Advertisement

ಕುದುರೆ ಉದ್ದೇಪಿಸಿದ್ದು ನಿಜ!

12:15 PM Apr 11, 2018 | |

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ರೇಸ್‌ ಕುದುರೆ “ಕ್ವೀನ್‌ ಲತೀಫಾ’ಗೆ ಉದ್ದೀಪನ ಮದ್ದು ನೀಡಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಆರ್ಥಿಕ ವಿಭಾಗದ ಅಧಿಕಾರಿಗಳು, ಬಿಟಿಎಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸೇರಿ ಆರು ಮಂದಿ ವಿರುದ್ದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಉದ್ದೀಪನ ಮದ್ದು ನೀಡಿರುವುದು ನಿಜ ಎಂದು ತಿಳಿಸಿದೆ.

Advertisement

ಪ್ರಕರಣದ ತನಿಖಾಧಿಕಾರಿ ನಂಜುಂಡೇಗೌಡ ನೇತೃತ್ವದ ತಂಡ ಆರೋಪಿಗಳ ವಿರುದ್ಧ 700 ಪುಟಗಳ ಜಾರ್ಜ್‌ಶೀಟ್‌ ಸಲ್ಲಿಸಿದೆ. ಟರ್ಫ್ ಕ್ಲಬ್‌ನ ಸಿಇಒ ಎಸ್‌.ನಿರ್ಮಲ್‌ ಪ್ರಸಾದ್‌, ಚೀಫ್ ಸ್ಟೇಫ‌ಂಡರಿ ಸ್ಟೀವರ್ಡ್ಸ್‌ ಆಗಿರುವ ಪ್ರದ್ಯುಮ್ನ ಸಿಂಗ್‌, ಸ್ಟೀವರ್ಡ್‌ ಮತ್ತು ಸನ್ನೀಸ್‌ ರೆಸ್ಟೋರೆಂಟ್‌ನಲ್ಲಿ ಪಾಲುದಾರಿಕೆ ಮಾಲೀಕ ವಿವೇಕ್‌ ಉಭಯ್‌ಕರ್‌, ಸಹ ಮಾಲೀಕ ಅರ್ಜುನ್‌ ಸಜನಾನಿ, ಕುದುರೆ ತರಬೇತುದಾರ ನೀಲ್‌ ದರಾಶಾಹ್‌ ಮತ್ತು ಡೆಪ್ಯೂಟಿ ಚೀಫ್ ವೆಟರ್ನರಿ ಆಫೀಸರ್‌ ಡಾ.ಎಚ್‌.ಎಸ್‌.ಮಹೇಶ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

2016ರಲ್ಲಿ ವಯೋ ನಿವೃತ್ತಿ ಹೊಂದಿದ ಕ್ಲಬ್‌ನ ಸಿಇಓ ನಿರ್ಮಲ್‌ ಪ್ರಸಾದ್‌ರನ್ನು ಒಂದು ವರ್ಷ ಅವಧಿಗೆ ಮುಂದುವರಿಸುವಲ್ಲಿ ವಿವೇಕ್‌ ಉಭಯ್‌ಕರ್‌ ಯಶಸ್ವಿಯಾಗಿದ್ದಾರೆ. ಈ ಕಾರಣಕ್ಕೆ ವಿವೇಕ್‌ ಉಭಯ್‌ಕರ್‌ ಮಾತಿನಂತೆ ಅರ್ಜುನ್‌ ಸಜನಾನಿ ತನ್ನ ಸಹ ಮಾಲೀಕತ್ವದ ಕ್ವೀನ್‌ ಲತೀಫಾ ಕುದುರೆ ರೇಸ್‌ನಲ್ಲಿ ಗೆಲ್ಲುವಂತೆ ನೋಡಿಕೊಂಡಿದ್ದರು. ಈ ಕುದುರೆಯ ಮೂತ್ರದಲ್ಲಿ ಪ್ರೋಕೇನ್‌ ಅಂಶ ಕಂಡು ಬಂದಿದ್ದರೂ ಅದನ್ನು ಛೇರ್‌ವೆುನ್‌ ಗಮನಕ್ಕೆ ತಂದಿರಲಿಲ್ಲ.

