ವರ್ಷವಿಡೀ ನಮಗಾಗಿ ಉರಿದುರಿದು ದಣಿದ ಸೂರ್ಯನೇ ಮೀಯಲು ನೇರ ಬಚ್ಚಲು ಮನೆಯಲ್ಲಿ ಬಂದು ಕುಳಿತನೋ ಎಂದು ತೋರುತ್ತದೆ. ದೀಪಾವಳಿ ನಾಳೆ ಎನ್ನುವಾಗಲೇ ಸಂಜೆಗತ್ತಲಲ್ಲಿ ಮನೆಮನೆಗಳಲ್ಲಿ ಮಕ್ಕಳ ಜಾಗಂಟೆ ಗಂಟೆ ವಾದನಗಳ ಗೌಜಿನ ನಡುವೆಯೇ ಹೆಣ್ಣುಜೀವಗಳಿಂದ ಗಸಗಸ ಮೈಯುಜ್ಜಿಸಿಕೊಂಡು; ಕೃಷ್ಣಕಾಯದ ತುಂಬ ಹರಿದಾಡುವ ಸುಣ್ಣದ ರಂಗವಲ್ಲಿಯ ಕಚಗುಳಿಗೆ ಕಿಟಿಕಿಟಿ ನಗುತ್ತ; ಕತ್ತಿಗೆ ಮುಳ್ಳುಸೌತೆಬಳ್ಳಿಯ ಮಾಲೆ ಹಾಕಿಸಿಕೊಂಡು; ಎರಡು ರೂಪಾಯಿ ನಾಣ್ಯಸಮೇತ ವೀಳ್ಯದೆಲೆಯಡಿಕೆ ಗುಳಕ್ಕನೆ ನುಂಗಿ; ಕಂಠಮಟ್ಟ ನೀರು ಕುಡಿದು ದೊಡ್ಡಹೊಟ್ಟೆಯ ಸುಂಡಿಲಿ ಗಣಪತಿಯಂತೆ ಒಲೆಯನ್ನೇರಿ ಬೆಳಕು ಕಣ್ತೆರೆಯುವುದನ್ನೇ ಕಾಯುವ ಭೀಮಗಾತ್ರದ ಹಂಡೆಯನ್ನು ಕಂಡಾಗ. ರಾತ್ರಿ ಎರೆಯಪ್ಪ, ಪಂಚಕಜಾjಯ ಗಡದ್ದಾಗಿ ತಿಂದು ಗೂಡು ನಿದ್ದೆಮಾಡುವ ಮಕ್ಕಳನ್ನು ಚುಮುಚುಮು ನಸುಕಲ್ಲೇ ಎಬ್ಬಿಸಿ, ಅವು ಎರೆಹುಳದಂತೆ ಕೊಸರಾಡಿದರೂ ಬಿಡದೆ ದೇವರಗೂಡಿನ ಮುಂದೆ ಕಪ್ಪೆಯನ್ನು ತಕ್ಕಡಿಯಲ್ಲಿ ಕೂರಿಸಿದಂತೆ ಮಣೆಯಲ್ಲಿ ದುಂಡಗೆ ಕೂರಿಸಿ ಎಣ್ಣೆಹಚ್ಚಿ ಮಂಡೆಗೆ ಬಿಸಿಬಿಸಿ ಹಂಡೆನೀರೆರೆದು ಮೈತಿಕ್ಕಿ ಇಡೀ ವರ್ಷದ ಕೊಳೆಯನ್ನು ತೊಳೆದು ಮೀಯಿಸಿ ಅಂಗಿಚಡ್ಡಿ ತೊಡಿಸುವ ಹೊತ್ತಿಗೆ ಅಜ್ಜಿಯ ಸೊಂಟಸೋಪಾನವಾಗುತ್ತಿತ್ತು. ಈ ಹಂಡೆಗಳೀಗ ತಲೆಮಾರುಗಳ ಗತವೈಭವವನ್ನು ಮೆಲುಕು ಹಾಕುತ್ತ ಸೋಲಾರ್ ಗೀಸರ್‌ಗಳ ಮುಂದೆ ಹ್ಯಾಪ್‌ಮೋರೆ ಹಾಕಿಕೊಂಡು ಮಂಡೆಬಾಗಿಸಿ ಮಂಡಿಯೂರಿರುವುದನ್ನು ಕಂಡಾಗ ಖೇದವೆನಿಸುತ್ತದೆ. ವರುಷಕ್ಕೊಮ್ಮೆ ಮಕ್ಕಳು ಮೊಮ್ಮಕ್ಕಳು ಬಾಂಬೆಯಿಂದಲೋ ಅಮೆರಿಕದಿಂದಲೋ ಹಬ್ಬದ ಹೊತ್ತಿಗೇ ಬರುತ್ತಾರೆಂಬ ಸಂಭ್ರಮವಿದ್ದರೂ ಹಿಂದಿನಂತೆ ಚಕ್ಕುಲಿ ಕೋಡುಬಳೆ ಹೋಳಿಗೆಹೂರಣ ತಯಾರಿಯ ಮಹಾಯಾಗದ ಘಮಲಿನ ತನನನ ತಕಧಿಮಿಥಯ್ಯ ಮನೆಯಲಿಲ್ಲ, ಸುಲಭರುಚಿ ಹೊಸರುಚಿ. ಲೋಕವೇ ರೆಡಿಮೇಡ್ ಪ್ಯಾಕೆಟಿನೊಳಗೆ ಮೈತೂರಿಕೊಂಡು ಹಳ್ಳಿಯೊಳಗೆ ಬಂದುಬಿಟ್ಟಿದೆ. ನಿತ್ಯ ಹೊಸ ಅಂಗಿ ಕೊಂಡುತಂದು, ಸಿಹಿತಿಂಡಿ ಕೊಂಡುತಿಂದು ರೂಢಿಯಾಗಿ ಯುಗಾದಿ ದೀಪಾವಳಿ ನೀರಸವೆನಿಸುತ್ತದೆ. ಪೂಜೆ ಮುಗಿಯುವವರೆಗೆ ಕಾಯುವ ತಾಳ್ಮೆಯಿಲ್ಲ ಮಕ್ಕಳಿಗೆ. ದೇವರಿಗೆ ನೈವೇದ್ಯವಿಡುವ ಮುನ್ನವೇ ಎಂಜಲಾಗಿರುತ್ತದೆ. ಬೇಕು ಎಂಬ ಪದ ಮುಗಿಯುವ ಮುನ್ನವೇ ಹೆತ್ತವರು ತಂದುಕೊಟ್ಟು ಕೊಟ್ಟು , ಬೇಕು ಅಂದರೆ ಬೇಕೇ ಬೇಕು.
ಕೊಯ್ಲು ಮುಗಿದು ಬಯಲಿಗೆ ಬಯಲಾದ ಆಕಾಶದಂಥ ಗದ್ದೆಗಳಲ್ಲಿ ನಕ್ಷತ್ರಗಳಂತೆ ಮಿನುಗುವ ಭೂಮಿದೀಪದ ಸಂಭ್ರಮವನ್ನು ನೋಡಬೇಕಾದರೆ ಹಳ್ಳಿಗಳಿಗೇ ಹೋಗಬೇಕು. ಕತ್ತಲಲ್ಲಿ ಬದುವಿನಲ್ಲಿ ನಡೆಯುವ ಉಳುವವನ ಕೈಯಲ್ಲಿ ದೀಟಿಗೆ. ತಲೆಯಲ್ಲಿ ಬುಟ್ಟಿ. ಅದರ ತುಂಬ ಗದ್ದೆಪೂಜೆಗೆ ಬೇಕಾಗುವ ಕುತ್ಕಸೊಪ್ಪು, ನಾತಸೊಪ್ಪು, ಜಗೆ¾ಸೊಪ್ಪು, ಆಚಾರಿಬಿಳಲು, ಎಲೆಯಡಿಕೆ, ಅವಲಕ್ಕಿ, ಗೋಟುತೆಂಗಿನಕಾಯಿ, ಕಾಡುಹೂಗಳು. ಭೂತದಗುಡಿ, ಕೊಟ್ಟಿಗೆಬಾಗಿಲು, ನೊಗನೇಗಿಲು, ಬೇಸಾಯ ಸಲಕರಣೆ ಎಲ್ಲದಕ್ಕೂ ಸೊಡರು ತೋರಿಸಿ ಭತ್ತರಾಶಿಯಲ್ಲಿ ತೆಂಗಿನಕಾಯಿ ಮುಳ್ಳುಸೌತೆ ದೀಪವನ್ನಿಡುತ್ತಾರೆ. ಈಗ ಕೊಯ್ಯಲು ಜನ ಸಿಗುವುದಿಲ್ಲ, ಭತ್ತದ ರಾಶಿಯೂ ಇಲ್ಲ, ಇದ್ದರೂ ದೀಪ ತೋರಿಸುವವರಿಲ್ಲ. ಹೊಸಹೊಸ ಅಪಾರ್ಟ್‌ಮೆಂಟುಗಳನ್ನು ಅಣುಸ್ಥಾವರಗಳನ್ನು ವಿದ್ಯುತ್ಸಾ$§ವರಗಳನ್ನು ಹೊತ್ತು ಅಸ್ತಿತ್ವವನ್ನೇ ಕಳಕೊಳ್ಳುವುದು ಗದ್ದೆಗಳಿಗೀಗ ಅನಿವಾರ್ಯವಾಗಿಬಿಟ್ಟಿದೆ.
