Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮ್ಮ ಯೋಜನೆಗಳ ಬಗ್ಗೆ ಹಲವು ಬಾರಿ ಸಮಗ್ರವಾಗಿ ಚರ್ಚೆ ನಡೆಸಿದ್ದರು. ಭಾನುವಾರ (ಆ.3) ಇಂಟೆಲಿಜೆನ್ಸ್ ಬ್ಯೂರೋ ಮತ್ತು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌ನ ಮುಖ್ಯಸ್ಥರಾಗಿರುವ ಕ್ರಮವಾಗಿ ಅರವಿಂದ ಕುಮಾರ್ ಮತ್ತು ಸಮಂತ್ ಗೋಯಲ್‌ರಿಗೆ ಶಾ ಫೋನ್ ಮಾಡಿ ಹೇಳಿದ್ದಿಷ್ಟು: “ಸಿದ್ಧರಾಗಿ’.
Related Articles
Advertisement
ಲೋಕಸಭೆ ಚುನಾವಣೆ ವೇಳೆಯೇ ಸಿದ್ಧತೆ ಶುರು: ಲೋಕಸಭೆ ಚುನಾವಣೆಗಾಗಿ ಪ್ರಣಾಳಿಕೆ ಸಿದ್ಧವಾಗುವ ವೇಳೆಯೇ 370, 35ಎ ವಿಧಿ ರದ್ದು ಮಾಡುವ ಸಿದ್ಧತೆ ಶುರುವಾಗಿತ್ತು. ಪ್ರಣಾಳಿಕೆಯಲ್ಲಿ ಅದು ಪಕ್ಷದ ಪ್ರಧಾನ ಅಂಶವಾಗಿತ್ತು. ಇನ್ನು ಆರ್‌ಎಸ್‌ಎಸ್ ಮತ್ತು ಇತರ ಹಿಂದೂ ಸಂಘಟನೆಗಳು ಬಹಳ ಹಿಂದಿನಿಂದಲೇ ಈ ಬಗ್ಗೆ ರದ್ದು ಮಾಡುವ ಬಗ್ಗೆ ವಾದ ಮಂಡಿಸುತ್ತಿದ್ದರು. ಜೂ.26ರಂದು ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ನಿರ್ಧಾರಕ್ಕೆ ಹೆಚ್ಚಿನ ಇಂಬು ಸಿಕ್ಕಿತ್ತು. ಜು.11ರಂದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌ನ ಮುಖ್ಯಸ್ಥ ಸಮಂತಾ ಗೋಯಲ್ ಭೇಟಿ ನೀಡಿದ್ದರೆ, ಜು.24ರಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭೇಟಿ ನೀಡಿದ್ದು ಮಹತ್ವ ಪಡೆದಿತ್ತು. ಇನ್ನು ಸುಲಲಿತ ಸಂಪರ್ಕಕ್ಕಾಗಿ 2 ಸಾವಿರ ಸ್ಯಾಟಲೈಟ್ ಫೋನ್‌ಗಳನ್ನೂ ನೀಡಿತ್ತು ಕೇಂದ್ರ ಸರ್ಕಾರ.
ಯಶಸ್ವಿ ಅಧ್ಯಕ್ಷ ಮಾತ್ರವಲ್ಲ ಸಚಿವರೂ ಹೌದು: ಬಿಜೆಪಿಯ ಇದುವರೆಗಿನ ಅಧ್ಯಕ್ಷರುಗಳ ಪೈಕಿ ಅತ್ಯಂತ ಯಶಸ್ವಿ ಅಧ್ಯಕ್ಷ ಎಂಬ ಹೆಗ್ಗಳಿಕೆ ಪಡೆದವರು ಅಮಿತ್ ಶಾ. ಸಂವಿಧಾನದ 370ನೇ ವಿಧಿ, 35ಎ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆಯ ವಿಧೇಯಕ ಸಂಸತ್‌ನಲ್ಲಿ ಅಂಗೀಕಾರಗೊಂಡ ಬಳಿಕ ದೇಶದ ರಾಜಕೀಯ ವಲಯ ದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಹಿಂದೂ ತತ್ವಗಳನ್ನು ಪ್ರಬಲವಾಗಿ ಪ್ರತಿಪಾದಿಸುವ ಸಂಘಟನೆಗಳ ಪಾಲಿಗೆ ಅವರು ಆರಾಧ್ಯ ದೈವವಾಗಿ ಬದಲಾಗಿದ್ದಾರೆ ಎಂದರೆ ತಪ್ಪಾಗಲಾರದು. ಇದರ ಜತೆಗೆ ಅಕ್ರಮ ಚಟುವಟಿಕೆಗಳ ತಡೆ (ನಿಯಂತ್ರಣ) ಕಾಯ್ದೆ, ಎನ್‌ಐಎ ವಿಧೇಯ ಕಗಳನ್ನು ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರಗೊಳಿಸಿದ ಬಳಿಕ ಅಮಿತ್ ಅನಿಲ್‌ಚಂದ್ರ ಶಾ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಅಂಶಗಳು ಒಂದೊಂದಾಗಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾ ಅವರ ಪ್ರಭಾವಳಿಯೂ ಹೆಚ್ಚಾಗಿದೆ.ಪಟೇಲ್‌ಗೆ ಹೋಲಿಕೆ: ಬಿಜೆಪಿ ನಾಯಕರು ಅಮಿತ್ ಶಾ ಸಂಸತ್‌ನಲ್ಲಿ ಮಾಡಿರುವ ಭಾಷಣದ ಬಗ್ಗೆಯ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕೆಲವರು ಅವರನ್ನು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಎನ್‌ಡಿಎ ಮೈತ್ರಿಪಕ್ಷಗಳಲ್ಲದೆ ಇರುವ ವೈಎಸ್‌ಆರ್ ಕಾಂಗ್ರೆಸ್ ಕೂಡ ಶಾ ಮಾಡಿದ ಭಾಷಣ ಮೆಚ್ಚಿಕೊಳ್ಳುತ್ತಿದೆ ಎನ್ನುವುದು ಗಮನಾರ್ಹ ವಿಚಾರ. ದೇಶದ ಭದ್ರತೆಗೆ ಸಂಬಂಧಿಸಿದ ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿ ಅಂಗೀಕರಿಸುವುದಕ್ಕೆ ಕಾರಣವಾಗುವ ಯಶಸ್ಸು ಅವರಿಗೇ ಸಲ್ಲಬೇಕು. ಬಿಜೆಡಿ, ವೈಎಸ್‌ಆರ್‌ಕಾಂಗ್ರೆಸ್, ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ಬೆಂಬಲ ಗಳಿಸುವಲ್ಲಿಯೂ ಅವರ ತಂತ್ರಗಾರಿಕೆ ಯಶಸ್ಸು ಪಡೆದಿದೆ. ರಾಜಕೀಯದಲ್ಲಿ ತಂತ್ರಗಾರಿಕೆ ಎನ್ನುವುದನ್ನು ಅತ್ಯಂತ ವ್ಯೂಹಾತ್ಮಕವಾಗಿ ರೂಪಿಸಿ ಅನುಷ್ಠಾನಗೊಳಿಸಿದ್ದು ಅವರ ಹೆಗ್ಗಳಿಕೆ. ಅಮಿತ್ ಶಾ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಗೆ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಹಾಲಿ ಸಾಲಿನಲ್ಲಿ ಪ್ರಧಾನ ಸೂತ್ರ ವಹಿಸಲಿದ್ದಾರೆ ಎನ್ನುವುದು ಗೊತ್ತಾಗಿತ್ತು. ಇನ್ನು ಮುಂದಿನ ದಿನಗಳಲ್ಲಿ ರಾಮ ಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಜಾರಿ ವಿಚಾರ ಕೇಂದ್ರ ಸರ್ಕಾರದ ಮುಂದೆ ಇರುವ ಸವಾಲು. ಪ್ರತಿಪಕ್ಷಗಳ ಸಾಲಿನಲ್ಲಿರುವ ಕೆಲವು ಪಕ್ಷಗಳೂ ಶಾ ಅವರನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ, 2ನೇ ಹಂತದ ಮೋದಿ ಸರ್ಕಾರದಲ್ಲಿ ಮತ್ತು ಅಮಿತ್ ಶಾ ಪ್ರಭಾವಶಾಲಿ ಸಚಿವರಾಗಿದ್ದಾರೆ. ತಾಲಿಬಾನ್ ಕಾರಣ?: ಎಲ್ಲದಕ್ಕಿಂತ ಮತ್ತೂಂದು ಮಹತ್ವದ ಕಾರಣವೊಂದಿದೆ. ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಜತೆಗೆ ಅಮೆರಿಕ ನಡೆಸುತ್ತಿರುವ ಮಾತುಕತೆ ನಿರ್ಣಾಯಕ ಹಂತಕ್ಕೆ ಬಂದಿದೆ. ಅಫ್ಘಾನಿಸ್ತಾನದಿಂದ ಹಂತ ಹಂತವಾಗಿ ಸೇನೆ ಹಿಂಪಡೆಯುವ ಬಗ್ಗೆ ಅಮೆರಿಕ ನಿರ್ಧರಿಸಿದೆ. ಅದಕ್ಕಾಗಿಯೇ ಪಾಕಿಸ್ತಾನಕ್ಕೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಲು ಅಮೆರಿಕ ಇಂಗಿತ ವ್ಯಕ್ತಮಾಡಿದೆ. ಅದು ಜಾರಿಯಾದರೆ ಪಾಕ್ ಪ್ರೇರಿತ ಉಗ್ರರಿಗೆ ಮತ್ತಷ್ಟು ಇಂಬು ಮತ್ತು ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ತಾಲಿಬಾನ್ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ಲಗ್ಗೆ ಹಾಕಬಹುದು. ಹೀಗಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಕಷ್ಟವಾಗಬಹುದು