Advertisement

ಸವರ್‌ಲೈನ್‌ ಭೂಮಿ ರಾಜ್ಯ ಸರ್ಕಾರದ್ದು!

12:19 PM Oct 09, 2018 | Team Udayavani |

ಬೆಂಗಳೂರು: ನಗರದ ವಿವಿಧೆಡೆ ತನ್ನ ಸುಪರ್ದಿಯಲ್ಲಿರುವ ಭೂಮಿ ಬಳಕೆಗೆ ಪ್ರತಿಯಾಗಿ 286.6 ಕೋಟಿ ರೂ. ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಈಚೆಗೆ ರಕ್ಷಣಾ ಇಲಾಖೆ ಸೂಚಿಸಿತ್ತು. ಆದರೆ, ಈಗ ಇದರ ಹತ್ತುಪಟ್ಟು ಹಣವನ್ನು ಸ್ವತಃ ರಕ್ಷಣಾ ಇಲಾಖೆಯೇ ಸರ್ಕಾರಕ್ಕೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ!

Advertisement

ಕಾವಲ್‌ಬೈರಸಂದ್ರದ ಸವರ್‌ಲೈನ್‌ ಗ್ರಾಮದ ಸರ್ವೇ ನಂಬರ್‌ 1ರಲ್ಲಿರುವ 231 ಎಕರೆ ಭೂಮಿ ತನಗೆ ಸೇರಿದ್ದು ಎಂದು ರಕ್ಷಣಾ ಇಲಾಖೆ ವಾದಿಸುತ್ತಿತ್ತು. ಇದೇ ಕಾರಣಕ್ಕೆ ಆ ಮಾರ್ಗದಲ್ಲಿ (ಕಾವಲ್‌ಬೈರಸಂದ್ರ-ಮೋದಿ ಗಾರ್ಡನ್‌ವರೆಗೆ) ಪರ್ಯಾಯ ರಸ್ತೆ ನಿರ್ಮಾಣ ಕಗ್ಗಂಟಾಗಿತ್ತು. ಆದರೆ, ಉದ್ದೇಶಿತ ಭೂಮಿ ರಾಜ್ಯ ಸರ್ಕಾರಕ್ಕೆ ಸೇರಿದೆ ಎಂಬುದು ತಡವಾಗಿ ಬೆಳಕಿಗೆಬಂದಿದೆ. ಈ ಭೂಮಿಯ ಮಾರುಕಟ್ಟೆ ಮೌಲ್ಯ ಅಂದಾಜು 3,117 ಕೋಟಿ ರೂ. ಆಗುತ್ತದೆ.

ನಗರದ ಒಟ್ಟಾರೆ ಎಂಟು ಕಡೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಕ್ಷಣಾ ಇಲಾಖೆಗೆ ಸೇರಿದ 45,175 ಚದರ ಮೀ. ಭೂಮಿ ಬಳಸಲಾಗುತ್ತಿದೆ. ಇದಕ್ಕಾಗಿ ಈಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಭೂಮಿ ಬಳಕೆಗೆ ಅನುಮತಿ ಪಡೆದಿದ್ದಾರೆ.

ಇದಕ್ಕೆ ಪ್ರತಿಯಾಗಿ 286.6 ಕೋಟಿ ರೂ. ನೀಡಬೇಕು ಎಂದು ರಕ್ಷಣಾ ಇಲಾಖೆ ಸೂಚಿಸಿದೆ. ಸರ್ಕಾರ ಕೂಡ ಈ ಷರತ್ತಿಗೆ ಒಪ್ಪಿತ್ತು. ಹೀಗೆ ಅನುಮತಿ ಪಡೆಯಲಾದ ಕಾಮಗಾರಿಯಲ್ಲಿ ಕಾವಲ್‌ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗಿನ ಪರ್ಯಾಯ ರಸ್ತೆ ಕೂಡ ಸೇರಿದೆ. ಇದಕ್ಕಾಗಿ 15.36 ಕೋಟಿ ರೂ. ಪಾವತಿಸುವಂತೆ ರಕ್ಷಣಾ ಇಲಾಖೆ ಹೇಳಿದೆ.

ಆದರೆ, ಈ ಪರ್ಯಾಯ ರಸ್ತೆ ಹಾದುಹೋಗುವ ಮಾರ್ಗ ಒಳಗೊಂಡಂತೆ ಸುತ್ತಲಿನ 231 ಎಕರೆ ಭೂಮಿ ರಕ್ಷಣಾ ಇಲಾಖೆಗೆ ಸೇರಿದ್ದಲ್ಲ, ರಾಜ್ಯ ಸರ್ಕಾರಕ್ಕೆ ಸೇರಿದ್ದು ಎಂಬುದು ದೃಢಪಟ್ಟಿದೆ. ಮುನಿಸ್ವಾಮಿ ಎಂಬುವರಿಗೆ ಸೇರಿದ್ದ ಈ ಭೂಮಿ, 1979ರ ಜೂನ್‌ನಲ್ಲೇ ಮೂಲ ದಾಖಲೆಗಳೊಂದಿಗೆ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಗೊಂಡಿದೆ.

