ವಿಯೆನ್ನ ನಗರ ಆಸ್ಟ್ರಿಯಾ ದೇಶದ ರಾಜಧಾನಿಯಾಗಿದೆ. ಆಸ್ಟ್ರಿಯಾ ದೇಶದಲ್ಲಿ ಒಂಬತ್ತು ಪ್ರಾಂತಗಳಿದ್ದು ಅದರಲ್ಲಿ ವಿಯೆನ್ನ ಅತ್ಯಂತ ದೊಡ್ಡದು. ಜತೆಗೆ ಇದು ನೂರಾರು ವರ್ಷಗಳಿಂದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದುವೂ ಆಗಿದೆ. ಇಲ್ಲಿ ನಡೆವ ಪ್ರತಿಷ್ಠಿತ ಕಲಾಪ್ರದರ್ಶನಗಳಲ್ಲಿ ಹೆಸರುಮಾಡಬೇಕೆನ್ನುವುದು ಎಲ್ಲ ಕಲಾಕಾರರ ಕನಸು. ಇಲ್ಲಿನ ಜಗತ್ಪ್ರಸಿದ್ಧ ಕಲಾ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಂದಿನಿಂದಲೂ ಮೊನಚಾದ ಸ್ಪರ್ಧೆಯಿದೆ.
ಆ ಸ್ಪರ್ಧೆಯಲ್ಲಿ ಸೆಣಸಿ ಹೊಸ ಪ್ರಕಾರದಲ್ಲಿ ಕಲೆಯನ್ನು ರಚಿಸಿ ಪ್ರಸಿದ್ಧನಾದವನು ಗುಸ್ಟಾವ್ ಕ್ಲಿಮ್ಟ್… ಎಂಬ ಚಿತ್ರಕಾರ. ಇವನು ರಚಿಸಿದ ಹಲವು ಪ್ರಸಿದ್ಧ ಕೃತಿಗಳಲ್ಲಿ “ಕಿಸ್’ ಎಂಬ ಕಲಾಕೃತಿ ಅತ್ಯಂತ ಪ್ರಸಿದ್ಧವಾದುದು. ಚಿನ್ನ, ಬೆಳ್ಳಿ, ಪ್ಲಾಟಿನಂ ಬಳಸಿ ರಚಿಸಲಾಗಿರುವ ಈ ಕೃತಿ ಏಕಪ್ರಕಾರ ಜನರ ಮೆಚ್ಚುಗೆಗೆ ಪಾತ್ರಗಿದೆ.
“ಕಿಸ್’ ಹೆಸರೇ ಹೇಳುವಂತೆ ಮುತ್ತು ಕೊಡುತ್ತಿರುವ ಗಂಡು -ಹೆಣ್ಣಿನ ಚಿತ್ರ. ಅತ್ಯಂತ ಗಾಢ ಪ್ರೀತಿ, ಉನ್ಮಾದ, ಮೈಮರೆವಿನಲ್ಲಿ ಚುಂಬಿಸುತ್ತಿರುವ ಒಬ್ಬ ಬಲಿಷ್ಠ ಗಂಡಸು ಮತ್ತು ಅಷ್ಟೇ ತನ್ಮಯತೆಯಲ್ಲಿ ಮೈ ಮರೆತು ಆಲಿಂಗನದಲ್ಲಿರುವ ಹೆಂಗಸು, ಅವರ ಸುತ್ತಮುತ್ತಲಿನ ತರು ಲತೆಗಳು, ಭೂಮಿ -ಆಕಾಶಗಳು ಇವೆಲ್ಲ ಇರುವ ಈ ಚಿತ್ರ ವಿಯೆನ್ನಾದ ಬೆಲ್ವೆರ್ಡೀ ಕ್ಯಾಸಲ್‌ನಲ್ಲಿ ಕಾಣಸಿಗುತ್ತದೆ. ಗುಸ್ಟಾವ್‌ನ ಇನ್ನಿತರ ಪ್ರಸಿದ್ಧ ಕೃತಿಗಳು ಜಗತ್ತಿನ ಇತರೆ ಪ್ರಸಿದ್ಧ ಮ್ಯೂಸಿಯಂಗಳ ಸಂಗ್ರಹಗಳನ್ನು ಸೇರಿವೆ.
