Advertisement

Forest land: ದಾಖಲೀಕರಣಕ್ಕೆ ಸಮಿತಿ; 6 ತಿಂಗಳಲ್ಲಿ ಸಮಿತಿಯಿಂದ ವರದಿ ಪಡೆಯಲು ತೀರ್ಮಾನ

12:22 AM Oct 25, 2024 | Team Udayavani |

ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, 6 ತಿಂಗಳಲ್ಲಿ ಸಮಿತಿಯಿಂದ ವರದಿ ಪಡೆಯಲೂ ತೀರ್ಮಾನಿಸಿದೆ.

Advertisement

ಕೆಲವು ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರಕಾರಿ ಕಚೇರಿ, ಶಾಲೆ-ಕಾಲೇಜುಗಳೂ ಇವೆ. ಹೀಗಾಗಿ ಇದರ ಪರೀಶಿಲನೆ ಆಗಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಗುರುವಾರ ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಹಿಂದಿನ ಸಮಿತಿಯು ಸಮೀಕ್ಷೆ ನಡೆಸಿ 9,94,881.11 ಹೆಕ್ಟೇರ್‌ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು. ಆದರೆ, ಇದರಲ್ಲಿ ಲೋಪದೋಷ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ, ಕಂದಾಯ ವಿಭಾಗ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ನೇಮಿಸಲಾಗಿತ್ತು. ಈ ಸಮಿತಿಯು 3,30,186.93 ಹೆಕ್ಟೇರ್‌ ಪ್ರದೇಶವನ್ನು ಪರಿಭಾವಿತ ಎಂದು ಗುರುತಿಸಿತ್ತು. ಇದೀಗ ರಚಿಸಿರುವ ಹೊಸ ಸಮಿತಿಯಿಂದ ಕ್ರೋಢೀಕೃತ ವರದಿ ಪಡೆಯಲು ನಿರ್ಧರಿಸಲಾಗಿದೆ.

ಕಂದಾಯ-ಅರಣ್ಯ ಜಂಟಿ ಸರ್ವೇ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲಿ ಗೊಂದಲ ಇದೆಯೋ ಆ ಜಿಲ್ಲೆಗಳಲ್ಲಿ ಮತ್ತು ಒಂದೇ ಸರ್ವೇ ನಂಬರ್‌ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಎರಡೂ ಇರುವ ಭೂಮಿಯ ಜಂಟಿ ಸರ್ವೆ ನಡೆಸಿ ಪರಿಭಾವಿತ ಅರಣ್ಯದ ವಾಸ್ತವ ವರದಿ ಸಲ್ಲಿಸಲು ಸೂಚಿಸುವ ಬಗ್ಗೆ ಚರ್ಚಿಸಲಾಯಿತು.

ರಾಜ್ಯದ 20 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರೆಡು ಜಿಲ್ಲೆ ಆಯ್ಕೆ ಮಾಡಿಕೊಂಡು ಜಂಟಿ ಸರ್ವೆ ನಡೆಸಿದಲ್ಲಿ ಸಮಸ್ಯೆಗಳು, ಗೊಂದಲಗಳ ಬಗ್ಗೆ ತಿಳಿಯುತ್ತದೆ. ಇದು ನೂತನ ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನೆರವಾಗಲಿದೆ. ಎಲ್ಲ ಅಧಿಸೂಚಿತ ಮತ್ತು ಪರಿಭಾವಿತ ಅರಣ್ಯದ ಪಟ್ಟಿಯನ್ನು ನಕ್ಷೆ ಸಮೇತ ಅರಣ್ಯ ಇಲಾಖೆ ನಮಗೆ ನೀಡಿದರೆ, ತಾಳೆ ಮಾಡಿ ಪರಿಶೀಲನೆಗೆ ಅನುಕೂಲವಾಗುತ್ತದೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement

ಸುಮಾರು 3,30,186.93 ಹೆಕ್ಟೇರ್‌ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಸರಕಾರಿ ಕಚೇರಿ, ಶಾಲೆ, ಪಟ್ಟಾಭೂಮಿ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆಯಾಗಿದೆ. ಪುನರ್‌ ಪರಿಶೀಲನೆ ನೇಮಿಸುವ ಸಮಿತಿಯು ಇಂತಹ ಪ್ರದೇಶಕ್ಕೆ ಪರ್ಯಾಯವಾಗಿ ಮರಗಿಡಗಳಿಂದ ಸಮೃದ್ಧವಾದ ಇತರ ಪ್ರದೇಶಗಳನ್ನು ಗುರುತಿಸುವ ಕಾರ್ಯ ಮಾಡಬೇಕು.
– ಈಶ್ವರ್‌ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next