Advertisement

Debt Reduction: ನಬಾರ್ಡ್‌ ಸಾಲ ಕಡಿತ: ಪ್ರಧಾನಿ ಮೋದಿ, ಶಾ ಭೇಟಿಗೆ ರಾಜ್ಯ ಸರಕಾರದ ನಿರ್ಧಾರ

02:28 AM Nov 20, 2024 | Team Udayavani |

ಬೆಂಗಳೂರು: ಋತುಮಾನ ಕೃಷಿ ನಿರ್ವಹಣೆ ಹಂಗಾಮು ಸಾಲಕ್ಕೆ ನಬಾರ್ಡ್‌ ಸಂಸ್ಥೆ ರಿಯಾಯಿತಿ ದರದಲ್ಲಿ ರಾಜ್ಯಕ್ಕೆ ನೀಡುತ್ತಿದ್ದ ಸಾಲದ ಮಿತಿಯಲ್ಲಿ ಶೇ. 58ರಷ್ಟು ಕಡಿತ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರದ ವಿರುದ್ಧ ಅಭಿಪ್ರಾಯ ರೂಪಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ.

Advertisement

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹಾಗೂ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಈ ವಿಷಯ ತಿಳಿಸಿದ್ದು, ಕೇಂದ್ರ ಸರಕಾರ ಸಹಕಾರ ತತ್ವಕ್ಕೆ ವಿರುದ್ಧವಾಗಿದೆ, ಕಾರ್ಪೋರೇಟ್‌ ಲಾಬಿಗೆ ಮಣಿದಿದೆ. ರೈತರಿಗೆ ಸಾಲ ನೀಡುವ ವಿಷಯದಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರು.

ನ. 26ರಂದು ದಿಲ್ಲಿಯಲ್ಲಿ ರಾಷ್ಟ್ರಮಟ್ಟದ ಸಹಕಾರ ಸಮಾವೇಶ ನಡೆಯಲಿದೆ. ಪ್ರಧಾನಿ ಹಾಗೂ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್‌ ಶಾ ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ನಾನು ರಾಜ್ಯದ ನಿಯೋಗವನ್ನು ಕರೆದೊಯ್ದು ನಬಾರ್ಡ್‌ ಸಾಲ ಕಡಿತದ ಬಗ್ಗೆ ಗಮನ ಸೆಳೆಯುತ್ತೇನೆ. ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ರಾಜ್ಯ ಸರಕಾರದ ಪರವಾಗಿ ಈಗಾಗಲೇ ಪತ್ರ ಬರೆಯಲಾಗಿದೆ. ಆರ್‌ಬಿಐ ಮಾರ್ಗಸೂಚಿಯ ಹೆಸರಿನಲ್ಲಿ ಸಾಲದ ಪ್ರಮಾಣ ಕಡಿತ ಮಾಡಿರುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಅಲ್ಪಾವಧಿ ಕೃಷಿ ಸಾಲ ಪುನರ್‌ ಧನ ಮಿತಿಯನ್ನು ಶೇ. 58ರಷ್ಟು ಕಡಿತ ಮಾಡಿರುವುದರಿಂದ ಸಹಕಾರ ಬ್ಯಾಂಕ್‌ಗಳು ರೈತರಿಗೆ ನೀಡುವ ಶೂನ್ಯ ಬಡ್ಡಿದರ ಹಾಗೂ ಅಲ್ಪಾವಧಿ ಕೃಷಿ ಸಾಲ ವಿತರಣೆಗೆ ಅಡ್ಡಿಯಾಗುತ್ತದೆ. ಇದರಿಂದ ರೈತರು ಖಾಸಗಿ ಲೇವಾದೇವಿದಾರರ ಮೊರೆ ಹೋಗಬೇಕಾಗುತ್ತದೆ. ಇದರಿಂದ ಗ್ರಾಮೀಣ ಅರ್ಥ ವ್ಯವಸ್ಥೆಗೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಕೇಂದ್ರ ಸರಕಾರ ತತ್‌ಕ್ಷಣ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.

ಕೃಷಿ ಸಾಲವನ್ನು ವಾರ್ಷಿಕ ಶೇ. 20ರಷ್ಟು ಹೆಚ್ಚಳ ಮಾಡಬೇಕೆಂಬುದು ರಾಜ್ಯ ಸರಕಾರದ ಗುರಿಯಾಗಿದೆ. ಆದರೆ ನಬಾರ್ಡ್‌ ಮಿತಿ ಕಡಿತ ಮಾಡಿರುವುದರಿಂದ ಈ ಗುರಿ ಸಾಧಿಸುವುದು ಕಷ್ಟವಾಗಬಹುದು. ಜತೆಗೆ ಸಹಕಾರ ವ್ಯವಸ್ಥೆಯ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮವಾಗಬಹುದು. ಕೇಂದ್ರ ಸರಕಾರ ಕಾರ್ಪೋರೇಟ್‌ ಸಾಲ ಮನ್ನಾ ಮಾಡುವಾಗ ಯಾವುದೇ ಲೆಕ್ಕಾಚಾರ ಹಾಕುವುದಿಲ್ಲ. ಆದರೆ ರೈತರ ವಿಚಾರದಲ್ಲಿ ಮಾತ್ರ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದರು.

ಕೋರ್ಟ್‌ಗೆ ಮೊರೆ: ಸಚಿವ ಚಲುವರಾಯಸ್ವಾಮಿ

ತೆರಿಗೆ ಹಂಚಿಕೆ ವಿಷಯದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್‌ ಮೊರೆ ಹೋದಂತೆ ನಬಾರ್ಡ್‌ ಸಾಲ ಕಡಿತದ ವಿಷಯದಲ್ಲೂ ರಾಜ್ಯ ಸರಕಾರ ನ್ಯಾಯಾಲಯದ ಮೊರೆ ಹೋಗುವ ಸ್ಥಿತಿ ನಿರ್ಮಿಸಿಕೊಳ್ಳದಂತೆ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಸೇರಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಈ ಬಗ್ಗೆ ಮಾತನಾಡಿಲ್ಲ. ರೈತರ ಪರ ಎನ್ನುವ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್‌ ಜೋಶಿಯವರು ಏಕೆ ಸುಮ್ಮನಿದ್ದಾರೆ? ಇದೇ ರೀತಿ ಆದರೆ ಸಂಸದರು ರಾಜ್ಯದ ಜನರ ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ. ಕರ್ನಾಟಕದ ಧ್ವನಿಯನ್ನು ಆಲಿಸುತ್ತದೆ ಎಂದು ನಾವು ನಂಬಿದ್ದೇವೆ. ನಬಾರ್ಡ್‌ ಸಾಲ ನೀಡಿಕೆಯಲ್ಲಿ ತಾರತಮ್ಯ ಮುಂದುವರಿದರೆ ಈ ಬಾರಿಯೂ ನ್ಯಾಯಾಲಯದ ಮೊರೆ ಹೋಗಬೇಕಾಗಬಹುದು. – ಎನ್‌. ಚಲುವರಾಯಸ್ವಾಮಿ, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next