ಅಲ್ಲದೆ, ನಿಯಮಾನುಸಾರ ಕುದುರೆ ಲಾಯದ ಪರಿವೀಕ್ಷಣೆಗೆ ಕ್ರಮ ಜರುಗಿಸದೆ ಮತ್ತು ಕುದುರೆಯನ್ನು ಅಮಾನತು ಪಡಿಸದೆ ಕ್ವೀನ್‌ ಲತೀಫಾ ಕುದುರೆಯನ್ನು ರೇಸ್‌ನಲ್ಲಿ ಭಾಗವಹಿಸುವಂತೆ ನೋಡಿಕೊಂಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ 2ನೇ ಮತ್ತು 3ನೇ ಕುದುರೆಯ ಮೇಲೆ ಬೆಟ್ಟಿಂಗ್‌ ಮಾಡಿದ ಜನರಿಗೆ ಲಕ್ಷಾಂತ ರೂ. ವಂಚನೆಯಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಕ್ವೀನ್‌ ಲತೀಫಾ ಕುದುರೆಯಲ್ಲಿ ಪ್ರೋಕೇನ್‌ ಅಂಶ ಪತ್ತೆಯಾಗಿದ್ದರೂ ಪ್ರದ್ಯುಮ್ನ ಸಿಂಗ್‌ ತನ್ನ ಪ್ರಭಾವ ಬೀರಿ ಕುದುರೆಯನ್ನು ಅನರ್ಹಗೊಳಿಸಲಿಲ್ಲ. ಕುದುರೆ ತನ್ನ ಕಾರ್ಯಕ್ಷಮತೆ ಮೇಲೆ ನೈಜವಾಗಿ ಗೆಲುವು ಸಾಧಿಸದೆ ಉದ್ದೀಪನಾ ಪ್ರೋಕೇನ್‌ ಅಂಶದಿಂದ 2017 ಮಾ.5ರಂದು ಬೆಂಗಳೂರು ರೇಸ್‌ನಲ್ಲಿ ಗೆಲುವು ಸಾಧಿಸಿತ್ತು.

Advertisement

ಇದೇ ಕುದುರೆಯನ್ನು ಊಟಿ ರೇಸ್‌ನಲ್ಲಿ ಭಾಗವಹಿಸುವಂತೆ ಸಂಚು ರೂಪಿಸಿದ್ದ. ಆದರೆ, ಕುದುರೆ ಸೋತು ನಾಲ್ಕನೇ ಸ್ಥಾನ ಬಂದಿತ್ತು. ಇದರಿಂದ ಈ ರೇಸ್‌ನಲ್ಲಿ ಬೆಟ್ಟಿಂಗ್‌ ಕಟ್ಟಿದ್ದ 40,613 ಟೆಕೆಟ್‌ದಾರರ 4.6 ಲಕ್ಷ ರೂ. ಹಾಗೂ ಇದೇ ಕುದುರೆಯು ಎರಡನೇ ಸ್ಥಾನ ಗಳಿಸುತ್ತದೆ ಎಂದು ಬಾಜಿ ಕಟ್ಟಿದ್ದ 32,013 ಬಾಜಿದಾರರ 3.20 ಲಕ್ಷ ರೂ. ವಂಚನೆಗೆ ನೇರ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ.

ಅಷ್ಟೇ ಅಲ್ಲದೇ, ಎನ್‌ಡಿಟಿಎಲ್‌ನಿಂದ 1.22 ಎಂಎಲ್‌ ಪ್ರೋಕೇನ್‌ ಅಂಶ ಪತ್ತೆಯಾದರೂ ಆರೋಪಿ ಮಹೇಶ್‌ ಸಹಕಾರದಿಂದ ಹಲವಾರು ಲ್ಯಾಬ್‌ಗಳಿಗೆ ಇ-ಮೇಲ್‌ ಮೂಲಕ ಸಂಪರ್ಕಿಸಿ ಪ್ರೋಕೇನ್‌ ಪರಿಮಾಣದ ಮಿತಿ ತಿಳಿದುಕೊಳ್ಳಲಾಗಿತ್ತು. ಜತೆಗೆ ಈ ಲ್ಯಾಬ್‌ನಿಂದ ಬಂದ ವರದಿಯನ್ನು ಛೇರ್‌ವೆುನ್‌ ಗಮನಕ್ಕೂ ತಾರದೆ ಮುಚ್ಚಿಟ್ಟಿದ್ದ ಎಂದು ತಿಳಿಸಲಾಗಿದೆ. 

