ಹುಣಸೂರು: ಮೈಸೂರಿನ ರಂಗಾಯಣದಿಂದ ಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿ ಚಿಣ್ಣರ ಮೇಳ ಆಯೋಜಿಸಿದ್ದು, ತಾಲೂಕು ಗಾವಡಗೆರೆ ಹಾಗೂ ನಾಗರಹೊಳೆ ಉದ್ಯಾನದ ಡಿ.ಬಿ.ಕುಪ್ಪೆ ಹಾಡಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಆ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಹೊರಟಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ ತಿಳಿಸಿದರು.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ 25 ವರ್ಷಗಳಿಂದ ರಂಗಾಯಣ ಮೈಸೂರು ನಗರದ ಮಕ್ಕಳಿಗೆ ಮಾತ್ರ ಚಿಣ್ಣರ ಮೇಳ ಆಯೋಜಿಸಿಕೊಂಡು ಬಂದಿತ್ತು. ಇಂತಹ ಮೇಳ ಗ್ರಾಮೀಣ ಪ್ರದೇಶದಲ್ಲಿ ನಡೆಸಬೇಕೆಂಬ ಬಹುಜನರ ಬೇಡಿಕೆಯನ್ನು ರಂಗಾಯಣವು ಸಕಾರಾತ್ಮಕವಾಗಿ ಸ್ವೀಕರಿಸಿ, ಪ್ರಥಮ ಬಾರಿಗೆ ತಾಲೂಕಿನ ಗಾವಡಗೆರೆಯಲ್ಲೂ ಹಾಗೂ ಆದಿವಾಸಿ ಮಕ್ಕಳಿಗೂ ಇಂತಹ ಅವಕಾಶ ಕಲ್ಪಿಸಲು ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗಿರಿಜನ ಹಾಡಿಯ ಆಶ್ರಮ ಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಂಗಾಯಣದ ಹಿರಿಯ ಕಲಾವಿದ ಕೃಷ್ಣಪ್ರಸಾದ್ ಮಾತನಾಡಿ, ಮಕ್ಕಳ ಪ್ರತಿಭೆ ಪೊ›ತ್ಸಾಹಿಸುವ ದೃಷ್ಟಿಯಿಂದ ನಾಟಕದೊಂದಿಗೆ ಮಕ್ಕಳ ಅಭಿರುಚಿಗೆ ತಕ್ಕಂತೆ ಜನಪದ ನೃತ್ಯ, ಗೀತೆ, ಚಿತ್ರಕಲೆ, ಪೇಪರ್ ಮೇಕಿಂಗ್ ಸೇರಿ ಅನೇಕ ಕಲೆಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಇಲ್ಲಿ ಕಲಿತದ್ದನ್ನು ರಂಗಾಯಣದಲ್ಲೂ, ಅಲ್ಲಿ ಕಲಿತದ್ದನ್ನು ಇಲ್ಲಿಯೂ ಮಕ್ಕಳು ಪರಸ್ಪರ ಪ್ರದರ್ಶನ ಮಾಡಿ ಸಾಂಸ್ಕೃತಿಕ ವಿನಿಮಯ ಮಾಡುವ ಆಲೋಚನೆಯೂ ಇದೆ. ಈ ಎರಡೂ ಕಡೆ ನಡೆಯುವ ಮೇಳದ ಉಸ್ತುವಾರಿಯನ್ನು ವಹಿಸುವರೆಂದರು.
ಚಿಣ್ಣರಿಗೆ ಹಾಡಿ ವಾಸ್ತವ್ಯ: ರಂಗಾಯಣದ ಚಿಣ್ಣರ ಮೇಳದಲ್ಲಿ ತಾಲೂಕಿನ ಮಕ್ಕಳು ಭಾಗವಹಿಸಬಹುದಾಗಿದೆ. 500 ರೂ. ಶುಲ್ಕ ನಿಗದಿಪಡಿಸಿದೆ. ಡಿ.ಬಿ.ಕುಪ್ಪೆಯ ಆಶ್ರಮ ಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ 10 ಆದಿವಾಸಿ ಮಕ್ಕಳು ಭಾಗವಹಿಸಲಿದ್ದು, ಇವರಿಗೆ ಉಚಿತ ತರಬೇತಿ ನೀಡಲಾಗುವುದು.
ತಾವು ವ್ಯಾಸಂಗ ಮಾಡಿದ ಹುಣಸೂರು ತಾಲೂಕಿನ ಗಾವಡಗೆರೆಯ ಸರ್ಕಾರಿ ಶಾಲೆಯಲ್ಲಿ ಚಿಣ್ಣರ ಮೇಳ ಉದ್ಘಾಟನೆಗೊಂಡಿದ್ದು ಮೇ 5 ರವರೆಗೆ ನಡೆಯಲಿದೆ. ಡಿ.ಬಿ.ಕುಪ್ಪೆಯ ಹಾಡಿಯಲ್ಲಿ ಏ.21ರಂದು ಉಧಾ^ಟನೆಗೊಳ್ಳಲಿದ್ದು, ಮೇ 10ರ ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಚಿಣ್ಣರ ಮೇಳದ ನಿರ್ದೇಶಕ, ಹಿರಿಯ ಕಲಾವಿದ ಕೃಷ್ಣಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್ ಇದ್ದರು.