ದೂರದಿಂದ ಏನೆಂದು ಅರ್ಥವಾಗದ ನವೀನ ಮಾದರಿಯ ಕಲಾಕೃತಿ ತನ್ನ ಹೊಂಬಣ್ಣದ ಹೊಳಪಿನಿಂದ ಕಣ್ಣುಗಳನ್ನು ಸೆಳೆಯುತ್ತದೆ. ಇದರಲ್ಲಿ ನಿಜವಾದ ಚಿನ್ನದ ಎಲೆಗಳು (ರೇಖು), ಬೆಳ್ಳಿ ಪ್ಲಾಟಿನಂ ಮತ್ತು ಚಿನ್ನದ ಬಣ್ಣದ ಮೆಟಾಲಿಕ್ ಪೇಂಟ್‌ಗಳನ್ನು ಬಳಸಲಾಗಿದೆ. ಈ ಚಿತ್ರದಲ್ಲಿರುವ ಪುರುಷ-ಸ್ತ್ರೀಯರ ಸಣ್ಣ ಪುತ್ತಳಿಗಳನ್ನು ಚಿತ್ರದ ಪಕ್ಕದಲ್ಲಿ ಮಾಡಿಟ್ಟು ಚಿತ್ರದಲ್ಲೇನಿದೆ ಎನ್ನುವುದನ್ನು ಸಾಧಾರಣ ಜನರಿಗೆ ಅರ್ಥವಾಗಲು ನೆರವು ನೀಡಿದ್ದಾರೆ. ಅಂಧರಿಗಾಗಿ ಬ್ರೈಲ್ ಲಿಪಿಯ ರೂಪದಲ್ಲಿಯೂ ಈ ಕಲಾಕೃತಿಯ ಸ್ವರೂಪವನ್ನು ಬಿಡಿಸಿಡಲಾಗಿದೆ. ಚರಿತ್ರೆಯನ್ನು ಕೂಡ ಬರೆದಿಡಲಾಗಿದೆ.
ಗಂಡಸಿನ ಬಲಿಷ್ಠ ಭುಜ ಮತ್ತು ತಲೆಯ ಹಿಂಭಾಗ ಕಾಣುತ್ತದಾದರೂ ಆತನ ಮುಖ ಈ ಚಿತ್ರದಲ್ಲಿಲ್ಲ. ತನ್ನೆಡೆ ಕೆನ್ನೆ ನೀಡಿ ಮೊಣಕಾಲೂರಿ ಕುಳಿತ ತರುಣಿಯನ್ನು ಭಾವೋನ್ಮತ್ತನಾಗಿ ಅವಿರತವಾಗಿ ಚುಂಬಿಸುತ್ತ ಮೊಣಕಾಲೂರಿ ಕುಳಿತ ಈತ ಮಿಕ್ಕ ಪ್ರಪಂಚದಿಂದ ಮುಖವನ್ನು ಬೇರೆಡೆ ತಿರುಗಿಸಿದಂತೆ ಕಾಣುತ್ತಾನೆ. ಆತನ ಇಡೀ ದೇಹ ಚಿನ್ನದ ಬಣ್ಣದ ಅತ್ಯಾಧುನಿಕ ಚಿತ್ತಾರಗಳಿರುವ ದೊಡ್ಡ ಮೇಲ್ಮುಸುಕಿನಲ್ಲಿ ಮುಚ್ಚಿಹೋಗಿದೆ. ಕೆನ್ನೆ ಕೊಟ್ಟು ತಲ್ಲೀನತೆಯಿಂದ ಚುಂಬನವನ್ನು ಸ್ವೀಕರಿಸುತ್ತ ಕುಳಿತ ಹೆಣ್ಣಿನ ಮುಖ, ಭುಜ, ಕೈ ಮತ್ತು ಕಾಲುಗಳು ಕಾಣುತ್ತವಾದರೂ ತೆಳುವಾದ ಪಾರದರ್ಶಕ ಚಿನ್ನದ ಪರದೆಯಂತ ನಿಲುವಂಗಿಯಲ್ಲಿ ಅವಳ ಶರೀರ ಮರೆಯಾಗುತ್ತವೆ. ಪುಟ್ಟ ಪುಟ್ಟ ಹೂಗಳು ಅವಳ ಕೇಶದ ಶೃಂಗಾರವಾಗಿವೆ. ಲಜ್ಜೆ ತುಂಬಿದ ಕಾಮೋದ್ರೇಕವೇ ಅವಳ ಮುಖ್ಯ ಅಲಂಕಾರವಾಗುತ್ತದೆ. ಅವಳ ಚಿನ್ನದ ಪರದೆಯಂತ ಮೇಲುಡುಪಿನಲ್ಲಿ ಸುರುಳಿ ವೃತ್ತಗಳಿದ್ದು ಅವು ಅವಳ ದೈಹಿಕ ಚೈತನ್ಯದ ಹರಿವಾಗುತ್ತ ಅವರಿಬ್ಬರೂ ಕುಳಿತ ಪುಟ್ಟ, ಪುಟ್ಟ ಬಣ್ಣದ ಹೂಗಳಿರುವ ಹಸುರು ದಿಬ್ಬದ ಮೇಲೂ ಚೆಲ್ಲಿ ಹರಡಿಕೊಂಡಂತೆ ತೋರುತ್ತದೆ.
ಚಿತ್ತಾರಗಳಿರುವ ಚಿನ್ನದ ಬಣ್ಣದ ಕೇಪಿನಂತಹ ಪರದೆಯೊಂದು ಈ ಚಿತ್ರದ ಹೆಣ್ಣಿನ ಹಿನ್ನೆಲೆಯಾಗುತ್ತದೆ. ಅವಳ ಒಂದು ಕೈ ಅವನ ಬಲಿಷ್ಠ ಕತ್ತನ್ನು ತಬ್ಬಿ ಚುಂಬನದ ನಾಚಿಕೆಯಲ್ಲಿ ಅರೆ-ಬರೆ ಬೆರಳುಗಳನ್ನು ಮಡಚಿಕೊಂಡಂತೆ ಚಿತ್ರಿತವಾದರೆ, ಇನ್ನೊಂದು ಕೈ ಅವಳ ಮುಖವನ್ನು ತನ್ನೆಡೆ ತಿರುಗಿಸಿಕೊಂಡ ಆತನ ಕೈಯನ್ನು ಹಿಡಿದಿದೆ. ಅವಳ ಪಾದದ ಬೆರಳುಗಳು ಮೈನವಿರಿನ ಉದ್ರೇಕದಲ್ಲಿ ಎಂಬಂತೆ ಕೂತ ನೆಲವನ್ನು ಒತ್ತಿ ಕೂರುತ್ತವೆ. ಅವನ ಮತ್ತೂಂದು ಹಸ್ತ ಆ ತರುಣಿ ತನ್ನಿಂದ ದೂರ ಸರಿಯದಂತೆ ಹೂ ಮುಡಿದ ಅವಳ ತಲೆಯನ್ನು ಆತು ಹಿಡಿದಿದೆ. ಈ ಚಿನ್ನದ ಹೊಳಪಿನಲ್ಲಿ ಅವರಿಬ್ಬರ ಮುತ್ತಿನ ಬಿಸಿಗೆ ತಾರೆಗಳು ತುಂಬಿದ ರಾತ್ರಿಯ ಆಗಸವೂ ಕಾವೇರಿ ಕೆಂಪಗಾದಂತೆ ಕಂದು ವರ್ಣದಲ್ಲಿ ಚಿತ್ರಿತವಾಗಿದೆ. ಅವರು ಕುಳಿತ ಹಸುರು ನೆಲ ಮತ್ತು ಬಣ್ಣದ ಹೂವುಗಳು ಚಿನ್ನದ ಹೊಳಪಿನಿಂದ ಕೂಡಿವೆ. ಆ ಹೆಣ್ಣಿನ ಚಿನ್ನದ ಪರದೆಯಿಂದ ಬಿಳಿಲಿನಂತೆ ಭೂಮಿಗೂ ಇಳಿವ ಚೈತನ್ಯ ಪ್ರಕೃತಿಯಲ್ಲಿ ರೋಮಾಂಚನ ಗರಿಗೆದರಿಸಿದ ಚಿತ್ರಣವಿದೆ. ಇದು ಕ್ಲಿಂಟ್‌ನ ಮತ್ತೂಂದು ಕಲಾಕೃತಿ ” ಟ್ರೀ ಆಫ್ ಲೈಫ್ ‘ ಯನ್ನು ನೆನಪಿಸುತ್ತದೆ ಎಂದು ಹೇಳುವವರೂ ಇದ್ದಾರೆ.
