Advertisement

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

12:08 AM Nov 25, 2024 | Team Udayavani |

ಬೆಂಗಳೂರು: ಅಧಿಕ ಜನಸಾಂದ್ರತೆ ಜತೆ ಶೇ. 50ಕ್ಕಿಂತ ಹೆಚ್ಚು ಜನರು ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಜೀವನೋಪಾ­ಯಕ್ಕಾಗಿ ನೆಚ್ಚಿಕೊಂಡಿರುವುದರಿಂದ ಹವಾಮಾನ ಬದಲಾವಣೆ ಪರಿಣಾಮವಾಗಿ ಭಾರತ ಅಪಾಯಕ್ಕೆ ಸಿಲುಕಿಕೊಳ್ಳ ಬಹುದು! ಅಲ್ಲದೆ ಇನ್ನೆರಡು ದಶಕದಲ್ಲಿ ಕರ್ನಾಟಕದಲ್ಲಿ ಸರಾಸರಿ 0.60 ಡಿ.ಸೆ.ನಷ್ಟು ತಾಪಮಾನದಲ್ಲಿ ಹೆಚ್ಚಳವಾಗಲಿದೆ.

Advertisement

ಹವಾಮಾನ ವೈಪರೀತ್ಯದ ದುಷ್ಪರಿಣಾಮದಿಂದ ಬರ ಮತ್ತು ನೆರೆ ಸಂಕಷ್ಟಕ್ಕೆ ಈಡಾಗುವ ದೇಶಗಳಲ್ಲಿ ಭಾರತವೂ ಒಂದು ಎಂದು ಅಜೀಂ ಪ್ರೇಮ್‌ ಜಿ ವಿವಿಯು ಹವಾಮಾನ ವೈಪರೀತ್ಯದ ಬಗ್ಗೆ ನಡೆಸಿದ ಸಂಶೋಧನ ವರದಿಯಲ್ಲಿ ಈ ಎಚ್ಚರಿಕೆ ನೀಡಿದೆ.

ಭಾರತದಲ್ಲಿ 2021ರಿಂದ 2040ರ ಅವಧಿಯ ಜಿಲ್ಲಾವಾರು ಉಷ್ಣಾಂಶ ಬದಲಾವಣೆ ಬಗ್ಗೆ ಅಜೀಂ ಪ್ರೇಮ್‌ ಜಿ ವಿವಿಯು ಸಂಶೋಧನೆ ನಡೆಸಿ ದತ್ತಾಂಶ ಬಿಡುಗಡೆ ಮಾಡಿದೆ. ಮುಂದಿನ 2 ದಶಕದಲ್ಲಿ ದೇಶದಲ್ಲಿ ಬರಗಾಲ ಮತ್ತು ನೆರೆ ಎರಡೂ ಹೆಚ್ಚುವ ಸಾಧ್ಯತೆ ಇದ್ದು, ಆರ್ಥಿಕತೆ, ಆರೋಗ್ಯ ಮತ್ತು ಜನರ ಆಹಾರ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಹೇಳಿದೆ.

ಮುಂಗಾರು ಅನಂತರದ ಚಂಡಮಾರುತ ಕಾಣಿಸಿಕೊಳ್ಳುವ ಆವರ್ತನದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಉಂಟಾಗ ಲಿದ್ದು, ಕರಾವಳಿ ಭಾಗದವರ ಮೇಲೆ ಗಂಭೀರ ಪರಿಣಾಮ ವನ್ನುಂಟು ಮಾಡುತ್ತದೆ ಎಂದು ಅಪಾಯದ ಮುನ್ಸೂಚನೆ ನೀಡಿದೆ. ಇನ್ನೆರಡು ದಶಕದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ಲ್ಲಿಯೂ ತಾಪಮಾನ ಹೆಚ್ಚಳಗೊಳ್ಳಲಿದೆ. ಹೆಚ್ಚು ಮಳೆ ಸುರಿಯುವ, ಜೀವ ವೈವಿಧ್ಯ ಇರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸರಾಸರಿ ತಾಪಮಾನದಲ್ಲಿ ಭಾರೀ ಏರಿಕೆ ದಾಖಲಾಗಲಿದೆ. ರಾಜ್ಯದ ಒಟ್ಟು ಸರಾಸರಿ ತಾಪಮಾನದಲ್ಲಿ 0.60 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಲಿದೆ.

