Advertisement

35 ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೂನ್ಯ

11:22 AM Sep 13, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿಯ 35 ವಾರ್ಡ್‌ಗಳಲ್ಲಿ ಹಸಿ ಮತ್ತು ಒಣಕಸ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಈ ವಾರ್ಡ್‌ಗಳಲ್ಲಿ ಒಂದೇ ಒಂದು ಕಾಂಪ್ಯಾಕ್ಟರ್‌ನಿಂದಲೂ ಹಸಿಕಸ ಮತ್ತು ಒಣಕಸ ವಿಂಗಡಣೆಯಾಗುತ್ತಿಲ್ಲ.

Advertisement

ಹೌದು, ಈ ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಬೇರ್ಪಡಿಸದೆ ಕ್ವಾರಿಗಳಿಗೆ (ಭೂ ಭರ್ತಿ) ತುಂಬಲಾಗುತ್ತಿದ್ದು, ಕಿರಿಯ ಹಾಗೂ ಹಿರಿಯ ಆರೋಗ್ಯಾಧಿ ಕಾರಿಗಳ ವಿರುದ್ಧ ಚಾಟಿ ಬೀಸಲು ಪಾಲಿಕೆ ಮುಂದಾಗಿದ್ದು, ರ್‍ಯಾಂಕಿಂಗ್‌ ಆಧಾರದ ಮೇಲೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ತೀರ್ಮಾನಿಸಿದೆ. ನಗರದಲ್ಲಿ ಕಸ ವಿಂಗಡಣೆ ಸೂಚ್ಯಂಕ ಇಳಿಜಾರು ಪರಿಸ್ಥಿತಿ ಅನುಭವಿಸುತ್ತಿದೆ. ಕಸ ವಿಂಗಡಣೆ ಪ್ರಮಾಣ ಶೇ.25-30ರ ಗಡಿದಾಟಿಲ್ಲ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಕಸ ವಿಲೇವಾರಿ ವ್ಯವಸ್ಥೆ ಸರ್ಜರಿಗೆ ನಿರ್ಧರಿಸಲಾಗಿದೆ.

ಶೂನ್ಯ ಸಾಧನೆ ವಾರ್ಡ್‌: ಜಾಲಹಳ್ಳಿ ವಾರ್ಡ್‌, ನಾಗಾವಾರ, ಕಾಡು ಗೊಂಡನ ಹಳ್ಳಿ, ಮನೋರಾಯನ ಪಾಳ್ಯ, ಮಲ್ಲೇಶ್ವರ, ದೇವರ ಜೀವನಹಳ್ಳಿ, ಮುನೇಶ್ವರ ನಗರ, ಲಿಂಗರಾಜಪುರ, ಕೆ.ಆರ್‌.ಪುರ, ಬಸವನಪುರ, ದೇವಸಂದ್ರ, ಮಾರುತಿಸೇವಾ ನಗರ, ಎಸ್‌.ಕೆ. ಗಾರ್ಡ್‌ನ್‌, ಜಯಮಹಲ್‌, ಸರ್ವಜ್ಞ ನಗರ, ಹೊಯ್ಸಳ ನಗರ, ಹಲಸೂರು, ಭಾರತಿ ನಗರ, ಶಿವಾಜಿ ನಗರ ವಾರ್ಡ್‌, ಸಂಪಂಗಿ ರಾಮನಗರ, ವನ್ನಾರ್‌ ಪೇಟೆ, ನೀಲಸಂದ್ರ, ಶಾಂತಿನಗರ, ಸುಧಾಮ್‌ ನಗರ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌, ಮಾರೇನಹಳ್ಳಿ, ಬಾಪೂಜಿ ನಗರ, ಪಾದರಾಯನಪುರ, ಜಗಜೀವನ್‌ರಾಮ್‌ ನಗರ, ರಾಯಪುರ, ಸುಂಕೇನಹಳ್ಳಿ, ವಿಶ್ವೇಶ್ವರ ಪುರ, ಹೊಂಬೇಗೌಡ ನಗರ, ಬನಶಂಕರಿ ದೇವಸ್ಥಾನ ವಾರ್ಡ್‌ ಹಾಗೂ ಗೊಟ್ಟಿಗೆರೆ ವಾರ್ಡ್‌ಗಳು ಕಸ ವಿಲೇವಾರಿಯಲ್ಲಿ ಶೂನ್ಯ ಸಾಧನೆ ಮಾಡಿವೆ ಎಂದು ಪಾಲಿಕೆ ರ್‍ಯಾಂಕಿಂಗ್‌ ನೀಡಿದೆ.