ಒಟ್ಟಿನಲ್ಲಿ ಪ್ರೀತಿಯಲ್ಲಿರುವ ಗಂಡು ಹೆಣ್ಣಿನ ಚುಂಬನದ ಎಲ್ಲ ನವಿರು ಉದ್ರೇಕಗಳನ್ನು ಸೆರೆಹಿಡಿದ ಈ ಕಲಾಕೃತಿ ಪ್ರಸಿದ್ಧವಾದದ್ದು ಕಲೆಯಲ್ಲಿನ ತನ್ನ ನಾವೀನ್ಯತೆಯ ಕಾರಣ. ಈತ ಕಿಸ್‌ನಂತೆಯೇ ತನ್ನ ಹಲವು ಕಲಾಕೃತಿಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಂಥ ದುಬಾರಿ ವಸ್ತುಗಳನ್ನು ಬಳಸಿದ್ದಾನೆ. ಚಿನ್ನದ ಹಳದಿ ವರ್ಣದ ಪ್ರಭೆಯ ಜತೆ ಇತರೆ ಬಣ್ಣಗಳು ಮೆರುಗು ತಳೆಯುತ್ತವೆ, ಎದ್ದು ಕಾಣುತ್ತವೆ.
ಮೊದಮೊದಲು ಸಾಂಪ್ರದಾಯಿಕವಾಗೇ ಚಿತ್ರ ಬರೆದ ಕ್ಲಿಂಟ್ 1900 ಅನಂತರ ತನ್ನದೇ ಶೈಲಿಯಲ್ಲಿ ಚಿತ್ರ ರಚಿಸತೊಡಗಿದ. ಅಂದಿನ ವಿಕ್ಟೋರಿಯನ್ ಸಮಾಜ ಅವನು ಬರೆದ ಕೆಲವು ಚಿತ್ರಗಳನ್ನು “ಲೈಂಗಿಕವಾಗಿ ಉದ್ರೇಕಕಾರಿ’ ಎಂದು ಆರೋಪಿಸಿದ ಅನಂತರ ಆತ ಬೇರೆಯವರಿಗಾಗಿ ಚಿತ್ರ ಬರೆಯುವುದನ್ನು ನಿಲ್ಲಿಸಿದ. ಅಲ್ಲಿಂದ ಮುಂದಕ್ಕೆ ಆತ ಅತ್ಯಂತ ಹೆಸರುವಾಸಿಯಾದ. ತನ್ನ ಪ್ರತಿಮಾತ್ಮಕ ಕಲಾ ಪ್ರಕಾರಕ್ಕೆ ಹೆಸರುವಾಸಿಯಾದ ಇವನ ಮೇಲೆ ಜಪಾನೀಯರ ಕಲೆಯ ಪ್ರಭಾವವೂ ಇತ್ತೆನ್ನುತ್ತಾರೆ. 1862ರಲ್ಲಿ ಹುಟ್ಟಿದ ಗುಸ್ಟಾವ್ ಕ್ಲಿಂಟ್ 1918ರ ವರೆಗೆ ಬದುಕಿದ್ದ. ಕಿಸ್ 1907-08 ರಲ್ಲಿ ರಚಿತವಾಗಿ ಪ್ರಪಂಚದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ.
