Advertisement

ಮೀಸಲಾತಿ ವಿಚಾರದಲ್ಲಿ ಸರ್ಕಾರ ಕಿವಿ ಮೇಲೆ ಹೂವ ಇಡುತ್ತಿದೆ: ಡಿ.ಕೆ.ಶಿವಕುಮಾರ್ ಆಕ್ರೋಶ

03:49 PM Mar 23, 2023 | Team Udayavani |

ಬೆಂಗಳೂರು: ‘ಮಿಸಲಾತಿ ಹೆಚ್ಚಳ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸದೇ, ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸದೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯದ ಜನರ ಕಿವಿಗೆ ಹೂವ ಇಟ್ಟು, ಮೋಸ ಮಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Advertisement

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಗುರುವಾರ ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಮೀಸಲಾತಿ ವಿಚಾರದಲ್ಲಿ ಮಾಡುತ್ತಿರುವ ಮೋಸವನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ನಾಳೆ (ಶುಕ್ರವಾರ) ಬೆಳಗ್ಗೆ 10 ಗಂಟೆಗೆ ರಾಜಭವನದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ’ ಎಂದರು.

‘ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಬಿಜೆಪಿ ಸಚಿವರು ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಸರ್ಕಾರ ಪ್ರಸ್ತಾವನೆ ಸಲ್ಲಿಸದೇ. ಸಂಸತ್ತಿನಲ್ಲಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸದೆ ಮೀಸಲಾತಿ ಮಾಡಿದ್ದೇವೆ ಎಂದು ಹೇಳಿಕೊಂಡು ದಲಿತರಿಗೆ ಮೋಸ ಮಾಡುತ್ತಿದೆ ಎಂದರು.

ಈ ದ್ರೋಹವನ್ನು ಖಂಡಿಸಲು ನಮ್ಮ ಪಕ್ಷದ ನಾಯಕರೆಲ್ಲರೂ ರಾಜ್ಯಪಾಲರ ಭೇಟಿಗೆ ತೀರ್ಮಾನಿಸಿದ್ದು, ನಾಳೆ ಬೆಳಗ್ಗೆ ಭೇಟಿಗೆ ರಾಜ್ಯಪಾಲರ ಬಳಿ ಸಮಯಾವಕಾಶ ಕೇಳುತ್ತೇವೆ. ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗ ಬಿಜೆಪಿ ಸರ್ಕಾರ ಈ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಿಲ್ಲ ಯಾಕೆ? ಈ ವಿಚಾರದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಸುಳ್ಳು ಹೇಳಿದರೆ ಅದನ್ನು ನಂಬಲು ಇಲ್ಲಿ ಯಾರೂ ಸಿದ್ಧರಿಲ್ಲ. ಅವರಿಗೆ ಈ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಈ ಮೀಸಲಾತಿ ಹೆಚ್ಚಳ ವಿಚಾರ ಸೇರಿಸಬೇಕು ಎಂದು ಆಗ್ರಹಿಸಿದರು.

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನಾಯಕರು ಹಾಗೂ ಬೇರೆ ಸಮುದಾಯದ ನಾಯಕರುಗಳು ಭಾಗವಹಿಸಬೇಕು ಎಂದು ಆಹ್ವಾನಿಸುತ್ತಿದ್ದೇನೆ. ಜನರನ್ನು ನಂಬಿಸಿ ಮೋಸ ಮಾಡಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಹೀಗಾಗಿ ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದರು.

Advertisement

ಬಿಜೆಪಿ ನಾಯಕರು ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ, 26 ಸಂಸದರಿದ್ದಾರೆ ಎಂದು ಹೇಳುತ್ತಾರೆ. ಇವರು ಈ ಮೀಸಲಾತಿ ಹೆಚ್ಚಳದ ಬಗ್ಗೆ ಮಾಡಿರುವ ಪ್ರಯತ್ನವಾದರೂ ಏನು? ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಾರಾ? ಕೇಂದ್ರಕ್ಕೆ ಒತ್ತಾಯ ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರಾ? ಈ ಕಾನೂನು ಸಂವಿಧಾನಿಕ ಮಾನ್ಯತೆ ಪಡೆದು ಅದು ಜನರಿಗೆ ತಲುಪಬೇಕಾದರೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳ ಅಂಕಿತ ಬೇಕು. ರಾಜ್ಯ ಮಟ್ಟದ ತೀರ್ಮಾನಗಳನ್ನು ರಾಜ್ಯಪಾಲರಿಗೆ ನೀಡಲಾಗುತ್ತದೆಯೇ ಹೊರತು, ಈ ವಿಚಾರವನ್ನು ರಾಜ್ಯಪಾಲರಿಗೆ ನೀಡಿದರೆ ಪ್ರಯೋಜನವಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಜನರ ಕಿವಿ ಮೇಲೆ ಹೂವ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ತೊರೆದಿದ್ದವರು ಮತ್ತೆ ಬರುತ್ತಿರುವ ಬಗ್ಗೆ ಕೇಳಿದಾಗ, ‘ಇನ್ನು ಕೆಲವು ಮಂದಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಈಗ ಅವರ ಹೆಸರು ಪ್ರಸ್ತಾಪ ಮಾಡುವುದಿಲ್ಲ. ಅವರು ಕೆಲವರ ಮೇಲೆ ಅನುಮಾನ ಪಡುತ್ತಾ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾರನ್ನು ಆಹ್ವಾನಿಸುತ್ತಿಲ್ಲ. ಸ್ವಇಚ್ಛೆಯಿಂದ ಯಾರು ಪಕ್ಷ ಸೇರಲು ಬಯಸುತ್ತಾರೋ ಅವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

