Advertisement

ಕಾನೂನು, ಪಕ್ಷದ ಒತ್ತಡಕ್ಕೆ ಸಿಲುಕಿದ ಸರ್ಕಾರ

06:00 AM Jan 15, 2018 | Team Udayavani |

ಬೆಂಗಳೂರು: ಜಿಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಐದು ವರ್ಷ ಅಧಿಕಾರ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾನೂನನ್ನು ಆಡಳಿತಾರೂಢ ಕಾಂಗ್ರೆಸ್‌ ಪಕ್ಷವೇ ಉಲ್ಲಂಘನೆ ಮಾಡುವ ರಾಜಕೀಯ ಇಕ್ಕಟ್ಟಿಗೆ ಈಗ ಸಿಲುಕಿದೆ.

Advertisement

ಅಧ್ಯಕ್ಷರ ಐದು ವರ್ಷ ಅಧಿಕಾರಾವಧಿಗೆ ಆಡಳಿತ ಪಕ್ಷದವರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು, ಅಧ್ಯಕ್ಷರ ಅವಧಿಯನ್ನು 20 ತಿಂಗಳಿಗೆ ಬದಲಾಯಿಸುವಂತೆ ಕಾಂಗ್ರೆಸ್‌ ಮುಖಂಡರು ಮತ್ತು ಸಚಿವರ ಮೇಲೆ ಜಿಪಂ ಸದಸ್ಯರು ಒತ್ತಡ
ಹೇರಲಾರಂಭಿಸಿದ್ದಾರೆ.

ಒಬ್ಬರೇ ಐದು ವರ್ಷ ಅಧ್ಯಕ್ಷರಾಗಿದ್ದರೆ ರಾಜಕೀಯವಾಗಿ ತಮಗಿಂತ ಹೆಚ್ಚು ಪ್ರಬಲರಾಗುತ್ತಾರೆ ಎನ್ನುವ ಕಾರಣಕ್ಕೆ ಶಾಸಕರೂ ಸಹ ಜಿಪಂ ಅಧ್ಯಕ್ಷರ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಹೊಸ ಕಾಯ್ದೆ ಜಾರಿಯಿಂದ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ಸದಸ್ಯರಿಗೆ ಐದು ವರ್ಷ ಅಧಿಕಾರ ಇಲ್ಲದಂತಾಗಿರುವುದರಿಂದ ಜಿಪಂ ಸದಸ್ಯರು ಅಧ್ಯಕ್ಷರ ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯ ಸರ್ಕಾರ ಪಕ್ಷದ ಸದಸ್ಯರ ಒತ್ತಡವನ್ನೂ ನಿರ್ಲಕ್ಷಿಸಲಾಗದೇ ತಾನೇ ಮಾಡಿರುವ ಕಾನೂನು ಮುರಿಯಲಾಗದೇ ಸಂದಿಗಟಛಿತೆಯಲ್ಲಿ ಸಿಲುಕಿ ಕೊಂಡಿದೆ.

ಪಕ್ಷದ ಜಿಪಂ ಸದಸ್ಯರ ಒತ್ತಡಕ್ಕೆ ಮಣಿದು ಚಿತ್ರದುರ್ಗ ಜಿಪಂ ಅಧ್ಯಕ್ಷರ ಬದಲಾವಣೆಗೆ ಕೈ ಹಾಕಿತು. ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದರಿಂದ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್‌, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರನ್ನೇ ಪಕ್ಷದಿಂದ ಅಮಾನತು ಮಾಡಿದೆ.

Advertisement

ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಅತಂತ್ರ ರಾಜಕಾರಣದಿಂದ ಅಭಿವೃದಿಟಛಿ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದು ಅಂದು ಶಾಸಕರಾಗಿದ್ದ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವರ್ಧನೆಗೆ ಸಮಿತಿ ರಚಿಸಿ ವರದಿ ಪಡೆಯಲಾಗಿತ್ತು. ರಮೇಶ್‌ ಕುಮಾರ್‌ ನೇತೃತ್ವದ ಸಮಿತಿ ಕಾಯ್ದೆ ಸಮಗ್ರ ತಿದ್ದುಪಡಿಗೆ ಸುಮಾರು 80 ಶಿಫಾರಸುಗಳನ್ನು ಮಾಡಿತ್ತು.

ಅವುಗಳಲ್ಲಿ ಪ್ರಮುಖವಾಗಿದ್ದು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿ 5 ವರ್ಷ ಕಡ್ಡಾಯಗೊಳಿಸಲಾಗಿತ್ತು. ಅನಗತ್ಯ ಕಾರಣಗಳಿಗೆ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶ ಕಲ್ಪಿಸಬಾರದೆಂದು ಕನಿಷ್ಠ 30 ತಿಂಗಳು ಅವಿಶ್ವಾಸ ನಿರ್ಣಯಕ್ಕೂ ಅವಕಾಶ ಇಲ್ಲದಂತೆ ಕಾನೂನು ರೂಪಿಸಲಾಗಿತ್ತು. ಅದರಂತೆ 2016ರಲ್ಲಿ ರಾಜ್ಯದಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸಲಾಗಿದೆ. ಅಧ್ಯಕ್ಷರಿಗೆ ರಾಜ್ಯಸಚಿವರ ದರ್ಜೆ ಸ್ಥಾನಮಾನ, ಸರ್ಕಾರಿ ಬಂಗ್ಲೆ, ಕಾರ್‌ ಮತ್ತು ಪ್ರತಿ ತಿಂಗಳು 35 ಸಾವಿರ ರೂ. ಸಂಬಳ ನೀಡುತ್ತಿರುವುದು ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಕಣ್ಣು ಕುಕ್ಕುವಂತಾಗಿದೆ.

ರಾಜಕೀಯ ಒತ್ತಡ: ಆದರೆ, ಈಗಾಗಲೇ 20 ತಿಂಗಳ ಅವಧಿ ಮುಗಿದ ನಂತರ ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್‌ ಆಡಳಿತವಿರುವ ಜಿಲ್ಲಾ ಪಂಚಾಯಿತಿಗಳಲ್ಲಿ ಒತ್ತಡ ಹೆಚ್ಚಾಗಿದೆ. ಚಿತ್ರದುರ್ಗ, ಚಿಕ್ಕಬಳ್ಳಾಪುರ,ಕೊಪ್ಪಳ, ಯಾದಗಿರಿ, ರಾಯಚೂರು, ರಾಮನಗರ,ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಅಧ್ಯಕ್ಷರ ಬದಲಾವಣೆಗೆ ಕಸರತ್ತು ಆರಂಭವಾಗಿದೆ.

ಈಗಾಗಲೇ ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ರಾಜಕೀಯ ಒತ್ತಡಕ್ಕೆ ಮಣಿದು ಸ್ವ ಇಚ್ಚೆಯಿಂದ ರಾಜೀನಾಮೆ ಕೊಟ್ಟು ಮತ್ತೂಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಂಡ್ಯ ಜಿಪಂ ಅಧ್ಯಕ್ಷರು ಜನವರಿ 3 ರಂದು ಸ್ವ ಇಚ್ಚೆಯಿಂದ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲಿ ಶೀಘ್ರವೇ ಮತ್ತೂಬ್ಬ ಅಧ್ಯಕ್ಷರ ನೇಮಕ ಸರಳವಾಗಿ ನೆರವೇರಲಿದೆ. ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಕೇಶವ ರೆಡ್ಡಿಗೂ ಡಿಸೆಂಬರ್‌ ಅಂತ್ಯದೊಳಗೆ ರಾಜೀನಾಮೆ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. ಕೋರ್ಟ್‌ ಮೆಟ್ಟಿಲೇರಿದ ಅಧ್ಯಕ್ಷರು: ರಾಜಕೀಯ ಒತ್ತಡದಿಂದ ಬದಲಾವಣೆಗೆ ಆಗ್ರಹ ಕೇಳಿ ಬರುತ್ತಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಹಾಗೂ ತುಮಕೂರು ಜಿಪಂ ಅಧ್ಯಕ್ಷರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಧ್ಯಕ್ಷರ ಬದಲಾವಣೆ ಮಾಡುವ ಮುಂಚೆ ಕೋರ್ಟ್‌ ಗಮನಕ್ಕೆ ತರಬೇಕೆಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ನಾಲ್ವರು ಜಿಪಂ ಅಧ್ಯಕ್ಷರು ಕಾನೂನು ಪ್ರಕಾರ ಅಧಿಕಾರದಲ್ಲಿ ಇದ್ದರೂ, ರಾಜಕೀಯ ಒತ್ತಡಕ್ಕೆ ಸಿಲುಕಿ ಕೋರ್ಟ್‌ ರಕ್ಷಣೆಯಲ್ಲಿ ಮುಂದುವರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

20 ತಿಂಗಳ ಅಧಿಕಾರಕ್ಕೆ ಒತ್ತಡ: 1993ರ ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಧಿಯನ್ನು 20 ತಿಂಗಳಿಗೆ ನಿಗದಿ ಮಾಡಲಾಗಿತ್ತು. 2016ರ ಜಿಪಂ ಚುನಾವಣೆವರೆಗೂ ಅದೇ ವ್ಯವಸ್ಥೆಯನ್ನೇ
ಮುಂದುವರಿಸಿಕೊಂಡು ಬರಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣಾಭಿವೃದಿಟಛಿ ಸಚಿವ ಎಚ್‌.ಕೆ. ಪಾಟೀಲ್‌ ಅವರು ಆಸಕ್ತಿ ವಹಿಸಿ ರಮೇಶ್‌ ಕುಮಾರ್‌ ನೇತೃತ್ವದ ಸಮಿತಿ ರಚಿಸಿ ಪಂಚಾಯತ್‌ ವ್ಯವಸ್ಥೆಗೆ ಸಮಗ್ರ ತಿದ್ದುಪಡಿ ತಂದಿದ್ದರು.

ಅಧ್ಯಕ್ಷರ ಅಧಿಕಾರ ಅವಧಿ ಹಂಚಿಕೆ ಮಾಡುವುದರಿಂದ ಅಭಿವೃದಿಟಛಿ ಕುಂಠಿತ ಆಗುತ್ತದೆ. ಅಲ್ಲದೇ ಅಧಿಕಾರಿಗಳ ಕೈ ಮೇಲಾಗುತ್ತದೆ. ಅದನ್ನು ತಪ್ಪಿಸಲು ಐದು ವರ್ಷ ಅವಧಿ ಮಾಡಲಾಗಿದೆ. ಆದರೆ,ಸ್ಥಳೀಯವಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದಾಗ ಶಾಸಕರು ರಾಜಕೀಯ ಲೆಕ್ಕಾಚಾರದಲ್ಲಿ ಅಧಿಕಾರ ಹಂಚಿಕೆ ಸೂತ್ರ ಮಾಡುತ್ತಾರೆ.
–  ಸಿ. ನಾರಾಯಣ ಸ್ವಾಮಿ, ಗ್ರಾಮ ಸ್ವರಾಜ್‌ ಪಂಚಾಯತ್‌
ರಾಜ್‌ ಕಾಯ್ದೆ ತಿದ್ದುಪಡಿ ಸಮಿತಿ ಸದಸ್ಯ, ಮಾಜಿ ಸಂಸದರು.

Advertisement

Udayavani is now on Telegram. Click here to join our channel and stay updated with the latest news.

Next