Advertisement

ಈ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮ ರೋಗಗಳು ಮಾಯವಾಗುತ್ತೆ… ಎಲ್ಲಿದೆ ಈ ಪುಣ್ಯ ಕ್ಷೇತ್ರ

05:52 PM Oct 07, 2024 | Team Udayavani |

ಕೆಲವೊಂದು ದೇವಸ್ಥಾನದ ಕೆರೆ ನೀರಿನಲ್ಲಿ ಔಷಧೀಯ ಗುಣಗಳು ಇರುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ ಅದರಂತೆ ನಮ್ಮ ಕರ್ನಾಟಕದ ಗಡಿ ಭಾಗವಾದಲ್ಲಿರುವ ಈ ದೇವಸ್ಥಾನದ ಕೆರೆಯೂ ಔಷಧೀಯ ಗುಣಗಳನ್ನು ಹೊಂದಿದೆಯಂತೆ. ನಾನಾ ಬಗೆಯ ಚರ್ಮ ರೋಗಗಳಿಂದ ಬಳಲುತ್ತಿರುವವರು ಈ ದೇವಸ್ಥಾನದ ಕೆರೆಯಲ್ಲಿ ಮಿಂದೆದ್ದರೆ ಅವರ ಚರ್ಮ ರೋಗ ನಿವಾರಣೆಯಾಗುತ್ತಂತೆ, ಇದಕ್ಕೆ ಪುಷ್ಟಿ ಎಂಬಂತೆ ಚರ್ಮ ರೋಗದಿಂದ ಬಳಲುತ್ತಿದ್ದ ಹಲವು ಮಂದಿ ನಾನಾ ಕಡೆ ಚಿಕಿತ್ಸೆ ಪಡೆದು ಯಾವುದೇ ಪ್ರಯೋಜನವಾಗದ ನಿಟ್ಟಿನಲ್ಲಿ ಕೊನೆಗೆ ಈ ದೇವಸ್ಥಾನದ ಕೆರೆಯಲ್ಲಿ ಮಿಂದೆದ್ದು ಚರ್ಮ ರೋಗವನ್ನು ನಿವಾರಣೆ ಮಾಡಿಕೊಂಡಿರುವುದು, ಹಾಗಾದರೆ ಈ ಪುಣ್ಯ ಕ್ಷೇತ್ರ ಇರುವುದಾದರೂ ಎಲ್ಲಿ, ಏನು ಇಲ್ಲಿಯ ವಿಶೇಷ ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ…

Advertisement

ಎಲ್ಲಿದೆ ಈ ಪುಣ್ಯ ಕ್ಷೇತ್ರ:
ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯಿರುವ ಮುಜುಂಗಾವು ಶ್ರೀ ಪಾರ್ಥಸಾರಥಿ ಶ್ರೀಕೃಷ್ಣ ದೇವಸ್ಥಾನವೇ ಸಕಲ ಚರ್ಮ ರೋಗಗಳನ್ನು ನಿವಾರಣೆ ಮಾಡುವ ಪುಣ್ಯ ಕ್ಷೇತ್ರ.

ಈ ಪುಣ್ಯ ಕ್ಷೇತ್ರದ ವಿಶೇಷತೆ ಏನು:
ಈ ದೇವಸ್ಥಾನಕ್ಕೆ ಬರುವ ಹೆಚ್ಚಿನ ಭಕ್ತರು ಚರ್ಮ ರೋಗದಿಂದ ಮುಕ್ತಿ ಕಾಣಲೆಂದು , ಅಲ್ಲದೆ ದೇವಸ್ಥಾನದ ಕೆರೆಯ ನೀರಿನಲ್ಲಿ ಔಷಧೀಯ ಗುಣಗಳು ಇರುವುದಾಗಿ ಇಲ್ಲಿಗೆ ಭೇಟಿ ನೀಡುವ ಭಕ್ತರು ಹಾಗೂ ಇಲ್ಲಿನ ಸ್ಥಳೀಯರು ಹೇಳುತ್ತಾರೆ, ಇಷ್ಟು ಮಾತ್ರವಲ್ಲದೆ ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಅನಾದಿಕಾಲದಿಂದಲೂ ಈ ದೇವಾಲಯದ ಕೆರೆಗೆ ಜನರು ಚರ್ಮ ರೋಗ ನಿವಾರಣೆಯಾಗಲೆಂದೇ ಬಂದು ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ದೇವರಿಗೆ ಹರಕೆ ಸಲ್ಲಿಸುತ್ತಾರೆ. ಇಲ್ಲಿನ ಹರಕೆಯಿಂದ ಜನರಿಗೆ ಫಲ ಸಿಕ್ಕಿದ್ದರಿಂದಲೇ ಪ್ರತಿ ವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಅಕ್ಕಿ ಮತ್ತು ಹುರುಳಿ:
ಈ ದೇವಸ್ಥಾನದ ಕೆರೆಯಲ್ಲಿ ತೀರ್ಥಸ್ನಾನ ಮಾಡುವ ಭಕ್ತಾದಿಗಳು ಮೊದಲು ಮನೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಬಂದು ಮುಷ್ಠಿ ಅಕ್ಕಿ ಮತ್ತು ಹುರುಳಿಯನ್ನು ಹಿಡಿದುಕೊಂಡು ಕೆರೆಗೆ ಅರ್ಪಿಸಬೇಕು. ಅನಂತರ ಪೂರ್ವಾಭಿಮುಖವಾಗಿ 3 ಬಾರಿ ಕೆರೆಯೆಲ್ಲಿ ಮುಳುಗಿ ಏಳಬೇಕು. ಮತ್ತೆ ಒಂದು ಮುಷ್ಠಿ ಅಕ್ಕಿ ಮತ್ತು ಹುರುಳಿಯನ್ನು ಸ್ವಲ್ಪ ಸ್ವಲ್ಪವೇ ಕೆರೆಗೆ ಅರ್ಪಿಸುತ್ತಾ ಮೂರೂ ಪ್ರದಕ್ಷಿಣೆ ಬರಬೇಕು. ಬಳಿಕ ಉಳಿದ ಅಕ್ಕಿ ಮತ್ತು ಹುರುಳಿ ಮಿಶ್ರಣವನ್ನು ದೇಗುಲದ ಮುಂಭಾಗದ ಕೊಪ್ಪರಿಗೆಯಲ್ಲಿ ಹಾಕಬೇಕು.

