ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರು ವಾಗಲೇ ಅನ್ಯ ಪಕ್ಷಗಳಿಂದ ಬಿಜೆಪಿ ಸೇರ್ಪಡೆ ಪರ್ವ ಆರಂಭವಾಗಿದೆ. ಮಂಗಳವಾರವಷ್ಟೇ ಉತ್ತರ ಕನ್ನಡ ಜಿಲ್ಲೆ ಕುಮಟಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್‌ನ ದಿನಕರ ಶೆಟ್ಟಿ ಮತ್ತು ಯಲ್ಲಾಪುರದ ಕಾಂಗ್ರೆಸ್ ಮುಖಂಡ ಪ್ರಮೋದ್ ಹೆಗಡೆ ಬಿಜೆಪಿ ಸೇರಿದರೆ, ಕಾಂಗ್ರೆಸ್‌ನ ಮಾಜಿ ಸಚಿವ ಉಡುಪಿ ಜಿಲ್ಲೆಯ ಜಯಪ್ರಕಾಶ್ ಹೆಗ್ಡೆ ಮತ್ತು ಭಟ್ಕಳದ ಮಾಜಿ ಶಾಸಕ, ಕಾಂಗ್ರೆಸ್‌ನ ಜೆ.ಡಿ. ನಾಯ್ಕ ಅವರ ಬಿಜೆಪಿ ಸೇರ್ಪಡೆಗೆ ಮಾ. 8ರ ಮುಹೂರ್ತ ನಿಗದಿಯಾಗಿದೆ.
ಹನೂರು ಕ್ಷೇತ್ರದ ಮಾಜಿ ಶಾಸಕಿ, ಜೆಡಿಎಸ್‌ನ ಪರಿಮಳಾ ನಾಗಪ್ಪ ಮಾ. 16ರಂದು ಚಾಮರಾಜ ನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ. ಇದಲ್ಲದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ, ಕಾಂಗ್ರೆಸ್‌ನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೂ ಬಿಜೆಪಿ ಸೇರಲಿದ್ದು, ಸ್ಥಳ ಮತ್ತು ದಿನಾಂಕ ನಿಗದಿ ಬಾಕಿ ಇದೆ.
ಲೋಕಸಭೆಗೆ ಜಯಪ್ರಕಾಶ್ ಹೆಗ್ಡೆ?: ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರಿಗೆ ಮುಂದಿನ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಹಿಂದೆ ಜನತಾ ಪರಿವಾರದ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸಚಿವರಾಗಿದ್ದ ಅವರು ಅನಂತರ ಪರಿವಾರ ಒಡೆದು ಹೋದಾಗ ಪಕ್ಷೇತರರಾಗಿ ಗೆದ್ದಿದ್ದರು. ಬಳಿಕ ಕಾಂಗ್ರೆಸ್ ಸೇರಿದ ಅವರು ಒಂದು ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾಗಿದ್ದರೆ, 2014ರ ಚುನಾ ವಣೆಯಲ್ಲಿ ಅದೇ ಕ್ಷೇತ್ರದಿಂದ ಸೋತಿದ್ದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದಿರುವ ಶೋಭಾ ಕರಂದ್ಲಾಜೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ವಿಧಾನಸಭಾ ಚುನಾ ವಣೆಯಲ್ಲಿ ಗೆದ್ದರೆ ಆಗ ಆ ಕ್ಷೇತ್ರ ಖಾಲಿಯಾಗ ಲಿದ್ದು, ಜಯಪ್ರಕಾಶ್ ಹೆಗ್ಡೆಗೆ ಅಲ್ಲಿ ಅವಕಾಶ ಕಲ್ಪಿಸಲು ಬಿಜೆಪಿ ಚಿಂತಿಸುತ್ತಿದೆ.
ಕುಮಾರ್ ಬಂಗಾರಪ್ಪಗೆ ಸೊರಬ?: ಕುಮಾರ್ ಬಂಗಾರಪ್ಪ ಅವರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡಿ, ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದ ಟಿಕೆಟ್ ನೀಡುವುದು ಮತ್ತು ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಬೇಳೂರು ಗೋಪಾಲಕೃಷ್ಣ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಈಗಾಗಲೇ ಚಿಂತನೆ ಆರಂಭವಾಗಿದೆ. ದಿನಕರ ಶೆಟ್ಟಿ ಅವರಿಗೆ ಕುಮಟಾ ಮತ್ತು ಪರಿಮಳಾ ನಾಗಪ್ಪ ಅವರಿಗೆ ಹನೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬಹುದು. ಇನ್ನು ಯಲ್ಲಾಪುರದ ಪ್ರಮೋದ್ ಹೆಗಡೆ ಮತ್ತು ಭಟ್ಕಳದ ಜೆ.ಡಿ.ನಾಯ್ಕ ಅವರ ವಿಚಾರದಲ್ಲಿ ಬಿಜೆಪಿ ಯಾವುದೇ ಯೋಚನೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ತೊಂದರೆ ಇಲ್ಲ
ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿದರೂ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ, ಹಾಲಾಡಿ ಅವರಿಗೆ ಪ್ರತಿಸ್ಪರ್ಧಿ ಎನ್ನಲಾಗುತ್ತಿದ್ದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿದರೂ ಲೋಕಸಭೆಗೆ ಸ್ಪರ್ಧಿಸುತ್ತಾರೆಯೇ ಹೊರತು, ವಿಧಾನಸಭೆ ಚುನಾವಣೆಯತ್ತ ಬರುವುದಿಲ್ಲ.