ಉಡುಪಿಯಲ್ಲಿ ರಾಜ್ಯದಲ್ಲೇ ಗರಿಷ್ಠ 0.95 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಲಿದೆ. ದಕ್ಷಿಣ ಕನ್ನಡದಲ್ಲಿ 0.87, ಕೊಡಗಿನಲ್ಲಿ 0.73, ಶಿವಮೊಗ್ಗ 0.70, ಉತ್ತರ ಕನ್ನಡ 0.69, ಚಿಕ್ಕಮಗಳೂರು 0.68, ಮೈಸೂರು ಮತ್ತು ಹಾಸನ 0.63, ಯಾದಗಿರಿ ಮತ್ತು ರಾಯಚೂರು 0.60, ಚಾಮರಾಜನಗರ, ಕಲಬುರಗಿ, ಹಾವೇರಿ, ದಾವಣಗೆರೆ, ಮಂಡ್ಯ 0.57, ಬೀದರ್‌ ಮತ್ತು ಕೊಪ್ಪಳ 0.56, ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ರಾಮನಗರ 0.55, ತುಮಕೂರು, ಬಾಗಲಕೋಟೆ, ಕೋಲಾರ, ಧಾರವಾಡ, ಚಿಕ್ಕಬಳ್ಳಾಪುರ 0.54, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬೆಳಗಾವಿ 0.53 ಮತ್ತು ಗದಗದಲ್ಲಿ 0.52 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಳವಾಗಲಿದೆ.

Advertisement

ಕೃಷಿ ಆಧಾರಿತ ಆರ್ಥಿಕತೆ ಮೇಲೆ ಪ್ರಭಾವ: 1986 ರಿಂದ 2015ರ ನಡುವಿನ ಮುಂಗಾರು ಪೂರ್ವದ ಅವಧಿಯಲ್ಲಿ ಭಾರತದ ವಾರ್ಷಿಕ ಸರಾಸರಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳಲ್ಲಿ ವಿಪರೀತ ಏರಿಕೆಯ ಪ್ರವೃತ್ತಿ ದಾಖಲಾಗಿದೆ. ಭಾರತದಲ್ಲಿ ತೀವ್ರ ಶಾಖದ ಆವರ್ತನವು 1950-2015ರ ನಡುವಿನ ಅವಧಿಯಲ್ಲಿ ಹೆಚ್ಚಳ ಕಂಡಿದ್ದು, ಕಳೆದ 3 ದಶಕಗಳಲ್ಲಿ ಅತಿ ವೇಗವಾಗಿ ಹೆಚ್ಚಾಗಿದೆ. ಮುಂದೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ವರದಿ ಹೇಳಿದೆ.
ಭಾರತದ ಒಟ್ಟು ಮಳೆಯಲ್ಲಿ ಶೇ. 70 ಮುಂಗಾರು ಮಳೆಯದ್ದೇ ಪಾಲು. ದೇಶದ ಪಶ್ಚಿಮ ಭಾಗದಲ್ಲಿ ನೈಋತ್ಯ ಮುಂಗಾರು ಮಳೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ಈಶಾನ್ಯ ಮುಂಗಾರು ಮಳೆಯ ಪ್ರಮಾಣ ಈಶಾನ್ಯ ಭಾರತದಲ್ಲಿ ಕಡಿಮೆ ಆಗಲಿದೆ. ಆದರೆ ಕರ್ನಾಟಕ ಸೇರಿದಂತೆ ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಲಡಾಕ್‌ನಲ್ಲಿ ಹಿಂಗಾರು ಮಳೆಯಲ್ಲಿ ಶೇ. 20ರಿಂದ ಶೇ. 60 ಹೆಚ್ಚಳವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.