ಏನಿದು ಪ್ರಕರಣ: ರೇಸ್‌ ಕುದುರೆ ಕ್ವೀನ್‌ ಲತೀಫಾ ವರ್ತನೆಯಿಂದ ಅನುಮಾನಗೊಂಡ ಎಚ್‌.ಎಸ್‌.ಚಂದ್ರೇಗೌಡ ಎಂಬುವವರು ಈ ಕುರಿತು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಿವೆನನ್‌ ಆಫ್ ಕ್ರೂಲಿಟಿ ಟು ಅನಿಮಲ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಕ್ಲಬ್‌ ಮೇಲೆ ದಾಳಿ ನಡೆಸಿ ಕುದುರೆಯ ಮೂತ್ರವನ್ನು ಪರೀಕ್ಷೆಗೆ ಕಳುಹಿಸಿದ್ದರು. ಈ ವರದಿಯಲ್ಲಿ ಉದ್ದೀಪನಾ ಮದ್ದು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರು ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳೇ ಲಾಯ ಸ್ವತ್ಛಗೊಳಿಸಿದ್ದರು: ಆರೋಪಿ ಅರ್ಜುನ್‌ ಸಜನಾನಿ ಮತ್ತು ವಿವೇಕ್‌ ಒಂದೇ ಮನೆಯಲ್ಲಿ ನೆಲೆಸಿದ್ದು, ಲ್ಯಾಬ್‌ ವರದಿ ಬಹಿರಂಗವಾಗದಂತೆ ಹಾಗೂ ಕುದುರೆ ಅಮಾನತು ಆಗದಂತೆ ನೋಡಿಕೊಂಡು ಊಟಿ ರೇಸ್‌ನಲ್ಲಿ ಕುದುರೆ ಭಾಗವಹಿಸಲು ಕಾರಣರಾಗಿದ್ದಾರೆ. ಇದಕ್ಕೂ ಮೊದಲು ಲತೀಫಾ ಮೂತ್ರದಲ್ಲಿ ಪಾಸಿಟಿವ್‌ ಅಂಶ ಕಂಡು ಬಂದಿದನ್ನು ಕುದುರೆ ಟ್ರೈನರ್‌ ಡೊಮಿನಿಕ್‌ ಆಕ್ಷೇಪಿಸಿದಾಗ ಕ್ವೀನ್‌ ಲತೀಫಾ ಲಾಯದ ಪರಿವೀಕ್ಷಣೆಯನ್ನು ಆರೋಪಿಗಳೇ ಮಾಡಿದ್ದು, ಲಾಯ ಸ್ವತ್ಛಗೊಳಿಸಿದ್ದಾರೆ.

ಅಲ್ಲದೆ, ಲತೀಫಾ ಕುದುರೆಯ ಮೂತ್ರದ ಬಿ ಸ್ಯಾಂಪಲ್‌ಅನ್ನು ಎ ಸ್ಯಾಂಪಲ್‌ ಎಂದು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಕುದುರೆಯ ತರಬೇತುದಾರನಾಗಿರುವ ನೀಲ್‌ ದರಾಶಾಹ್‌ ಇಡೀ ಅಕ್ರಮಕ್ಕೆ ಕುಮ್ಮಕ್ಕು ನೀಡುವುದರ ಜತೆಗೆ ಎಲ್ಲ ಸಾಕ್ಷಿಗಳನ್ನು ನಾಶಪಡಿಸಿದ್ದಾನೆ. ವಿಷಯ ಮುಚ್ಚಿಟ್ಟು ಡಾ ಎಚ್‌.ಎಸ್‌.ಮಹೇಶ್‌ ಬಾಜಿದಾರರಿಗೆ ಲಕ್ಷಾಂತ ರೂ. ನಷ್ಟವಾಗಲು ಕಾರಣರಾಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next