Advertisement

ಕಣಕ್ಕಿಳಿದ ಘಟಾನುಘಟಿ ನಾಯಕರು

11:38 AM May 27, 2018 | |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮೂರು ಪ್ರಮುಖ ಪಕ್ಷಗಳ ನಾಯಕರ ದಂಡು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದರೂ ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಪರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪ್ರಜ್ವಲ್‌ ರೇವಣ್ಣ ಪ್ರಚಾರ ನಡೆಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಪರ ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಮುಖಂಡರು ಪ್ರಚಾರ ನಡೆಸಿದರು.

ಇತ್ತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಪರ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯುರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಚಾರ ನಡೆಸಿದರು. ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಮೇ 28ರಂದು ಮತದಾನ ನಡೆಯಲಿದೆ. 

ಜೆ.ಪಿ.ಪಾರ್ಕ್‌ ವಾರ್ಡ್‌ನ ಚಾಮುಂಡೇಶ್ವರಿ ನಗರ ವೃತ್ತದಿಂದ ಪ್ರಚಾರ ಕಾರ್ಯ ಆರಂಭಿಸಿದ ದೇವೆಗೌಡರು, ಬಳಿಕ ಜಾಲಹಳ್ಳಿ, ಪೀಣ್ಯ, ಎಚ್‌ಎಂಟಿ ಬಡಾವಣೆ ಸೇರಿದಂತೆ ಹಲವೆಡೆ ಪ್ರಚಾರದಲ್ಲಿ ತೊಡಗಿಕೊಂಡರು. ಈ ವೇಳೆ ಕಾಂಗ್ರೆಸ್‌ ಜತೆಗಿನ ಮೈತ್ರಿಯ ಹೊರತಾಗಿಯೂ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ವಾಗ್ಧಾಳಿ ನಡೆಸಿದರು. ಜತೆಗೆ ತಮ್ಮ ವಿರುದ್ಧ ಆರೋಪ ಮಾಡಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 

ಇನ್ನೊಂದೆಡೆ ಬಿ.ಎಸ್‌.ಯಡಿಯೂರಪ್ಪ, ಅನ್ನಪೂರ್ಣೇಶ್ವರಿ ಬಡಾವಣೆ, ರೈಲ್ವೆ ಬಡಾವಣೆ, ಬಾಲಾಜಿ ಬಡಾವಣೆ, ಮಲ್ಲತಹಳ್ಳಿ, ಉಲ್ಲಾಳ, ಜ್ಞಾನಭಾರತಿ, ಪಾಪರೆಡ್ಡಿ ಪಾಳ್ಯ ಸೇರಿ ಹಲವೆಡೆ ತೆರೆದ ವಾಹನ ಹಾಗೂ ಬೈಕ್‌ ರ್ಯಾಲಿ ಮೂಲಕ ಮತಯಾಚಿಸಿದರು. ಈ ವೇಳೆ ಮಾತನಾಡಿದ ಬಿಎಸ್‌ವೈ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರೈಸಿರುವುದು ಸಂತಸ ತಂದಿದೆ.

Advertisement

ಮೋದಿಯವರ ಕನಸು ಸಾಕಾರಗೊಳಿಸಲು ಬಿಜೆಪಿ ಗೆಲ್ಲಿಸಬೇಕಿದ್ದು, ಕಾಂಗ್ರೆಸ್‌ ಅಭ್ಯರ್ಥಿ ನಡೆಸಿದ ಅಕ್ರಮದಿಂದಲೇ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಈ ಮೈತ್ರಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಯಾಗುವುದಿಲ್ಲ. ಹೀಗಾಗಿ ಮತದಾರರು ಬಿಜೆಪಿಗೆ ಮತ ನೀಡಬೇಕು ಎಂದು ಕೋರಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಸರ್ಕಾರ ರಚನೆಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಕ್ಷೇತ್ರದ ಚುನಾವಣೆ ಮತ್ತೆ ಎದುರಾಳಿಗಳಾಗಿವೆ. ಇದರಿಂದ ಎರಡು ಪಕ್ಷಗಳ ನಡುವೆ ಸರ್ಕಾರ ಮಟ್ಟದಲ್ಲಿಯೇ ಭಿನ್ನಾಭಿಪ್ರಾಯ ಮೂಡಿರುವುದು ಬಹಿರಂಗವಾಗಿದೆ ಎಂದರು. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಶುಕ್ರವಾರ ಸಂಜೆಯಿಂದ ಮನೆ ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ಬಂದ್‌ ಇಲ್ಲ: ರೈತರ ಸಾಲ ಮನ್ನಾಗೆ ಒತ್ತಾಯಿಸಿ ಮೇ 28ರಂದು ರಾಜ್ಯದಾದ್ಯಂತ ರೈತರು ನಡೆಸಲಿರುವ ಬಂದ್‌ಗೆ ಬೆಂಬಲ ನೀಡಿದ್ದೇವೆ. ಆದರೆ, ಆರ್‌.ಆರ್‌.ನಗರ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂದ್‌ ನಡೆಯುವುದಿಲ್ಲ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next