Advertisement

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

12:26 AM Nov 15, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂಬತಮ್ಮ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಪುನರುಚ್ಚರಿಸಿದ್ದು, ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಇತರ ಸಚಿವರು, ಕಾಂಗ್ರೆಸ್‌ ಶಾಸಕರು ದನಿಗೂಡಿಸಿದ್ದಾರೆ.

Advertisement

ನಮ್ಮ ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನಿಸಿರುವುದು ನಿಜ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಪ್ರತಿಪಾದಿಸಿದ್ದಾರೆ. ಸಿಎಂ ಮಾಡಿರುವ ಆರೋಪವನ್ನು ಸಚಿವರು ಅಲ್ಲಗಳೆದಿಲ್ಲ. ಆಪರೇಷನ್‌ ಕಮಲದ ಬಗ್ಗೆ ಮುಖ್ಯಮಂತ್ರಿಗಳು ದಾಖಲಾತಿ ಗಳಿದ್ದರೆ ತನಿಖೆ ಮಾಡಿಸಬೇಕೆಂಬ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಅವರು ನಿನ್ನೆ ಮೊನ್ನೆ ಬಂದಿದ್ದಾರೆ. ಅವರಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.

ಆಪರೇಷನ್‌ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಬಿಜೆಪಿ ಆಮಿಷ ಒಡ್ಡಿರುವುದು ನಿಜ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರೆ, ಸರಕಾರ ಉರುಳಿಸುವ ಪ್ರಯತ್ನವನ್ನು ಬಿಜೆಪಿ ಸದಾ ನಡೆಸುತ್ತಲೇ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಮುಖ್ಯಮಂತ್ರಿಗಳು ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದರೆ ಅವರಿಗೆ ಒಂದಿಷ್ಟು ಮಾಹಿತಿ ಇದ್ದೇ ಇರುತ್ತದೆ ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಸಿಎಂ ಅವರು ಹೇಳಿರುವುದರಿಂದ ಅವರಿಗೆ ಮಾಹಿತಿ ಇರಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರೆ, ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಯಾವುದೇ ಮೂಲ ಇಲ್ಲದೆ ಮಾತನಾಡಿರಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು. ಸಿಎಂ ಹೇಳಿದ್ದಾರೆ ಎಂದ ಮೇಲೆ ಅದು ಸತ್ಯವೇ ಆಗಿರುತ್ತದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಬಿಜೆಪಿಯವರು ಆಮಿಷ ಒಡ್ಡಿರುವುದು ನಿಜ. ಈ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಈ ವಿಷಯವನ್ನು ಕೆಲವರು ಬಂದು ಸಿಎಂಗೂ ತಿಳಿಸಿದ್ದಾರೆ. ಅದನ್ನೇ ಸಿಎಂ ಮಾಧ್ಯಮದ ಮುಂದೆಯೂ ಹೇಳಿದ್ದಾರೆ.
-ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next