Advertisement

ಮುಜುಂಗಾವು ಹೆಸರಿನ ಹಿನ್ನೆಲೆ:
ಈ ಪುಣ್ಯ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯೊಂದಿದ್ದು ಅದರಂತೆ ‘ಸೂರ್ಯವಂಶದ ಮಾಂಧಾತ ರಾಜನ ಮಗನಾದ ಮುಚುಕುಂದ ಅರಸು ಶಕ್ತಿಶಾಲಿಯಾಗಿದ್ದುದರಿಂದ ದೇವತೆಗಳು ಮುಚುಕುಂದ ರಾಜನ ಸಹಾಯ ಯಾಚಿಸುತ್ತಿದ್ದರು. ಆತನ ಪರಾಕ್ರಮಕ್ಕೆ ಮನಸೋತ ದೇವತೆಗಳು ಮುಚುಕುಂದನನ್ನು ಅದೆಷ್ಟೋ ಯುದ್ಧಗಳಲ್ಲಿ ದೇವತೆಗಳ ಸೇನಾನಿಯನ್ನಾಗಿ ಮಾಡಿದ್ದರಂತೆ. ಹೀಗೆ ಕೆಲವು ಸಮಯ ಕಳೆದ ಬಳಿಕ ಮುಚುಕುಂದ ಅರಸ ದೇವ ಸೇನಾನಿಯ ಪಟ್ಟವನ್ನು ಸುಬ್ರಹ್ಮಣ್ಯನಿಗೆ ಬಿಟ್ಟುಕೊಟ್ಟು ಅಲ್ಲಿರುವ ಕಾವೇರಿ ತೀರ್ಥದ ಪ್ರಶಾಂತ ಸ್ಥಳದಲ್ಲಿ ಮನಶಾಂತಿಗಾಗಿ ಕಠಿಣ ತಪ್ಪಸ್ಸಿಗೆ ಮುಂದಾಗುತ್ತಾನಂತೆ. ಇದೆ ಸಂದರ್ಭದಲ್ಲಿ ಶ್ರೀಕೃಷ್ಣನು ವಿಹಾರಕ್ಕೆಂದು ಈ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ ಹಿಂಬಾಲಿಸಿ ಬಂದ ಕಾಲಯವನು ಗುಹೆಯೊಳಗೆ ತಪಸ್ಸು ಮಾಡುತ್ತಿದ್ದ ಮುಚುಕುಂದ ಮುನಿಯನ್ನು ಶ್ರೀಕೃಷ್ಣನೆಂದು ಭಾವಿಸಿ ಕಾಲಿನಿಂದ ಒದ್ದನಂತೆ. ಈ ವೇಳೆ ಕೋಪಗೊಂಡು ಮುಚುಕುಂದ ಕಣ್ಣು ತೆರೆದಾಗ ಕಾಲಯನು ಭಸ್ಮನಾದನಂತೆ. ಈ ವೇಳೆ ಪ್ರತ್ಯಕ್ಷನಾದ ಶ್ರೀಕೃಷ್ಣನಿಗೆ ಮುಚುಕುಂದ ಮುಳ್ಳುಸೌತೆಯನ್ನು ಅರ್ಪಿಸಿದ ಎಂದು ಪ್ರತೀತಿಯಿದೆ. ಹಾಗಾಗಿ ಈಗಲೂ ಈ ಕ್ಷೇತ್ರದಲ್ಲಿ ಮುಳ್ಳುಸೌತೆ ಸಮರ್ಪಿಸುವುದು ಇಲ್ಲಿನ ವಿಶೇಷ. ಮುಚುಕುಂದ ಕೇಳಿಕೊಂಡಂತೆ ಶ್ರೀಕೃಷ್ಣ ಇಲ್ಲಿ ನೆಲೆ ನಿಂತಿರುವುದಾಗಿ ಹೇಳಲಾಗಿದೆ. ಕಾವು ಎಂಬ ಪದಕ್ಕೆ ಕೋಪ, ಸಿಟ್ಟು ಎಂಬ ಅರ್ಥಗಳಿವೆ. ಮುಚುಕುಂದನಿಗೆ ಕಾವು ಏರಿ ಕೋಪದಿಂದ ಕಾಲಯವನನ್ನು ಭಸ್ಮಮಾಡಿದ ಸ್ಥಳ ಎಂಬ ಅರ್ಥದಲ್ಲಿ “ಮುಚುಕುಂದ ಕಾವು” ಅನಂತರದಲ್ಲಿ ‘ಮುಜುಂಗಾವು’ ಎಂದು ಕರೆಯಲ್ಪಟ್ಟಿತು.

