ್ಕ್ರೀನ್ ಬಳಸುತ್ತಿದ್ದಾರೆ. ಇವುಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಬ್ಯಾಂಕ್‌ಗಳು ಕೂಡಾ ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿಲ್ಲ. * ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್, ವಿಕ್ಟೋರಿಯಾ, ಕೆ.ಸಿ.ಜನರಲ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಕೊರೊನಾ ಸಹಾಯ / ಮಾಹಿತಿ ಕೇಂದ್ರ (ಹೆಲ್ಪ್ ಡೆಸ್ಕ್ ) ತೆರೆದಿಲ್ಲ. ಇಂದಿಗೂ ಜನ ಕೊರೊನಾ ಎಂದರೆ ಗಾಬರಿಯಿಂದ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ತೆರಳುತ್ತಿದ್ದಾರೆ. * ಬಿಬಿಎಂಪಿ ಆಯುಕ್ತರು ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ, ನಗರದ ಬಹುತೇಕ ಕಡೆ ಪಾಲನೆಯಾಗುತ್ತಿಲ್ಲ. * ಜಯಪ್ರಕಾಶ್ ಬಿರಾದಾರ್