ತನ್ನ ಬದುಕನ್ನು ತಿಳಿಯಬೇಕಾದರೆ ನನ್ನ ಕಲಾಕೃತಿಗಳನ್ನು ನೋಡಿ ಎನ್ನುತ್ತಿದ್ದ ಸರಳ ಆದರೆ ಗೌಪ್ಯ ಬದುಕಿನ ವ್ಯಕ್ತಿಯಾಗಿದ್ದ. ಬಡತನದಲ್ಲಿ ಹುಟ್ಟಿದರೂ ತನ್ನ ಜೀವಿತ ಕಾಲದÇÉೇ ಅತ್ಯಂತ ಪ್ರಸಿದ್ಧನಾದವನು. 1898-1908ರ ಇವನ ಜೀವಿತ ಕಾಲವನ್ನು “ಸುವರ್ಣ ಕಾಲ’ ಎಂದು ಬಣ್ಣಿಸಲಾಗುತ್ತದೆ. ಈ ಕಾಲದಲ್ಲಿ ಇವನ ಕಲೆಗೆ ಪ್ರಶಂಸೆ ಮತ್ತು ಅತ್ಯುನ್ನತ ಮನ್ನಣೆ ದೊರಕಿತು. ಈ ಅವಧಿಯಲ್ಲಿ ಅವನು ರಚಿಸಿದ ಬಹುತೇಕ ಕಲಾಕೃತಿಗಳಲ್ಲಿ ಚಿನ್ನದ ರೇಖನ್ನೇ ಬಳಸಿ ಚಿತ್ರಸಿದ್ದು ಕಾಕತಾಳೀಯವೆನಿಸುತ್ತದೆ.
ಮಿಕ್ಕ ಹಲವರ ಜತೆ ವಿಯೆನ್ನಾದ ಮ್ಯೂಸಿಯಂನ ಗೋಡೆಗಳ ಮೇಲೆ ರಚಿಸಿದ ಚಿತ್ರಗಳಿಗಾಗಿ 1888ರಲ್ಲಿ ಅಂದಿನ ಆಸ್ಟ್ರಿಯಾದ ರಾಜ ಈತನಿಗೆ ಸುವರ್ಣ ವರ್ಗದ ಗೌರವವನ್ನು ನೀಡಿ ಗುರುತಿಸಿದ. ಡೆತ್ ಆ್ಯಂಡ್ ಲೈಫ್ ಎನ್ನುವ ಅವನ ಕಲಾಕೃತಿಗೆ 1911ರಲ್ಲಿ ರೋಮ್‌ನಲ್ಲಿ ನಡೆದ ಪ್ರಪಂಚ ಕಲಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆಯಿತು. ಕಿಸ್ ಬರೆಯುವ ವೇಳೆಗೆ ಗುಸ್ಟಾವ್ ಕ್ಲಿಮ್ಟ್… ಅದೆಷ್ಟು ಪ್ರಸಿದ್ಧನಾಗಿದ್ದನೆಂದರೆ, ಕಿಸ್ ಅನ್ನು ಆತ ಪೂರ್ಣಗೊಳಿಸುವ ಮುನ್ನವೇ ಅದನ್ನು ಆಸ್ಟ್ರಿಯಾದ ಬೆಲ್ವರ್ಡೇಮ್ಯೂಸಿಯಂ ಆ ಕಾಲದ ಯಾವುದೇ ಕಲಾಕಾರನಿಗೆ ಕೊಡುವ ಐದು ಪಟ್ಟು ಹಣ ಕೊಟ್ಟು ಖರೀದಿಸಿಬಿಟ್ಟಿತು. ಆಗಿಂದಲೂ ಇದು ಆಸ್ಟ್ರಿಯಾದ ಮುಖ್ಯ ಆಸ್ತಿಗಳಲ್ಲಿ ಒಂದಾಗಿದೆ. ಅಲ್ಲಿಂದ ಮುಂದಕ್ಕೆ ಎಂದೂ ಮಾರಾಟಕ್ಕೆ ಬರದ ಈ ಕೃತಿ ಗುಸ್ಟಾವ್‌ನ ನಂಬರ್ ಒನ್ ಕೃತಿಯಾಗಿದ್ದು ಜಗತ್ತಿನಲ್ಲೇ ಒಂದು ಅತ್ಯಂತ ದುಬಾರಿ ಕಲಾಕೃತಿಯೆನಿಸಿದೆ.
