ಕಲಬುರಗಿ: ಹೃದಯ ಮತ್ತು ಮೆದುಳಿನಿಂದ ಹೊರ ಬರುವ ಕಲೆಗಾರಿಕೆ ಕೌಶಲ್ಯಕ್ಕೆ ಬೆಲೆ ಕಟ್ಟಲಾಗದು ಎಂದು ವೈದ್ಯ ಡಾ| ಎಸ್.ಎಸ್. ಗುಬ್ಬಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ಧನ ಸಹಾಯದೊಂದಿಗೆ ಓಂ ನಗರದ ಎಂ.ಬಿ.ಲೋಹಾರ ಆರ್ಟ ಗ್ಯಾಲರಿಯಲ್ಲಿ ಶುಕ್ರವಾರ ಆರಂಭಗೊಂಡ ನಾಲ್ಕು ದಿನಗಳ ದಾನಯ್ಯ ಚೌಕಿಮಠ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೃದಯದ ಪ್ರೀತಿಯು ಮೆದುಳಿನ ಕಲೆಗಾರಿಕೆಯೊಂದಿಗೆ ಒಗ್ಗೂಡಿದರೆ ದೊಡ್ಡ ಶಕ್ತಿಯೇ ಕ್ರೋಢಿಕರಣಗೊಳ್ಳುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಚಿತ್ರಕಲಾವಿದ ಬಸವರಾಜ ಉಪ್ಪಿನ, ಬಾಲ್ಯದಲ್ಲಿ ಮಣ್ಣಿನಿಂದ ರಚಿಸುತ್ತಿದ್ದ ಕಲಾಕೃತಿಗಳನ್ನು ನೆನಪಿಸಿಕೊಂಡರು.
ಕಲಬುರಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಂಗೀತ ಮತ್ತು ಲಲಿತ ಕಲಾ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ| ಶಿವಾನಂದ ಎಚ್. ಬಂಟನೂರು ಅವರು ಕಲೆಯ ಇತಿಹಾಸದ ಬಗ್ಗೆ ವಿವರಣೆ ನೀಡಿದರು. ಬೆಂಗಳೂರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದ್ಯಸ ನಟರಾಜ ಎಂ. ಶಿಲ್ಪಿ ಅತಿಥಿಯಾಗಿ ಅಕಾಡೆಮಿ ಹಲವಾರು ಯೋಜನೆಗಳನ್ನು ಈ ಭಾಗದ ಶಿಲ್ಪಕಲಾವಿದರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪ್ರಭಾಕರ ಪಾಟೀಲ ಸ್ವಾಗತಿ ನಿರೂಪಿಸಿದರು. ಸುಲೋಚನಾ ದೇವರ ಪ್ರಾರ್ಥನಾಗೀತೆ ಹಾಡಿದರು. ದಾನಯ್ನಾ ಚೌಕೀಮಠ ವಂದಿಸಿದರು. ಬಾಬುರಾವ್ ಎಚ್, ಡಾ| ಶಾಹೀದ ಪಾಶಾ, ಡಾ| ಪರಶುರಾಮ, ನೀಲಾಬಿಂಕಾ ಹೀರೆಮಠ, ಗಾಯತ್ರಿ ಶಿಲ್ಪಿ, ಸಾಯಿನಾಥ ಲೋಹಾರ ಮುಂತಾದವರು ಇದ್ದರು. ಡಿಸೆಂಬರ್ 13ರ ವರೆಗೆ ಶಿಲ್ಪಕಲಾ ಪ್ರದರ್ಶನ ನಡೆಯಲಿದೆ. ಮುಂಜಾನೆ 11ರಿಂದ ಸಂಜೆ 6ರ ವರೆಗೆ ಸಾರ್ವಜನಿಕರು, ಚಿತ್ರಕಲಾವಿದರು, ಕಲಾಆಸಕ್ತರು ವೀಕ್ಷಿಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ. ಜೋಶಿ ತಿಳಿಸಿದ್ದಾರೆ.