ಯಾವ ಮಾನದಂಡದ ಮೇಲೆ ಸ್ಥಾನ : ಜುಲೈ ಮಾಸದಲ್ಲಿ ಆಯಾ ವಾರ್ಡ್‌ಗಳಲ್ಲಿ ಹಸಿ ಮತ್ತು ಒಣಕಸ ಸಂಗ್ರಹ, ಆಯಾ ವಾರ್ಡ್‌ಗಳಿಂದ ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಕ್ಕೆ  ಹೋಗುತ್ತಿರುವ ಹಸಿಕಸ ಪ್ರಮಾಣದ ಹಾಗೂ ಈ ವಾರ್ಡ್‌ಗಳಲ್ಲಿನ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ಮುಖ್ಯವಾಗಿ ಭೂಭರ್ತಿಗೆ ಹೆಚ್ಚು ಕಸ ಯಾವ ವಾರ್ಡ್‌ಗಳಿಂದ ಸಾಗಣೆಯಾಗುತ್ತಿದೆ ಎಂಬುದನ್ನು ಪರಿಗಣಿಸಲಾಗಿದೆ.

ಮಾರ್ಷಲ್‌ಗ‌ಳು ಕಳೆದ ಒಂದು ವರ್ಷದಿಂದಲೂ ಕಸವಿಲೇವಾರಿ ಹಾಗೂ ಕಸವಿಂಗಡಣೆ ಮಾಡುವುದರಲ್ಲಿ ಲೋಪವೆಸಗುವವರ ಮೇಲೆ ದಂಡ ವಿಧಿಸುತ್ತಿದ್ದಾರೆ. ಇಷ್ಟಾದರೂ ನಗರದಲ್ಲಿ ಕಸ ವಿಲೇವಾರಿ ವಿಚಾರದಲ್ಲಿ ಆಗುತ್ತಿರುವ ಲೋಪಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಮಾರ್ಷಲ್‌ಗ‌ಳ ಕಾರ್ಯವೈಖರಿಯಲ್ಲೂ ಬದಲಾವಣೆ ತರಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಕಸ ವಿಂಗಡಣೆ ಹಾಗೂ ಶ್ರೇಣಿಯಲ್ಲಿ ಹಿಂದುಳಿದಿರುವ ವಾರ್ಡ್‌ಗಳಲ್ಲಿ ವ್ಯವಸ್ಥೆ ಸರಿಪಡಿಸಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸದೆ ಇದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಆಯುಕ್ತ ರಂದೀಪ್‌ “ಉದಯವಾಣಿ’ಗೆ ತಿಳಿಸಿದರು.

Advertisement

ನಗರದಲ್ಲಿ ಕಸವಿಲೇವಾರಿ ವಿಂಗಡಣೆ ಹಾಗೂ ನಿಯಮ ಜಾರಿ ಮಾಡುವಲ್ಲಿ ಪಾಲಿಕೆಯ ಕಿರಿಯ ಹಾಗೂ ಹಿರಿಯ ಆರೋಗ್ಯಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯಾವ ವಾರ್ಡ್‌ ಗಳಲ್ಲಿ ಆರೋಗ್ಯಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಅವರಿಗೆ ನೋಟಿಸ್‌ ಜಾರಿ ಮಾಡಲು ನಿರ್ಧರಿಸಲಾಗಿದೆ.  –ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

 

ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next