ಎಂಬ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌ನ ಮುಖ್ಯಸ್ಥ ಸಮಂತಾ ಗೋಯಲ್ ಹೇಳಿದ್ದೂ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಜೇಟ್ಲಿ ಟೀಕಾಸ್ತ್ರ: ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ದೇಶದ ಸಮಗ್ರತೆಗೆ ವಿರುದ್ಧವಾಗಿದ್ದ ಸ್ಥಾನಮಾನವನ್ನು ಹಿಂಪಡೆದಿರುವುದನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ತಲೆಯಿಲ್ಲದ ಕೋಳಿಗಳಿದ್ದಂತೆ ಎಂದು ಹರಿಹಾಯ್ದಿರುವ ಅವರು, ಕಾಂಗ್ರೆಸ್ಸಿಗರು ಜಮ್ಮು ಕಾಶ್ಮೀರವು ಎಂದಿಗೂ ಪರಕೀಯ ಪ್ರದೇಶವಾಗಿಯೇ ಇರಬೇಕು ಎಂದು ಆಶಿಸುವಂಥವರು ಎಂದಿದ್ದಾರೆ. “”ದಿಟ್ಟತನದ ನಿರ್ಧಾರ ಜಾರಿಗೊಳಿಸುವ ಮೂಲಕ, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಈ ಮೂಲಕ, 370ನೇ ವಿಧಿಯನ್ನು ತೀವ್ರವಾಗಿ ವಿರೋಧಿಸಿದ್ದ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರ ಚಿಂತನೆಗಳು ಸರಿ ಹಾಗೂ ಈ ವಿಚಾರದಲ್ಲಿ ಜವಾಹರಲಾಲ್ ನೆಹರೂ ಅವರ ಚಿಂತನೆ ತಪ್ಪು ಎಂಬುದನ್ನು ಮೋದಿ ಮತ್ತು ಅಮಿತ್ ಶಾ ಸಾಬೀತುಪಡಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ. ಶಾ ತಂಡದಲ್ಲಿ ರಾಜ್ಯದ ಪ್ರಹ್ಲಾದ್ ಜೋಶಿ: ನಿರ್ಧಾರ ಜಾರಿ ಬಗ್ಗೆ ಗರಿಷ್ಠ ರಹಸ್ಯ ಕಾಯ್ದುಕೊಳ್ಳಲಾಗಿತ್ತು ಎನ್ನುವುದು ಈಗಾಗಲೇ ಗೊತ್ತಾಗಿರುವ ವಿಚಾರ. ಅದಕ್ಕೆ ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಕೂಡ ಸಾಥ್ ನೀಡಿದ್ದಾರೆ. ಅವರೂ ಸೇರಿ ಮೂವರು ಸಚಿವರಿಗೆ ಮಾತ್ರ ಈ ಮಾಹಿತಿ ಇತ್ತು. ತ್ರಿವಳಿ ತಲಾಖ್, ಆರ್‌ಟಿಐ ವಿಧೇಯಕಗಳನ್ನು ಸಂಸತ್‌ನಲ್ಲಿ ಅಂಗೀಕರಿಸಿದ್ದನ್ನು ಮಾದರಿಯಾಗಿ ಪರಿಗಣಿಸಲಾಗಿತ್ತು. ಏಕೆಂದರೆ ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಅದರ ಆಧಾರದಲ್ಲಿಯೇ ರಾಜ್ಯಸಭೆಯಲ್ಲಿಯೇ ಅದನ್ನು ಮಂಡಿಸಲು ನಿರ್ಧರಿಸಲಾಗಿತ್ತು. ಬೆಂಬಲ ಕೋರಿ ಫೋನ್: ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸಲು ನಿರ್ಧಾರವಾಗುತ್ತಿದ್ದಂತೆಯೇ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ ರೆಡ್ಡಿ, ಬಿಜೆಡಿ ಅಧ್ಯಕ್ಷ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಸಿಎಂ, ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್‌ಗೆ ಫೋನ್ ಮಾಡಿ ವಿವರಣೆ ನೀಡಿ, ಬೆಂಬಲ ಯಾಚಿಸಲಾಯಿತು. ಇನ್ನು ಬಿಎಸ್‌ಪಿ ನಾಯಕಿ ಮಾಯಾವತಿಯವರನ್ನು ರಾಜ್ಯಸಭಾ ಸದಸ್ಯ ಸತೀಶ್ಚಂದ್ರ ಮಿಶ್ರಾ ಮೂಲಕ ಸಂಪರ್ಕಿಸಿ ಬೆಂಬಲ ಯಾಚಿಸಲಾಯಿತು.