ಭೂ ಕುಸಿತ ಹೆಚ್ಚಳ: ಪಶ್ಚಿಮ ಘಟ್ಟಗಳು, ಲಡಾಕ್‌, ಅರುಣಾಚಲ ಪ್ರದೇಶ, ಮೇಘಾಲಯ ಮುಂತಾದ ಎತ್ತರದ ಪ್ರದೇಶಗಳಲ್ಲಿ ಅಧಿಕ ಮಳೆಯ ಘಟನೆಗಳು ಹೆಚ್ಚುವ ಕಾರಣ ಹಿಮ ಕರಗುವಿಕೆ ಯಲ್ಲಿ ಹೆಚ್ಚಳ ಮತ್ತು ಭೂಕುಸಿತದಂತಹ ಹವಾಗುಣ ಪ್ರೇರಿತ ವಿಕೋಪಗಳು ಕಾಣಿಸಿಕೊಳ್ಳಬಹುದು. ಈ ಪ್ರದೇಶದಲ್ಲಿ ಅಧಿಕ ಮಳೆ ಉಂಟಾಗುವ ಕಾರಣ ತೋಟಗಾರಿಕೆ ಬೆಳೆಗಳು ಹಾನಿ ಗೀಡಾಗಲಿವೆ ಎಂದು ವರದಿ ವಿವರಿಸಿದೆ.

ದಕ್ಷಿಣಕ್ಕಿಂತ ಉತ್ತರ ಭಾರತದಲ್ಲೇ ಹೆಚ್ಚು ಅವಘಡ
ಪಳೆಯುಳಿಕೆ (ಫಾಸಿಲ್‌) ಇಂಧನದ ಬಳಸುವಿಕೆಯ ಆಧಾರದಲ್ಲಿ ಅಂದರೆ ಮಧ್ಯಮ ಪ್ರಮಾಣದಲ್ಲಿ ಬಳಸುವಿಕೆ ಮತ್ತು ವಿಪರೀತ ಬಳಕೆಯ ಆಧಾರದಲ್ಲಿ ಅಧ್ಯಯನ ಮಾಡಲಾಗಿದೆ. ಫಾಸಿಲ್‌ ಇಂಧನವನ್ನು ಮಧ್ಯಮ ಪ್ರಮಾಣದಲ್ಲಿ ಬಳಸಿದರೆ ಸರಾಸರಿ ತಾಪಮಾನ 2043ರ ಹೊತ್ತಿಗೆ 1.5 ಡಿ.ಸೆ ಮತ್ತು ವಿಪರೀತ ಬಳಸಿದರೆ 2041ರ ಹೊತ್ತಿಗೆ ಗರಿಷ್ಠ ತಾಪಮಾನ 1.5 ಡಿ.ಸೆ. ಹೆಚ್ಚಳಗೊಳ್ಳಲಿದೆ. ಲಡಾಕ್‌ನಲ್ಲಿ ಗರಿಷ್ಠ 1.65 ಡಿ.ಸೆ, ಜಮ್ಮು ಮತ್ತು ಕಾಶ್ಮೀರದಲ್ಲಿ 1.30 ಡಿ.ಸೆ, ಹಿಮಾಚಲ ಪ್ರದೇಶದಲ್ಲಿ 1.19 ಮತ್ತು ಉತ್ತರಾಖಂಡ 1.02 ಡಿಗ್ರಿ ತಾಪಮಾನದಲ್ಲಿ ಏರಿಕೆ ಆಗುವ ಸಂಭವವಿದೆ ಎಂದು ವರದಿ ಹೇಳಿದೆ. ಭಾರತದ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಪಶ್ಚಿಮ, ಪೂರ್ವ, ಈಶಾನ್ಯ ಮತ್ತು ಉತ್ತರ ಭಾಗದಲ್ಲಿ ಹೆಚ್ಚು ಅನಾಹುತ ಘಟಿಸುವ ಸಂಭವವಿದೆ ಎಂದು ವರದಿ ಸೂಚ್ಯವಾಗಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next