1918ರಲ್ಲಿ ಈ ವರ್ಷದ ಕರೋನಾದಂತೆಯೇ ಪ್ರಪಂಚದಾದ್ಯಂತ ಹಬ್ಬಿದ ಇನ್ ಪ್ಲುಯೆಂಜಾ ಕಾಯಿಲೆಗೆ ತುತ್ತಾಗಿ ಗುಸ್ಟಾವ್ ಕ್ಲಿಂಟ್ ಅತ್ಯಂತ ಅನಿರೀಕ್ಷಿತವಾಗಿ ವಿಧಿವಶನಾದ. ಆಗ ಆತನ ವಯಸ್ಸು ಬರೇ 55 ವರ್ಷ. ಅವನ ಅನೇಕ ಕಲಾಕೃತಿಗಳು ಈ ಕಾರಣ ಪೂರ್ಣವಾಗದೆ ಉಳಿದವು.
ಸತ್ತ ಅನಂತರ ಅವನ ಪ್ರಸಿದ್ಧಿ ಮತ್ತೂ ಮುಂದುವರೆಯಿತು. ಈತ ಚಿನ್ನದ ಎಲೆಗಳನ್ನು ಬಳಸಿ ಚಿತ್ರಿಸಿದ ಅಡಿಲ್ ಬ್ಲೊಕ್ ಬಾರ್‌ಳ ಚಿತ್ರ 2006ರಲ್ಲಿ 135 ಮಿಲಿಯನ್ ಡಾರ್ಲಗಳಿಗೆ ಮಾರಾಟವಾಯಿತು. 2016ರಲ್ಲಿ ಇದೇ ಚಿತ್ರ 150 ಮಿಲಿಯನ್ ಡಾಲರ್‌ಗಳಿಗೆ ಮರುಮಾರಾಟವಾಯಿತು. ಇದನ್ನೀಗ ನ್ಯೂಯಾರ್ಕ್ ಮ್ಯೂಸಿಯಂನಲ್ಲಿ ನೋಡಬಹುದು. ಇದು ಪಿಕಾಸೊ ಬರೆದ “ಬಾಯ್ ವಿತ್ ಎ ಪೈಪ್ ‘ಗಿಂತ ( 104 ಮಿಲಿಯನ್ ಡಾಲರ್ಸ್) ಅತೀಹೆಚ್ಚು ಬೆಲೆಗೆ ಮಾರಾಟವಾಗಿ ಆ ಕಾಲದ ದಾಖಲೆಯಾಯಿತು. ಈತನ ಇತರೆ ಐದು ಕಲಾಕೃತಿಗಳು ಒಟ್ಟು 357 ಮಿಲಿಯನ್ ಡಾಲರುಗಳಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದವು. 2003ರಲ್ಲಿ ಆಸ್ಟ್ರಿಯಾ ಸರಕಾರ 14 ಗ್ರಾಂನ ನೂರು ಯೂರೋಗಳ ಚಿನ್ನದ ನಾಣ್ಯಗಳನ್ನು (ಲಿಮಿಟೆಡ್ ಎಡಿಷನ್) ಹೊರತಂದಿದೆ. ನಾಣ್ಯದ ಒಂದು ಕಡೆ ಗುಸ್ಟಾವ್ ಕ್ಲಿಮ್ಟ್ … ಇದ್ದರೆ ಮತ್ತೂಂದೆಡೆ ಕಿಸ್ ಮುದ್ರಿತವಾಗಿದೆ.
*ಡಾ| ಪ್ರೇಮಲತಾ ಬಿ., ಲಿಂಕನ್