ನಾಳೆ ನಡೆಯಲಿರುವ ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡುವ ಬಗ್ಗೆ ಕೇಳಿದಾಗ, ‘ಅವರು ಏನಾದರೂ ಮಾಡಿಕೊಳ್ಳಲಿ. ಅವರು ಏನೇ ಸುಳ್ಳು ಭರವಸೆ ನೀಡಿದರೂ, ಅಥವಾ ಟೆಂಡರ್ ಗಳ ಅಂದಾಜು ಮೊತ್ತವನ್ನು ಹೆಚ್ಚಿಸಿ ಟೆಂಡರ್ ಜಾರಿ ಮಾಡಿದರೂ ಅದಕ್ಕೆ ಸರ್ಕಾರಿ ಅಧಿಕಾರಿಗಳು ಹೊಣೆಗಾರರಾಗುತ್ತಾರೆ. ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಬೇಕಾಗುತ್ತದೆ. ರಾಜ್ಯದಲ್ಲಿ ಈವೇಳೆಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಸರ್ಕಾರಿ ಹಣದಲ್ಲಿ ಮೋದಿ ಅವರ ಪ್ರಚಾರ ಮಾಡಲು, ಜಾಹೀರಾತು ನೀಡಲು ಚುನಾವಣಾ ದಿನಾಂಕ ಮುಂದಕ್ಕೆ ಹಾಕುತ್ತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಇಷ್ಟು ಹೊತ್ತಿಗಾಗಲೇ ನೀತಿ ಸಂಹಿತೆ ಜಾರಿಯಾಗಿತ್ತು. ಬಿಜೆಪಿ ಕಾರ್ಯಕ್ರಮಗಳಿಗೆ ಜನ ಹೋಗುತ್ತಿಲ್ಲ. ಹೀಗಾಗಿ ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡಡಿ, ಪಿಡಿಓ, ಸರ್ಕಾರಿ ಶಿಕ್ಷಕರು, ಹಾಲು ಒಕ್ಕೂಟಗಳ ಮೂಲಕ ಜನರನ್ನು ಕರೆಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ಇನ್ನು ಕೋಲಾರದ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಮಾತನಾಡಿದ ಅವರು, ‘ಇದು ರಾಜಕೀಯ ಪ್ರೋರಣೆಯಿಂದ ಆಗಿದೆ. ಭಆರತ ಜೋಡೋ ಯಾತ್ರೆ ಮೂಲಕ ಅವರಿಗೆ ಸಿಕ್ಕಿರುವ ಶಕ್ತಿಯನ್ನು ಸಹಿಸಲಾಗದೇ ಅದನ್ನು ಕುಗ್ಗಿಸಲು ಈ ರೀತಿ ಮಾಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಇದಕ್ಕೆ ಹೆದರುವುದಿಲ್ಲ. ರಾಹುಲ್ ಗಾಂಧಿ ಅವರ ತಾತಾ ನೆಹರೂ ಅಅವರು ದೇಶಕ್ಕಾಗಿ 13 ವರ್ಷಗಳ ಕಾಲ ಜೈಲು ಸೇರಿದ್ದರು, ಅವರ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಹುದ್ದೆ ಸಿಕ್ಕರೂ ದೇಶದ ಆರ್ಥಿಕತೆ ಉಳಿಸಲು ಆ ಸ್ಥಾನ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಜನರ ಪ್ರೀತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ಇಡೀ ದೇಶ ಕಾಯುತ್ತಿದೆ’ ಎಂದು ತಿಳಿಸಿದರು.

