ಹಾಸನ: ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಮೀಸಲಾತಿ ಪಾಲಿಸುತ್ತಿಲ್ಲ. ಪ್ಯಾಕೇಜ್ ಟೆಂಡರ್ ಪದ್ಧತಿ ಅನುಸರಿಸಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ದ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ಶಿವರಾಮು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ತಮ್ಮ 2014-15ನೇ ಬಜೆಟ್‌ನಲ್ಲಿ ಹೇಳಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಟೆಂಡರ್ ನಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 50 ಲಕ್ಷ ರೂ.ಗಿಂತ ಕಡಿಮೆ ಅಂದಾಜಿನ ಕಾಮಗಾರಿಗಳಲ್ಲಿ ಶೇ.24 ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಮೀಸಲು ಕಲ್ಪಿಸಿ ದ್ದರು. ಆದರೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಟೆಂಡರ್‌ಗಳ ಪ್ಯಾಕೇಜ್ ಮಾಡಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಸಚಿವರಿಗೆ ಬೇಕಾದವರಿಗೆ ಗುತ್ತಿಗೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುತ್ತಿಗೆ ತಮಗೆ ಬೇಕಾದವರಿಗೇ ಸಿಗಬೇಕು ಎಂದು ಸಚಿವ ರೇವಣ್ಣ ಅವರು ಕುತಂತ್ರ ನಡೆಸಿದ್ದಾರೆ. ನೀರಾವರಿ, ರಸ್ತೆ ಕಾಮಗಾರಿ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿ ಗಳಲ್ಲೂ ಇದೇ ರೀತಿ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಸಾಗಲು ಅವರೇ ಕಾರಣರಾಗಬೇಕಾ ಗುತ್ತದೆ ಎಂದು ಶಿವರಾಮು ಅವರು ಎಚ್ಚರಿಸಿದರು.
ಗುತ್ತಿಗೆ ಮೀಸಲು ನಿಯಮ ಉಲ್ಲಂಘನೆ: ಮೀಸಲು ಗುತ್ತಿಗೆಯ ಕಾನೂನು ಉಲ್ಲಂಘನೆಯ ಪ್ರಕರಣ ಗಳನ್ನು ರಾಜ್ಯದ ಮೀಸಲು ಗುತ್ತಿಗೆ ಹಂಚಿಕೆಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಹೆಚ್ಚಾಗಿ ಅಕ್ರಮಗಳು ನಡೆದಿವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ ಸಚಿವ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ನಾಯಕರ ಅಣತಿಯಂತೆ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲೆಯ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು ಸೇರಿದಂತೆ, ಶಾಸಕರ ಅನುದಾನದ ಕಾಮಗಾರಿಗಳನ್ನು ಸಚಿವ ರೇವಣ್ಣರ ಆದೇಶದಂತೆ ಅಧಿಕಾರಿಗಳು ಪರಿಶಿಷ್ಟ ಸಮುದಾಯದ ಗುತ್ತಿಗೆದಾರನ್ನು ವಂಚಿಸುವ ದೃಷ್ಟಿಯಿಂದ ಪ್ಯಾಕೇಜ್ ಮಾಡಿಕೊಂಡಿರುವ ದಾಖಲೆಗಳನ್ನು ಅವರು ಪ್ರದರ್ಶಿಸಿದರು.
ನಿಯಮ ಪಾಲನೆಯಿಲ್ಲ: ಪರಿಶಿಷ್ಟ ಸಮುದಾಯದವರಿಗೆ ಎಲ್ಲಾ ಇಲಾಖೆಗಳ ಕಾಮಗಾರಿಗಳ ಗುತ್ತಿಗೆಯಲ್ಲೂ ಮೀಸಲಿಡಬೇಕು ಎಂದು ನಿಯಮ ಇದ್ದರೂ ಜಿಲ್ಲೆಯಲ್ಲಿ ಆ ನಿಯಮಗಳು ಪಾಲನೆಯಾಗುತ್ತಿಲ್ಲ. ಮೀಸಲು ಗುತ್ತಿಗೆದಾರರಿಗೆ ಅನ್ಯಾಯಾ ಮಾಡುವ ಹುನ್ನಾರ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮ್ಯಾನ್ಯುಯಲ್ ಟೆಂಡರ್ ಮಾಡಬಾರದು ಎಂದು ಸರ್ಕಾರದ ಆದೇಶ ಇದ್ದರೂ ಜಿಲ್ಲೆಯಲ್ಲಿ ಹೆಚ್ಚಾಗಿ ಮ್ಯಾನ್ಯುಯಲ್ ಟೆಂಡರ್‌ಗಳನ್ನು ನಡೆಯುತ್ತಿವೆ. ಯಾವ ಇಲಾಖೆಯಲ್ಲೂ ಮೀಸಲಾತಿ ನಿಯಮ ಪಾಲಿಸುತ್ತಿಲ್ಲ. ಇ – ಪ್ರೊಕ್ಯೂರ್‌ವೆುಂಟ್ ಟೆಂಡರ್ ಪದ್ಧತಿ ಪಾಲನೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ.
ಈ ಎಲ್ಲ ಅಂಶಗಳನ್ನೂ ಸಮನ್ವಯ ಸಮಿತಿ ಅಧ್ಯಕ್ಷ ರಾಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.