Advertisement

ಮೂರು ವರ್ಷಗಳಲ್ಲಿ ನಷ್ಟ ಪ್ರಮಾಣ ತಗ್ಗಿಸುವ ಗುರಿ

06:33 AM May 31, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಪ್ರಸರಣ ನಷ್ಟ ಶೇ.3.16 ಹಾಗೂ ವಿತರಣೆ ನಷ್ಟವು ಶೇ.12.5ರಷ್ಟಿದೆ. ಮುಂದಿನ 3 ವರ್ಷಗಳಲ್ಲಿ ನಷ್ಟ ಪ್ರಮಾಣ ತಗ್ಗಿಸುವ ಗುರಿ ನೀಡಲಾಗಿದ್ದು, ಇದನ್ನು ತಲುಪದಿದ್ದರೆ ಮುಂದೆ ವಿದ್ಯುತ್‌ ದರ ಏರಿಕೆ ಪ್ರಸ್ತಾವಗಳನ್ನು ಪರಿಗಣಿಸುವುದು ಕಷ್ಟ ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್‌ ಮೀನಾ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕ್ರಮೇಣ ಪ್ರಸರಣ ಮತ್ತು ವಿತರಣೆ (ಟ್ರಾನ್ಸ್‌ಮಿಷನ್‌ ಆ್ಯಂಡ್‌ ಡಿಸ್ಟ್ರಿಬ್ಯೂಷನ್‌) ನಷ್ಟ ಪ್ರಮಾಣ ಇಳಿಕೆಯಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಷ್ಟ ಪ್ರಮಾಣ ತಗ್ಗಿಸಲು ಕೈಗೊಂಡಿರುವ ಕ್ರಮ ಸಮಾಧಾನಕರವಾಗಿದೆ. ಆದರೆ ಮುಂದಿನ 3 ವರ್ಷಗಳಲ್ಲಿ ನಷ್ಟ ತಗ್ಗಿಸಲು ನಿರ್ದಿಷ್ಟ ಗುರಿ ನೀಡಲಾಗಿದ್ದು, ಅದನ್ನು ತಲುಪದಿದ್ದರೆ ಮುಂದೆ ದರ ಏರಿಕೆ ಪ್ರಸ್ತಾವಕ್ಕೆ ಸ್ಪಂದಿಸುವುದು ಕಷ್ಟ ಎಂದು ತಿಳಿಸಿದರು.

ರಾಜ್ಯದಲ್ಲಿ 28 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಉಚಿತ ವಿದ್ಯುತ್‌ ನೀಡಿಕೆಗಾಗಿ ಪ್ರಸಕ್ತ ವರ್ಷದಲ್ಲಿ 11,780 ಕೋಟಿ ರೂ. ಅನುದಾನವನ್ನು ಸರ್ಕಾರ ಬಜೆಟ್‌ನಲ್ಲಿ ಕಾಯ್ದಿರಿಸಿದೆ. ಇದರ ಸದ್ಬಳಕೆ ಉದ್ದೇಶದಿಂದ ಈಗಾಗಲೇ ಕೃಷಿ ಪಂಪ್‌ಸೆಟ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಿ ದುರ್ಬಳಕೆ ತಡೆಯುವಂತೆ ಸೂಚಿಸಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.

ವಿದ್ಯುತ್‌ ಕಳವು ನಿಯಂತ್ರಣಕ್ಕೆ ಜಾಗೃತ ಪಡೆಗಳು ಅಕ್ರಮಗಳನ್ನು ಪತ್ತೆ ಹಚ್ಚಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆಯೂ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು. ಆಯೋಗದ ಸದಸ್ಯರಾದ ಎಚ್‌.ಎಂ. ಮಂಜುನಾಥ್‌, ಎಂ.ಡಿ.ರವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next