Advertisement

ಭಾಷೆ, ಸಾಹಿತ್ಯದಿಂದ ಮಾತ್ರ ಕರ್ನಾಟಕದ ಸಮಗ್ರತೆ ಸಾಧ್ಯ

11:19 AM Dec 17, 2017 | Team Udayavani |

ಕುಲ್ಕುಂದ ಶಿವಾರವ್‌ ವೇದಿಕೆ : ಭಾಷೆ ಬದುಕಾಗಬೇಕು. ನಿತ್ಯ ಉಸಿರಾಗಬೇಕು. ಬದುಕಿನೊಂದಿಗೆ ಮಿಳಿತವಾಗಬೇಕು. ಭಾಷೆ, ಸಾಹಿತ್ಯಗಳಿಂದ ಮಾತ್ರ ಕರ್ನಾಟಕದ ಸಮಗ್ರತೆ ಸಾಧ್ಯ ಎಂದು ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ನಾ.ಕಾರಂತ ಪೆರಾಜೆ ಹೇಳಿದರು.

Advertisement

ಶನಿವಾರ ನಡೆದ ಪುತ್ತೂರು ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ ಅವರು, ವರ್ತಮಾನ ಹೇಳುವಷ್ಟು ಸುಖಕರವಲ್ಲ. ಕನ್ನಡದ ನೆಲದಲ್ಲಿ ಕನ್ನಡವನ್ನು ಉಳಿಸಿ ಎಂದು ಹೇಳಬೇಕಾಗಿದೆ. ರಾಜಧಾನಿಯ ಸುತ್ತ ಕಣ್ಣು ಹಾಯಿಸಿದಾಗ ನಮ್ಮೊಳಗಿನ ಭಾಷೆಯ ಕಣ್ಣು ದಣಿಯುತ್ತದೆ. ಅನ್ಯ ಭಾಷೆ, ಸಂಸ್ಕೃತಿಗಳು ಸ್ಥಳೀಯತೆಯ ಮೇಲ್ಮೆಗಳನ್ನು ತುಳಿಯುತ್ತಿವೆ ಎಂದರು.

ಕಲಿಕೆಯ ವಿಚಾರಕ್ಕೆ ಬಂದಾಗ ಕಾಲ ಬದಲಾಗಿಲ್ಲ. ಮನಃಸ್ಥಿತಿಗಳು ಪಲ್ಲಟಗೊಂಡಿವೆ. ಶಿಕ್ಷಣ ನೀತಿಗಳು ಅಳುತ್ತಿವೆ. ನಾಡಿನ ದೊರೆಗಳಿಗೆ ಭವಿಷ್ಯದ ಮನಸ್ಸುಗಳನ್ನು ಕಟ್ಟುವ ನೋಟಗಳಿಲ್ಲ. ಪಠ್ಯಗಳಲ್ಲಿ ಬದುಕಿನ ಸಂದೇಶಗಳಿಲ್ಲ. ಜಾತಿ, ಮತ, ವರ್ಗ ಮೊದಲಾದ ಬದುಕು ಬಯಸದ ಕಲಿಕಾ ಸರಕುಗಳು ತುಂಬಿವೆ ಎಂದು ಅವರು ವಿಷಾದಿಸಿದರು.

ಕೃಷಿ ಬದುಕು
ಭಾರತದಲ್ಲಿ ಮಾತ್ರ ಬದುಕಿನೊಳಗೆ ಕೃಷಿ ಸಂಸ್ಕೃತಿಯು ಇಳಿದಿದೆ. ಹಬ್ಬಗಳ ಆಚರಣೆಯಲ್ಲಿ ಕೃಷಿಯ ಸಾರಗಳು ಸೇರಿವೆ. ಶಾಲಾ ಮಟ್ಟದಲ್ಲಿ ಕೃಷಿ, ಗ್ರಾಮೀಣ ಭಾರತವನ್ನು ಪರಿಚಯಿಸುವ, ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಇತರ ಪಠ್ಯಗಳೊಂದಿಗೆ ಕೃಷಿಯೂ ಪಠ್ಯವಾದರೆ ಕನಿಷ್ಠ ಕೃಷಿ ಜ್ಞಾನವು ಬಾಲ್ಯದಲ್ಲೇ ಸಿಕ್ಕಂತಾಗುತ್ತದೆ ಎಂದರು. 

ಮಾನವತೆಯ ಪಾಠ
ಮಕ್ಕಳಿಗೆ ಮತೀಯತೆಗಿಂತ ಮಾನವತೆಯ ಪಾಠಗಳು ಬೇಕು. ಪರಿಸರ, ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯ ಸಮಾಜವನ್ನು ಪ್ರೀತಿಸಲು ಪ್ರೇರಣೆ ನೀಡುವ ಸರಳ ಸಾಹಿತ್ಯಗಳು ರಚನೆಯಾಗಬೇಕು. ಅದರಲ್ಲಿರುವ ಸಾರಗಳು ಮಕ್ಕಳ ಮನದೊಳಗಿಳಿಯುವಂತಿರಬೇಕು. ಮತ್ತೆ ಮತ್ತೆ ಮನನಿಸುವಂತಿರಬೇಕು. 

Advertisement

ಸಾತ್ವಿಕತೆ ಬಿಂಬಿಸಲು ಸೋಲು
ಕೆಲವೊಮ್ಮೆ ಶಾಲಾ ಆಡಳಿತ ವ್ಯವಸ್ಥೆಗಳು, ನೀತಿ- ನಿಯಮಗಳು ಹೊರೆಯಾಗಿ ಕಾಣುತ್ತದೆ. ಇದಕ್ಕೆ ಕಾರಣ ಆಂಗ್ಲ- ಕನ್ನಡ ಮಾಧ್ಯಮಗಳ ನಡುವೆ ಬೆಳೆದಿ ರುವ ಒಡಕುಗಳು ಹಿರಿದಾಗಿವೆ. ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಮತ್ತು ವಿಶೇಷ ಮಣೆ, ಅಲ್ಲಿನ ವಿದ್ಯಾರ್ಥಿಗಳೇ ಬುದ್ಧಿವಂತರೆಂಬ ಭಾವ, ವಿಪರೀತ ಶಿಸ್ತು ಹೊರೆಯಾಗಿ ಮಕ್ಕಳ ಮನಸ್ಸಿನ ಮೇಲೆ ಸಾತ್ವಿಕತೆಯನ್ನು ಬಿಂಬಿಸಲು ಸೋಲುತ್ತಿವೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next