Advertisement

ಈ ಸಂಬಂಧ 2010-11ರಲ್ಲಿ ಅಂದಿನ ನಗರದ ವಿಶೇಷ ಜಿಲ್ಲಾಧಿಕಾರಿ ಕೂಡ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ರಕ್ಷಣಾ ಇಲಾಖೆಯ ಎಸ್ಟೇಟ್‌ ಅಧಿಕಾರಿ ಕೂಡ ಪ್ರತಿವಾದಿ ಆಗಿದ್ದರು. ಆದರೆ, ಇದಕ್ಕಿಂತಲೂ ಹಿಂದಿನ ದಾಖಲೆಗಳು ತನ್ನ ಬಳಿ ಇವೆ ಎಂದು ರಕ್ಷಣಾ ಇಲಾಖೆ ವಾದ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳ ಪರಿಶೀಲನೆ: “ಸರ್ವೇ ದಾಖಲೆಗಳು ಮತ್ತು ಹಿಂದಿನ ವಿಶೇಷ ಜಿಲ್ಲಾಧಿಕಾರಿಗಳ ಆದೇಶ ಆಧರಿಸಿ ಉದ್ದೇಶಿತ ಸ್ಥಳಕ್ಕೆ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯಲಾಗುವುದು. ಈ ಸಂಬಂಧ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನಗರ ವಿಶೇಷ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳಿಗೂ ಗೊತ್ತಿರಲಿಲ್ಲ!: ಈ ಭೂಮಿ ರಾಜ್ಯ ಸರ್ಕಾರದ್ದು ಎಂಬುದು ಸ್ವತಃ ಅಧಿಕಾರಿಗಳಿಗೂ ಗೊತ್ತಿರಲಿಲ್ಲ. ಈಚೆಗೆ ಇದಕ್ಕೆ ಸಂಬಂಧಿಸಿದ ಆದೇಶ ಪ್ರತಿ ಸಿಕ್ಕಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಬೆಂಗಳೂರು ಉತ್ತರದಲ್ಲಿರುವ ಕಸಬಾ ಹೋಬಳಿಯಲ್ಲಿ ಬರುವ ಸವರ್‌ಲೈನ್‌ ಗ್ರಾಮದ ಈ ಭೂಮಿಯನ್ನು 1939ರಲ್ಲಿ ಮುನಿಸ್ವಾಮಿ ಎಂಬುವರು 2,310 ರೂ. ಪಾವತಿಸಿ, ಹರಾಜಿನ ಮೂಲಕ ಖರೀದಿಸಿದ್ದರು.

ನಂತರದಲ್ಲಿ ಈ ಭೂಮಿಯನ್ನು 1979ರಲ್ಲಿ ದಾಖಲೆಗಳೊಂದಿಗೆ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಜತೆಗೆ ಮುನಿಸ್ವಾಮಿ ಅವರ ಪುತ್ರ ಸಿದ್ದಪ್ಪ, ಈ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದಾರೆ. ಹಾಗಾಗಿ, ಸವರ್‌ಲೈನ್‌ ಗ್ರಾಮದ ಸ.ನಂ.1ರಲ್ಲಿ ಬರುವ 231 ಎಕರೆ ಜಾಗದ ಮೇಲೆ ರಾಜ್ಯ ಸರ್ಕಾರ ಹಕ್ಕಿದೆ. 

ಲೆಕ್ಕಾಚಾರ ಹೀಗೆ: ಸವರ್‌ಲೈನ್‌ ಗ್ರಾಮದ 231 ಎಕರೆ ಭೂಮಿ ಮಾರ್ಗಸೂಚಿ ದರ ಪ್ರತಿ ಚದರ ಮೀಟರ್‌ಗೆ 33,346 ರೂ. ಇದೆ. 231 ಎಕರೆಯನ್ನು ಚದರ ಮೀಟರ್‌ನಲ್ಲಿ ಪರಿವರ್ತಿಸಿದರೆ 9,34,824 ಚ.ಮೀ ಆಗುತ್ತದೆ. ಇದನ್ನು ಮಾರ್ಗಸೂಚಿ ದರದೊಂದಿಗೆ ಲೆಕ್ಕಹಾಕಿದರೆ ಇದರ ಮೌಲ್ಯ ಸುಮಾರು 3,117 ಕೋಟಿ ರೂ. ಆಗುತ್ತದೆ.

