Advertisement

ಕೋವಿಡ್-19 ವಿರುದ್ಧದ ಹೋರಾಟ ಇನ್ನೂ ಇದೆ ಸವಾಲು

10:06 AM Apr 25, 2020 | Sriram |

ಕೋವಿಡ್-19 ಸಾಂಕ್ರಾಮಿಕವು ಚೀನಾದ ಗಡಿ ದಾಟಿ, ಯುರೋಪ್‌ ಹಾಗೂ ಅಮೆರಿಕದಲ್ಲಿ ಹಾವಳಿ ಎಬ್ಬಿಸಲು ಆರಂಭಿಸಿದಾಗ ಇಡೀ ಜಗತ್ತೇ ಬೆಚ್ಚಿಬಿದ್ದಿತು. ಕಡಿಮೆ ಜನಸಂಖ್ಯೆ, ಬಲಿಷ್ಠ ಆರ್ಥಿಕತೆ, ಅತ್ಯಾಧುನಿಕ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳೇ ಹೀಗೆ ತತ್ತರಿಸಿ ಹೋದಾಗ, ಭಾರತದಂಥ ಬೃಹತ್‌ ಜನಸಂಖ್ಯೆಯ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಹೇಗೆ ಈ ಬಿಕ್ಕಟ್ಟನ್ನು ನಿರ್ವಹಿಸೀತು ಎಂಬ ದೊಡ್ಡ ಪ್ರಶ್ನೆ ಎದುರಾಗಿತ್ತು. ಅದರಲ್ಲೂ ವರ್ಷಗಳಿಂದ ದೇಶದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಕಂಡಿದ್ದ ಭಾರತೀಯರಿಗೂ ಈ ಆತಂಕ ಕಾಡಿದ್ದು ಸಹಜವೇ.

Advertisement

ಆದರೆ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ತೋರಿಸುತ್ತಿರುವ ಸಮಯಪ್ರಜ್ಞೆ,ಒಗ್ಗಟ್ಟು,ದೃಢ ಹೆಜ್ಜೆಗಳು,ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ರೋಗ ಹರಡುವಿಕೆಯನ್ನು ಗಮನಾರ್ಹವಾಗಿ ತಡೆದಿರುವುದು ವೇದ್ಯವಾಗುತ್ತಿದೆ. ಆದಾಗ್ಯೂ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ ಎನ್ನುವುದು ನಿಜವಾದರೂ, 130 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶ ಅಮೆರಿಕ, ಇಟಲಿ, ಸ್ಪೇನ್‌, ಫ್ರಾನ್ಸ್‌, ಬ್ರಿಟನ್ನಂತೆ ಆರಂಭಿಕ ತಪ್ಪುಗಳನ್ನು ಮಾಡದೇ ತ್ವರಿತವಾಗಿ ಲಾಕ್‌ಡೌನ್‌ಗೆ ಮುಂದಾಗಿದ್ದರಿಂದ ಬಹುದೊಡ್ಡ ಪ್ರಮಾದವನ್ನಂತೂ ತಡೆದಂತಾಗಿದೆ.

ಅಮೆರಿಕದಂಥ ರಾಷ್ಟ್ರವು, ದೇಶಾದ್ಯಂತ ಕಟ್ಟು ನಿಟ್ಟಿನ ಲಾಕ್‌ಡೌನ್‌ ತರಲು ಆರಂಭದಲ್ಲಿ ಹಿಂದೇಟು ಹಾಕಿದ್ದರಿಂದಾಗಿ ಆ ದೇಶದಲ್ಲಿಂದು 50 ಸಾವಿರಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಹಾಗೆಂದು, ಭಾರತ ಅಪಾಯದ ತೂಗುಕತ್ತಿಯಿಂದ ತಪ್ಪಿಸಿಕೊಂಡಿದೆ ಎಂದೇನೂ ಅಲ್ಲ.ಈಗಾಗಲೇ 23 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ, ಏಳುನೂರಕ್ಕೂ ಅಧಿಕ ಜನ ಪ್ರಾಣ ತೆತ್ತಿದ್ದಾರೆ. ಈ ಅಂಕಿ-ಸಂಖ್ಯೆಯು ಮತ್ತಷ್ಟು ಬೆಳೆಯಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗಮನಾರ್ಹ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ.  ಕಿಟ್‌ಗಳ, ಸುರಕ್ಷಾ ಪರಿಕರಗಳ ಅಭಾವ ಎದುರಾಗದಂತೆ, ಆರ್ಥಿಕತೆಯು ನೆಲ ಕಚ್ಚದಂತೆ ನೊಡಿಕೊಳ್ಳುವ ಬೃಹತ್‌ ಸವಾಲು ದೇಶದೆದುರು ಇದೆ. ಮೇ ತಿಂಗಳೊಳಗೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರಬಹುದು ಎಂದು ವೈಜ್ಞಾನಿಕ ವಲಯ ಎಚ್ಚರಿಸುತ್ತಿದೆ. ಹೀಗಾಗಿ, ಈ ಸವಾಲನ್ನು ನಾವೆಲ್ಲ ಧೈರ್ಯದಿಂದ ಎದುರಿಸಲೇಬೇಕಿದೆ. ಬೇಸರದ ಸಂಗತಿಯೆಂದರೆ,ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ಕೋವಿಡ್-19 ಯೋಧರಿಗೆ(ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸರು ಇತ್ಯಾದಿ) ರಾಜ್ಯ ಸೇರಿದಂತೆ, ದೇಶಾದ್ಯಂತ ಕೆಲವೆಡೆ ಅನಗತ್ಯ ಪ್ರತಿರೋಧ ಎದುರಾಗುತ್ತಿರುವುದು, ಅವರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಬೇಸರದ ವಿಷಯ. ಈ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆಡಳಿತಯಂತ್ರ, ಆರೋಗ್ಯ ವಲಯ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯ. ಸದ್ಯಕ್ಕೆ ಲಾಕ್‌ಡೌನ್‌ನ ಕಟ್ಟು ನಿಟ್ಟಾದ ಪಾಲನೆಯು ಕೋವಿಡ್-19 ವಿರುದ್ಧದ ಯಶಸ್ಸಿಗೆ ಪ್ರಬಲ ಅಸ್ತ್ರ ಎನ್ನುವುದನ್ನು ಮರೆಯದಿರೋಣ. ಭಾರತವು ಈ ಸಾಂಕ್ರಾಮಿಕದಿಂದ ಆದಷ್ಟು ಬೇಗನೇ ಪಾರಾಗಲಿ, ಆರ್ಥಿಕತೆಯು ಚೇತರಿಸಿಕೊಂಡು ಜನಜೀವನ ಸಹಜ ಸ್ಥಿತಿಗೆ ಬರಲಿ ಎಂದು ಆಶಿಸೋಣ. ಆದರೆ ಇದು ಸಾಧ್ಯವಾಗಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ ಎನ್ನುವುದೂ ನೆನಪಿರಲಿ.

Advertisement

Udayavani is now on Telegram. Click here to join our channel and stay updated with the latest news.

Next