ರಾಯಚೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಮಾವಿನಕೆರೆ ಅಭಿವೃದ್ಧಿಗೆ ಬರೀ ವಿಘ್ನಗಳೇ ಎದುರಾಗುತ್ತಿವೆ. ಬಹಳ ವರ್ಷಗಳ ಬಳಿಕ ಹೂಳು ತೆರವು ಕಾರ್ಯಕ್ಕೆ ಮುಂದಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ ಅರೆಬರೆಯಾಗಿದ್ದು, ಮತ್ತದೇ ಅವ್ಯವಸ್ಥೆ ಮುಂದುವರಿದಿದೆ.
ಕೆರೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇವೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿಕೊಂಡು ಬರುತ್ತಿದ್ದರಾದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾತ್ರ ಮಾಡುತ್ತಿಲ್ಲ. ಈಚೆಗೆ ಕೆರೆ ನೀರೆಲ್ಲ ಖಾಲಿ ಮಾಡಿ ಹೂಳು ತೆರವು ಮಾಡುವ ಕಾರ್ಯಕ್ಕೆ ಮುಂದಾಗುವಷ್ಟರಲ್ಲಿ ಮುಂಗಾರು ಶುರುವಾಗಿ ಆ ಕೆಲಸವೂ ನಿಂತು ಹೋಗಿದೆ. ಬಿಜಿಎಸ್ ಸಂಘಟನೆ, ನಗರಸಭೆ, ಆರ್‌ಡಿಎ ಸಹಯೋಗದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಇನ್ನೇನು ಕೆರೆಗೆ ಹೊಸ ಕಳೆ ಬರಬಹುದು, ಚರಂಡಿ ನೀರು ಕೆರೆಗೆ ಸೇರಿಕೊಳ್ಳದೆ ಶುದ್ಧ ಮಳೆನೀರು ಶೇಖರಣೆಯಾಗಬಹುದು. ವಿಹಾರಿಗಳಿಗೆ ಆಹ್ಲಾದಕರ ವಾತಾವರಣ ನಿರ್ಮಾಣ ಆಗಬಹುದು ಎಂಬೆಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿದೆ. ಇನ್ನೂ ಹೂಳು ತೆರವು ಕಾಮಗಾರಿ ಶುರುವಾಗುತ್ತಿದ್ದಂತೆ ಕೆಲ ಮುಖಂಡರು ಕೆರೆ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ತೆರವು ಮಾಡಿ ಬಳಿಕ ಹೂಳು ತೆಗೆಯುವಂತೆ ಪಟ್ಟು ಹಿಡಿದರು. ಇದರಿಂದಲೂ ಕಾಮಗಾರಿಗೆ ಅಡಚಣೆ ಉಂಟಾಯಿತು.
20 ಎಕರೆಗೂ ಅಧಿಕ ಒತ್ತುವರಿ?: ಐತಿಹಾಸಿಕ ಮಾವಿನಕೆರೆ ಸುಮಾರು 400 ವರ್ಷಗಳಿಗೂ ಅ ಧಿಕ ಇತಿಹಾಸ ಹೊಂದಿದೆ. ನಗರದ ಹೃದಯ ಭಾಗದಲ್ಲಿರುವ ಈ ಕೆರೆ ತುಂಬಿದಾಗ ನೋಡುವುದೇ ಸೋಜಿಗವೆನಿಸುತ್ತಿತ್ತು. ಒಟ್ಟು 115 ಎಕರೆ 18 ಗುಂಟೆ ವಿಸ್ತೀರ್ಣದಲ್ಲಿತ್ತು. ಈಗ 95 ಎಕರೆಯಷ್ಟು ಕೆರೆ ಉಳಿದಿದ್ದು, ಉಳಿದ ಸ್ಥಳವೆಲ್ಲ ಒತ್ತುವರಿ ಆಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕೆರೆಯ ಮುಕ್ಕಾಲು ಭಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ, ಬಹುತೇಕ ಚರಂಡಿ ನೀರನ್ನು ಕೆರೆ ಬಿಡಲಾಗುತ್ತಿದೆ. ಇದರಿಂದ ನೀರೆಲ್ಲ ಕಲುಷಿತಗೊಂಡು ಜಲಚರಗಳು ಸಾವಿಗೀಡಾಗುತ್ತದೆ. ಅಲ್ಲದೇ, ಕೆಲವೊಮ್ಮೆ ಕೆರೆ ದಂಡೆ ಮಾರ್ಗವಾಗಿ ಓಡಾಡುವವರಿಗೆ ದುರ್ವಾಸನೆ ಬಡಿಯುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಹಾಕಬೇಕು ಎಂಬ ಕಾರಣಕ್ಕೆ ಜಿಲ್ಲಾಡಳಿತ ಕೆರೆ ನೀರನ್ನೆಲ್ಲ ಖಾಲಿ ಮಾಡಿಸಿ ಹೂಳು ತೆರವಿಗೆ ಮುಂದಾಗಿತ್ತು
ಮಾವಿನ ಕೆರೆ ಒತ್ತುವರಿ ತೆರವಿಗೆ ಪಟ್ಟು ಹಿಡಿದ ಕಾರಣ ಡಿಸಿಯವರು ಕಮಿಟಿ ರಚಿಸಿ ಸರ್ವೇಗೆ ಸೂಚನೆ ನೀಡಿದ್ದಾರೆ. ಮಳೆಗಾಲದ ಮುನ್ನ ಹೂಳು ತೆರವು ಮಾಡುವುದು ಅವೈಜ್ಞಾನಿಕ ಎಂದಷ್ಟೇ ನಾವು ಹೇಳಿದ್ದು. ಅಲ್ಲದೇ ಮೊದಲು ಒತ್ತುವರಿ ತೆರವಾಗಲಿ. ಸರ್ಕಾರಿ ಸ್ಥಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ತೆರವು ಮಾಡುವ ಅಧಿಕಾರ ಜಿಲ್ಲಾಡಳಿತಕ್ಕಿದೆ. ಒತ್ತುವರಿ ತೆರವಾಗುವವರೆಗೂ ಹೋರಾಟ ಮುಂದುವರಿಸುತ್ತೇವೆ.
ಎಂ.ವಿರುಪಾಕ್ಷಿ,
ಜೆಡಿಎಸ್ ಜಿಲ್ಲಾಧ್ಯಕ್ಷ
ಚರಂಡಿ ನೀರಿಗೆ ಬ್ರೇಕ್ ಬೀಳಲಿ
ಈ ಕೆರೆ ಅಂದ ಕೆಟ್ಟಿರುವುದು ಒತ್ತುವರಿಯಿಂದಲ್ಲ; ಚರಂಡಿ ನೀರೆಲ್ಲ ಕೆರೆಗೆ ಹರಿಸುವ ಕಾರಣಕ್ಕೆ. ಕೆರೆ ಪಾತ್ರದಲ್ಲಿ ಮನೆಗಳನ್ನು ಕಟ್ಟಿಕೊಂಡವರು ರಾಜಾರೋಷವಾಗಿ ತಮ್ಮ ಮನೆ ಚರಂಡಿ ನೀರನ್ನು ನೇರವಾಗಿ ಕೆರೆಗೇ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಕೆರೆಯಲ್ಲಿ ಮಳೆ ನೀರಿಗಿಂತ ಹೆಚ್ಚಾಗಿ ಚರಂಡಿ ನೀರೇ ಸೇರಿಕೊಳ್ಳುತ್ತಿದೆ. ಇದಕ್ಕೆ ಮೊದಲು ಬ್ರೇಕ್ ಹಾಕಿದರೆ ಕೆರೆಯ ಅರ್ಧ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗುತ್ತದೆ. ಈ ಹಿಂದೆ ಚರಂಡಿ ನೀರಿಗಾಗಿ ಪ್ರತ್ಯೇಕ ರಾಜಕಾಲುವೆ ನಿರ್ಮಿಸಿ ಅಲ್ಲಿಗೆ ಸಂಪರ್ಕ ಕಲ್ಪಿಸುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಆ ಕೆಲಸ ಇಂದಿಗೂ ಆಗಿಲ್ಲ. ಇನ್ನಾದರೂ ಆ ಕೆಲಸಕ್ಕೆ ವೇಗ ನೀಡಬೇಕಿದೆ. ನಗರದ ಬಹುತೇಕ ತ್ಯಾಜ್ಯವನ್ನೆಲ್ಲ ಇಲ್ಲಿಯೇ ವಿಲೇವಾರಿ ಮಾಡುವ ಕೆಟ್ಟ ಪದ್ಧತಿಯೂ ಇದೆ. ಇದರಿಂದಲೂ ಕೆರೆಯ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿದೆ. ಇನ್ನೂ ಒತ್ತುವರಿ ತೆರವು ಮಾಡುವುದರ ಜತೆಗೆ ಸುತ್ತಲೂ ಸೂಕ್ತ ಭದ್ರತೆ ಒದಗಿಸಿ, ಅಭಿವೃದ್ಧಿ ಪಡಿಸಿದರೆ ಕೆರೆಯ ಗತವೈಭವ ಮರುಕಳಿಸಬಹುದು.
*ಸಿದ್ದಯ್ಯಸ್ವಾಮಿ ಕುಕುನೂರು