ನಾರಾಯಣ ಗೌಡ, ಪೂರ್ಣಿಮಾ ಅವರು ಕಾಂಗ್ರೆಸ್ ಹೋಗುವುದಿಲ್ಲ ಅವರ ಜತೆ ಮಾತನಾಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ನಾಯಕರುಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅಅವರಿಗೆ ಹೇಳಿದವರಾರು? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ಅವರು ಏನು ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅಅವರ ಪಕ್ಷದವರು ಬಿಟ್ಟು ಹೋಗುತ್ತಾರೆ ಎಂಬ ಭಯದಲ್ಲಿ ಐಟಿ, ಇಡಿ ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿ ಸಚಿವರುಗಳು ಹಣ ಮಾಡಿಲ್ಲವೇ? ಅವರ ಮನೆ ಮೇಲೆ ದಾಳಿ ಏಕಿಲ್ಲ? ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ನಿಯಂತ್ರಿಸಲು ಕೆಲವು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಅಅವರ ಮೂಲಕ ಯಡಿಯೂರಪ್ಪ ಅವರನ್ನು ನಿಯಂತ್ರಿಸಲಾಗುತ್ತಿದೆ’ ಎಂದರು.

ಇಂದು ಟಿಕೆಟ್ ಪಟ್ಟಿ ಪ್ರಕಟವಾಗುತ್ತದೆಯೇ ಎಂದು ಕೇಳಿದಾಗ, ‘ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಮರಳಿದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಅಮಾವಾಸೆ ನಂತರ ಚಂದ್ರ ಉದಯವಾಗಬೇಕಲ್ಲವೇ?’ ಎಂದು ತಿಳಿಸಿದರು.

ಕೆಲವು ಕ್ಷೇತ್ರಗಳಲ್ಲಿ ಗೊಂದಲವಿದೆಯೇ ಎಂದು ಕೇಳಿದಾಗ, ‘ಯಾವುದೇ ಕ್ಷೇತ್ರದಲ್ಲಿ ಗೊಂದಲವಿಲ್ಲ. ನಾವು ಎಲ್ಲರನ್ನು ಕರೆದು ಮಾತನಾಡಿ, ರಾಜಿ ಮಾಡುತ್ತೇವೆ. ಎಲ್ಲರಿಗೂ ನಾವು ಅಧಿಕಾರ ಹಂಚುತ್ತೇವೆ. ಎಲ್ಲರಿಗೂ ಸಮಬಾಳು, ಸಮಪಾಲು ನೀಡುತ್ತೇವೆ’ ಎಂದು ತಿಳಿಸಿದರು.

ಕೆಪಿಎಸ್ ಸಿ ಸೇರಿದಂತೆ ಅನೇಕ ಇಲಾಖೆ ನೇಮಕಾತಿ ನೆನೆಗುದಿಗೆ ಬಿದ್ದು, ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದ್ದು ಸಮಸ್ಯೆ ಎದುರಾಗಿದೆ ಎಂದು ಕೇಳಿದಾಗ, ‘ಎಲ್ಲ ಅಭ್ಯರ್ಥಿಗಳು, ನಿರುದ್ಯೋಗಿಗಳಿಗೆ ಇಡೀ ಯುವ ಸಮೂಹಕ್ಕೆ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಅನ್ಯಾಯವಾಗುತ್ತಿದೆ. ರಾಜ್ಯಕ್ಕೆ ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕವನ್ನು ರಾಜ್ಯಕ್ಕೆ ತಂದಿದ್ದಾರೆ. ಹೊಸ ವರ್ಷದ ಸಮಯದಲ್ಲಿ ಈ ಭ್ರಷ್ಟ ಸರ್ಕಾರದಿಂದ ರಾಜ್ಯಕ್ಕೆ ಮುಕ್ತಿ ಕೊಡಿಸಲು ಮಾಧ್ಯಮಗಳು ಸಹಕಾರ ನೀಡಬೇಕು. ಅಭ್ಯರ್ಥಿಗಳು ಈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರುದ್ಯೋಗಿಗಳಿಗೆ ನೆರವಾಗುವ ಉದ್ದೇಶದಿಂದ ನಾವು ಯುವನಿಧಿ ಯೋಜನೆ ಮೂಲಕ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಮಾಡಿರುವವರಿಗೆ ಪ್ರತಿ ತಿಂಗಳು 1500 ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ. ಇದರ ಜತೆಗೆ 200 ಯುನಿಟ್ ವಿದ್ಯುತ್, ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ, 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ. ಇದು ಹೇಗೆ ಸಾಧ್ಯವಾಗುತ್ತದೆ ಎಂಬ ಚರ್ಚೆಗೆ ಬೊಮ್ಮಾಯಿ, ಕಟೀಲ್ ಸಿದ್ಧರಿದ್ದರೆ ಮಾಧ್ಯಮಗಳ ವೇದಿಕೆ ಮುಂದೆ ಬಂದು ಚರ್ಚೆ ಮಾಡಲಿ. ಅವರ ಪ್ರಣಾಳಿಕೆ, 15 ಲಕ್ಷ ನೀಡುವ ಭರವಸೆ ಸೇರಿದಂತೆ ಎಲ್ಲದರ ಬಗ್ಗೆ ಚರ್ಚೆ ಮಾಡೋಣ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next