Advertisement

ವರ್ಷಾಂತ್ಯಕ್ಕೆ ಮೊದಲ ಹಂತ ಪೂರ್ಣ

04:16 PM Oct 28, 2017 | Team Udayavani |

ಬೆಂಗಳೂರು: ನಗರ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಕಾರುಗಳ ನಿಲುಗಡೆ ಯೋಜನೆಯ ಮೊದಲ ಹಂತ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಮೇಯರ್‌ ಸಂಪತ್‌ ರಾಜ್‌ ಹೇಳಿದರು.

Advertisement

ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್‌, ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ವಾಹನಗಳ ನಿಲುಗಡೆ ದೊಡ್ಡ ಸಮಸ್ಯೆಯಾಗಿದ್ದು, ರಸ್ತೆಗಳಲ್ಲೇ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಕಿರಿಕಿರಿಯಾಗಿದೆ. ಆದ್ದರಿಂದ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಡಿಸೆಂಬರ್‌ ಅಂತ್ಯದೊಳಗೆ ಮೊದಲ ಹಂತದ ಕಾಮಗಾರಿ ಮುಗಿಯಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಸೂಚಿಸಿದರು.

ಒಟ್ಟಾರೆ 79 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬಹುಮಹಡಿ ಕಾರುಗಳ ನಿಲುಗಡೆ ಯೋಜನೆ ಮೊದಲ ಹಂತದ ಕಾಮಗಾರಿ ಈಗಾಗಲೇ ಶೇ.40ರಷ್ಟು ಪ್ರಗತಿಯಾಗಿದ್ದು, ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇದರಿಂದ 150ರಿಂದ 200 ಕಾರುಗಳ ನಿಲುಗಡೆ ಹಾಗೂ 150 ದ್ವಿಚಕ್ರ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡಬಹುದು ಎಂದರು.

ಮೊದಲ ಹಂತದ ಕಾಮಗಾರಿಗೆ ನವೆಂಬರ್‌ ಗಡುವು ನೀಡಲಾಗಿತ್ತು. ಆದರೆ, ನಿರಂತರ ಮಳೆಯಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಜತೆಗೆ ಕಲ್ಲುಮಿಶ್ರಿತ ಮಣ್ಣು ಇರುವುದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತು. ಅದೇನೇ ಇರಲಿ, ಡಿಸೆಂಬರ್‌ ಅಂತ್ಯಕ್ಕೆ ಮೊದಲ ಹಂತ ಹಾಗೂ ಮಾರ್ಚ್‌ ಒಳಗೆ ಎರಡನೇ ಹಂತ ಮುಗಿಯಲಿದೆ.

ಆಗ 500 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಭೂಮಿಯ ಮೇಲಿನಿಂದ ಸುಮಾರು 12 ಮೀಟರ್‌ ಆಳಕ್ಕಿಳಿದು ಅಲ್ಲಿಂದ ಬಹುಮಹಡಿ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. 45 ಸಾವಿರ ಕ್ಯುಬಿಕ್‌ ಮೀಟರ್‌ ಮಣ್ಣು ಈಗಾಗಲೇ ಹೊರತೆಗೆಯಲಗಿದೆ. ಭೂಮಿ ಅಡಿ ಕಲ್ಲು ಇದ್ದುದರಿಂದ ಬ್ಲಾಸ್ಟ್‌ ಮಾಡಬೇಕಾಗಿತ್ತು.

Advertisement

ಆದರೆ, ಹೃದಯಭಾಗದಲ್ಲಿರುವುದರಿಂದ ಇದು ಸಾಧ್ಯವಿಲ್ಲ. ಹಾಗಾಗಿ, “ಡೈಮಂಡ್‌ ರೋಪ್‌’ ಬಳಸಿ ಬಂಡೆಗಳನ್ನು ಒಡೆಯಲಾಗಿದೆ. ಪ್ರತಿ ಮಹಡಿಯಲ್ಲಿ ಎರಡು ಶೌಚಾಲಯಗಳು ಹಾಗೂ ಲಿಫ್ಟ್ ವ್ಯವಸ್ಥೆ ಇರಲಿದೆ. ಅಂಗವಿಕಲರು, ಮಹಿಳೆಯರಿಗೆ ಅನುಕೂಲವಾಗುವಂತೆ ಲಿಫ್ಟ್ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next