ಪುಣ್ಯ ಸ್ನಾನ:
ಪ್ರತಿ ವರ್ಷ ತುಲಾ ಸಂಕ್ರಮಣದಂದು ಇಲ್ಲಿನ ದೇವಸ್ಥಾನದ ಕೆರೆಯಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ತೀರ್ಥಸ್ನಾನದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಾರೆ. ಆ ದಿನ ಬೆಳಗ್ಗೆ ಪ್ರಾತಃಕಾಲ 4 ಗಂಟೆಗೆ ದೇವಸ್ಥಾನದ ಅರ್ಚಕರು ದೇವಸ್ಥಾನದ ಕೆರೆಯಿಂದ ಬೆಳ್ಳಿ ಕಲಶದಲ್ಲಿ ತೀರ್ಥವನ್ನು ತಂದು ದೇವರಿಗೆ ಅಭಿಷೇಕ ಮಾಡಿದ ಬಳಿಕ ತೀರ್ಥ ಸ್ನಾನಕ್ಕೆ ಚಾಲನೆ ನೀಡಲಾಗುತ್ತದೆ. ಈ ಪುಣ್ಯ ಸ್ನಾನಕ್ಕೆ ಕಾಸರಗೋಡು, ಮಂಗಳೂರು, ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ತಲಕಾವೇರಿಗೆ ನೇರ ಸಂಪರ್ಕ:
ಮುಜುಂಗಾವು ಕೆರೆಗೂ ಕೊಡಗಿನ ತಲಕಾವೇರಿಗೂ ನೇರ ಸಂಪರ್ಕ ಇದೆ ಎಂದು ಹೇಳಲಾಗುತ್ತಿದ್ದು ಅದರಂತೆ ತಲಕಾವೇರಿಯಿಂದಲೇ ಇಲ್ಲಿನ ಕಲ್ಯಾಣಿಗೆ ನೀರು ಹರಿದು ಬರುತ್ತೆ ಎಂದು ಹೇಳಲಾಗಿದೆ. ಅಲ್ಲದೆ ಕಾವೇರಿ ಸಂಕ್ರಮಣದಂದು ಇಲ್ಲಿಗೆ ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ ಅನ್ನೋದು ಪ್ರತೀತಿ. ಹಾಗಾಗಿ ಮುಜುಂಗಾವು ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ.

ತಲುಪುವ ದಾರಿ:
ಬದಿಯಡ್ಕ – ಕುಂಬಳೆ ರಸ್ತೆಯಲ್ಲಿ ಬದಿಯಡ್ಕದಿಂದ 11 ಕಿ.ಮೀ. ದೂರದಲ್ಲಿ ಸೂರಂಬೈಲ್ ಎಂಬ ಸ್ಥಳದಲ್ಲಿ ಸಿಗುತ್ತದೆ. ಅಲ್ಲಿ ರಸ್ತೆಯ ಬಲಭಾಗದಲ್ಲಿ ದೇವಸ್ಥಾನದ ಸ್ವಾಗತ ಗೋಪುರ ಕಾಣಸಿಗುತ್ತದೆ. ಈ ಗೋಪುರದ ಮೂಲಕ 1 ಕಿ.ಮೀ. ಮುಂದುವರಿದರೆ ಮುಜುಂಗಾವು ದೇವಾಲಯ ಸಿಗುತ್ತದೆ.

– ಸುಧೀರ್, ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next