Advertisement

ರಾಜ್ಯವನ್ನು ಆನೆಕಾಲು ರೋಗ ಮುಕ್ತವಾಗಿಸುವ ಗುರಿ

03:27 PM Mar 24, 2018 | |

ಕಲಬುರಗಿ: ರಾಜ್ಯವನ್ನು 2020ರಷ್ಟೊತ್ತಿಗೆ ಅನೇಕಾಲು ರೋಗ ಮುಕ್ತವನ್ನಾಗಿಸಲು ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಆನೆಕಾಲು ರೋಗ ನಿರ್ಮೂಲನೆಗೆ ಆದ್ಯತೆ ನೀಡಬೇಕೆಂದು ಬೆಂಗಳೂರಿನ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪ್ರಾದೇಶಿಕ ನಿರ್ದೇಶಕ ಡಾ| ಕೆ. ರವಿಕುಮಾರ ತಿಳಿಸಿದರು. 

Advertisement

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೀದರ, ಬಾಗಲಕೋಟೆ, ಯಾದಗಿರಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮದ ವಿಭಾಗ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಂಭತ್ತು ಜಿಲ್ಲೆಗಳಲ್ಲಿ ಆನೆಕಾಲು ರೋಗ ಹೆಚ್ಚಿಗೆ ಇತ್ತು. ಈ ಪೈಕಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆನೇಕಾಲು ರೋಗವನ್ನು ನಿರ್ಮೂಲನೆ ಮಾಡಲಾಗಿದೆ. ಉಳಿದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನಿರ್ಮೂಲನೆ ಆಗಬೇಕಾಗಿದೆ ಎಂದರು.

ಆರೋಗ್ಯ ಇಲಾಖೆಯಿಂದ ಅನೇಕಾಲು ರೋಗಕ್ಕೆ ನೀಡುವ ಸಾಮೂಹಿಕ ಔಷಧಿ ವಿತರಣಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆನೆಕಾಲು ರೋಗ ನಿರ್ಮೂಲನೆಗೆ ಪ್ರದೇಶವಾರು ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿ ಗಂಭೀರವಾಗಿ, ಗುಣಾತ್ಮಕವಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಆನೆಕಾಲು ರೋಗ ನಿರ್ಮೂಲನೆಯು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ರೋಗ ವಾಹನ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಜಂಟಿ ನಿರ್ದೇಶಕ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ರಾಜ್ಯದ 14.45 ಲಕ್ಷ ಜನ ಆನೆಕಾಲು ರೋಗದ ಅಪಾಯಕ್ಕೆ ಒಳಗಾಗಿದ್ದಾರೆ. ಆನೆಕಾಲು ರೋಗ ನಿರ್ಮೂಲನೆಗೆ 2004 ರಿಂದ ರಾಜ್ಯದಲ್ಲಿ ಸಾಮೂಹಿಕ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರೆಗೆ 15 ಸುತ್ತಿನ ಸಾಮೂಹಿಕ ಔಷಧಿ ವಿತರಣಾ ಕಾರ್ಯಕ್ರಮ ನಡೆದಿದೆ ಎಂದು ವಿವರಿಸಿದರು.

Advertisement

ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ಆನೆಕಾಲು ರೋಗ ಹತೋಟಿಗೆ ಬರದ ಪ್ರಯುಕ್ತ ಇನ್ನೂ ಸಾಮೂಹಿಕ ಔಷಧ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ರಾಯಚೂರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಆನೆಕಾಲು ರೋಗ ಭಾಗಶಃ ನಿರ್ಮೂಲನೆಯಾಗಿದ್ದು, ಅಲ್ಲಿ ಪ್ರಸರಣಾ ಮೌಲ್ಯಮಾಪನ ನಡೆಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಇನ್ನು ಮುಂದೆ ಸಾಮೂಹಿಕ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಔಷಧಿಗಳನ್ನು ಖುದ್ದಾಗಿ ನುಂಗಿಸಲು ಕ್ರಮ ಜರುಗಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಕೆ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 8270 ಆನೆಕಾಲು
ರೋಗಿಗಳಿದ್ದು, ಈ ಪೈಕಿ 1213 ಜೈಡ್ರೋಸಿಲ್‌ ನಿಂದ ಬಳಲುತ್ತಿದ್ದಾರೆ. ಆನೆಕಾಲು ರೋಗ ನಿರ್ಮೂಲನೆಗೆ ನಿಖರ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅವಶ್ಯಕವಿದೆ ಎಂದರು.

ರಾಷ್ಟ್ರೀಯ ರೋಗ ವಾಹನ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕ ಡಾ| ಪ್ರಕಾಶಕುಮಾರ ಬಿ.ಜಿ., ಸಂಶೋಧನಾಧಿಕಾರಿ ಡಾ| ಮಹ್ಮದ್‌ ಶರೀಫ್‌, ಬೀದರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪಾಲ್ಗೊಂಡಿದ್ದರು. ಮಲೇರಿಯಾ ವಿಭಾಗದ ಜಿಲ್ಲಾ ಸಮಾಲೋಚಕ ಕರಣಿಕ ಕೋರೆ ನಿರೂಪಿಸಿದರು. ಕಾಲರಾ
ನಿಯಂತ್ರಣಾಧಿಕಾರಿ ಡಾ| ಗಣಜಲಖೇಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next