ಕಾರ್ಯಪಡೆ ಸಭೆ ಶೀಘ್ರ: ಉದ್ದೇಶಿತ ಸವರ್‌ಲೈನ್‌ ವ್ಯಾಪ್ತಿಯಲ್ಲಿ ಬರುವ ಭೂಮಿ ಸರ್ಕಾರದ್ದು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಇದಷ್ಟೇ ಅಲ್ಲ, ಹಲವು ಜಾಗಗಳು ರಕ್ಷಣಾ ಇಲಾಖೆ ಬಳಿ ಇದ್ದರೆ, ಇನ್ನು ಕೆಲವು ರಕ್ಷಣಾ ಇಲಾಖೆ ಜಾಗದಲ್ಲಿ ಸರ್ಕಾರಿ ಸಂಸ್ಥೆಗಳೂ ಇರಬಹುದು. ಇದನ್ನು ಪರಸ್ಪರ ಚರ್ಚಿಸಿ, ಇತ್ಯರ್ಥಪಡಿಸಿಕೊಳ್ಳಲು ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಇದರಲ್ಲಿ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ಅಧಿಕಾರಿಗಳು ಇದ್ದಾರೆ.

ಈಗಾಗಲೇ ಕಾರ್ಯಪಡೆ ಒಂದು ಬಾರಿ ಸಭೆ ನಡೆಸಿದ್ದು, ಶೀಘ್ರದಲ್ಲೇ ಮತ್ತೂಂದು ಸಭೆ ಕರೆಯಲಾಗುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ರಕ್ಷಣ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿನ ನಿರ್ದೇಶನದಂತೆ ನಮ್ಮ ಆದ್ಯತೆ ಕಾವಲ್‌ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗೆ ರಸ್ತೆ ನಿರ್ಮಾಣ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ.
ಮಹೇಂದ್ರ ಜೈನ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ

ರಕ್ಷಣಾ ಇಲಾಖೆ ಪಾಲಿಕೆಗೆ ಹಸ್ತಾಂತರಿಸಿರುವ ಭೂಮಿ, ಅದರ ಮೌಲ್ಯ
* ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗೆ ರಸ್ತೆ ನಿರ್ಮಾಣಕ್ಕೆ 21,600 ಚದರ ಮೀ. ಮೌಲ್ಯ: 133.04 ಕೋಟಿ ರೂ. 

* ಬ್ಯಾಟರಾಯನಪುರದ ರಾಷ್ಟ್ರೀಯ ಹೆದ್ದಾರಿ 7ರಿಂದ ಸಂಜೀವಿನಿನಗರವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 3,790 ಚ.ಮೀ. ಮೌಲ್ಯ: 4.73 ಕೋಟಿ ರೂ.

* ರಾಷ್ಟ್ರೀಯ ಹೆದ್ದಾರಿ 7 ಮತ್ತು ಹೆಬ್ಟಾಳ ಸರೋವರ ಬಡಾವಣೆ ಮಧ್ಯೆ ಆಮೊRà ಬಡಾವಣೆ ಮೂಲಕ ಸಂಪರ್ಕ ರಸ್ತೆಗೆ 2,003 ಚ.ಮೀ. ಮೌಲ್ಯ: 4.73 ಕೋಟಿ ರೂ.

* ಹೊಸೂರು-ಲುಸ್ಕರ್‌ ರಸ್ತೆ ವಿಸ್ತರಣೆಗೆ 10,637 ಚ.ಮೀ. ಮೌಲ್ಯ: 103 ಕೋಟಿ ರೂ.

* ಹಾಸ್ಮ್ಯಾಟ್‌ ಆಸ್ಪತ್ರೆಯಿಂದ ವಿವೇಕನಗರ 1ನೇ ಮುಖ್ಯರಸ್ತೆವರೆಗಿನ ಅಗರ ರಸ್ತೆ ಅಭಿವೃದ್ಧಿಗೆ 1,699 ಚ.ಮೀ. ಮೌಲ್ಯ: 8.78 ಕೋಟಿ ರೂ. 

* ಲೊಯರ್‌ ಅಗರ ರಸ್ತೆ ವಿಸ್ತರಣೆಗೆ 331 ಚ.ಮೀ. ಮೌಲ್ಯ: 1.83 ಕೋಟಿ ರೂ.

* ಡಿ.ಜೆ.ಹಳ್ಳಿಯ ಕಾವಲ್‌ ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆಗೆ 4,604 ಚ.ಮೀ. ಮೌಲ್ಯ: 15.36 ಕೋಟಿ ರೂ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next