Advertisement

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

12:29 AM Nov 15, 2024 | Team Udayavani |

ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು 2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಿಗೆ ಹಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಈ ಪೈಕಿ ಪಠ್ಯಕ್ರಮವನ್ನು ಶೇ. 10ರಿಂದ ಶೇ. 15ರಷ್ಟು ಕಡಿತಗೊಳಿಸುವುದು, ಆಂತರಿಕ ಅಂಕ ಹೆಚ್ಚಿಸುವ ಪ್ರಸ್ತಾವ ಸೇರಿದೆ.

Advertisement

ಸಿಬಿಎಸ್‌ಇ ಭೋಪಾಲ್‌ ಪ್ರಾದೇಶಿಕ ಮುಖ್ಯಸ್ಥ ವಿಕಾಸ್‌ ಅಗರ್ವಾಲ್‌ ಅವರು ಇಂದೋರ್‌ನಲ್ಲಿ ಶಾಲಾ ಪ್ರಾಂಶುಪಾಲರ ಜತೆಗೆ ನಡೆಸಿದ ಸಭೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವುದರ ಜತೆಗೆ ಅಗತ್ಯ ವಿಷಯಗಳಲ್ಲಿನ ಅಧ್ಯಯನ ಹೆಚ್ಚಿಸಿ, ಕೇಂದ್ರೀಕರಿಸಲು ಸಹಾಯವಾಗುವಂತೆ ಸುಧಾರಣೆಗಳನ್ನು ಕೈಗೊಳ್ಳಲು ಸಿಬಿಎಸ್‌ಇ ಯೋಜಿಸುತ್ತಿದೆ ಎಂದಿದ್ದಾರೆ. ಆದರೆ ಈ ಪ್ರಸ್ತಾವಗಳ ಬಗ್ಗೆ ಸಿಬಿಎಸ್‌ಇ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಅಗರ್ವಾಲ್‌ ನೀಡಿದ ಮಾಹಿತಿ ಪ್ರಕಾರ ಪಠ್ಯಕ್ರಮ ಕಡಿತದ ಜತೆಗೆ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಪ್ರೋತ್ಸಾಹಿಸಲು ಪ್ರಸಕ್ತ ಶೇ. 20ರಷ್ಟಿರುವ ಆಂತರಿಕ ಅಂಕಗಳನ್ನು ಶೇ. 40ಕ್ಕೆ ಹೆಚ್ಚಿಸಿ, ಶೇ. 60ರಷ್ಟು ಅಂಕವನ್ನು ಅಂತಿಮ ಬೋರ್ಡ್‌ ಪರೀಕ್ಷೆಗೆ ಮೀಸಲಿರಿಸಲು ಯೋಜಿಸಲಾಗಿದೆ. ಈ ಮೂಲಕ ಪ್ರಾಜೆಕ್ಟ್, ಅಸೈನ್‌ಮೆಂಟ್ಸ್‌, ಆವರ್ತಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ, ಕೌಶಲ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತದೆ.
ಇದಲ್ಲದೆ ಪರೀಕ್ಷಾ ಮಾದರಿಯನ್ನೂ ಪರಿಷ್ಕರಿಸಲು ಯೋಜಿಸಲಾಗಿದ್ದು, 2025ರ ಬೋರ್ಡ್‌ ಪರೀಕ್ಷೆಗಳಲ್ಲಿ ಬರೀ ಸೈದ್ಧಾಂತಿಕ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ರೂಪಿಸುವುದರ ಬದಲಿಗೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಂದಾಣಿಕೆಯಾಗುವಂತೆ ಶೇ. 50ರಷ್ಟು ಪ್ರಶ್ನೆಗಳನ್ನು ಪ್ರಾಯೋಗಿಕ ಜ್ಞಾನ, ಕೌಶಲ ಶಿಕ್ಷಣಕ್ಕೆ ಸಂಬಂಧಿಸಿದಂತೆ ರೂಪಿಸಲಾಗುತ್ತದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

ಜತೆಗೆ ಆಯ್ದ ವಿಷಯಗಳಿಗೆ ಡಿಜಿಟಲ್‌ ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಸಾಮರ್ಥ್ಯಕ್ಕೆ ಒತ್ತು ನೀಡಲು ಇಂಗ್ಲಿಷ್‌ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ತೆರೆದ ಪುಸಕ್ತ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಎರಡು- ಅವಧಿಯ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲೂ ಮಂಡಳಿ ನಿರ್ಧರಿಸಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next