ನೆಲಜಲ ಮಾತ್ರವಲ್ಲ ಗೋವುಗಳಲ್ಲೂ ಮಾತೆಯನ್ನು ಕಾಣುತ್ತಿದ್ದ ಮಂದಿ ಅವುಗಳನ್ನು ಮೀಯಿಸಿ, ಮೈತುಂಬ ಶೇಡಿಸುಣ್ಣದ ಬೊಟ್ಟಿಟ್ಟು, ಕತ್ತಿಗೆ ನಾಮಗೋರಟಿಗೆ ಮಾಲೆ ಹಾಕಿ, ಪಾದಪೂಜೆ ಮಾಡಿ, ಬೆಳ್ತಿಗೆಯಕ್ಕಿ ಕಡುಬು, ಪಂಚಕಜಾjಯ ತಿನ್ನಿಸಿ, ಕರುಗಳನ್ನು ಹಾಲುಕುಡಿಯಲು ಬಿಡುವ ಚಂದ ನೋಡಬೇಕು. ಗೋಸಂಪತ್ತು, ಹೆಚ್ಚುಹೆಚ್ಚು ದನಗಳಿದ್ದವರೇ ಧನವಂತರಾಗಿದ್ದರು. ಇರುವ ಒಂದೆರಡು ದನಗಳನ್ನು ಗೋಕಳ್ಳರಿಂದ ಹಾಡುಹಗಲಲ್ಲಿ ಕಾಪಾಡಿಕೊಳ್ಳುವುದೆಂದರೆ ಮಹಾಯುದ್ಧವೀಗ. ರಾತ್ರಿಯಿಡೀ ಜಾಗರಣೆಯಿದ್ದು ಮುಂಜಾನೆ “ಮುಳ್ಳಮುಟ್ಟೆ ಕೂ’ ಕೂಗಿ ಒಣಮುಳ್ಳರಾಶಿಗೆ ಬೆಂಕಿಹಚ್ಚಿ ನಡೆಸುತ್ತಿದ್ದ ನರಕಾಸುರ ದಹನ ಹೊಸ ಪೀಳಿಗೆಗೆ ಅಪರೂಪವಾಗಿಬಿಟ್ಟಿದೆ. ಮಣ್ಣಲ್ಲಿ ಹುಟ್ಟಿದ ಮಣ್ಣಹಬ್ಬಗಳು ಮಣ್ಣಸೊಗಡನ್ನೇ ಕಳಕೊಳ್ಳುತ್ತಿವೆ. ಬಿದಿರಪೇಟ್ಲದಲ್ಲಿ ಪಟ್ಟೆಂದು ಹೊಡೆದು ಘಮ್ಮೆಂದು ಗಾಳಿಕೈಗೆ ಕಮ್ಟೆಕಾಯಿಯ ಪರಿಮಳವಿಡುತ್ತಿದ್ದ ಮಕ್ಕಳೀಗ ಸಾವಿರಗಟ್ಟಲೆ ದುಡ್ಡು ಸುರಿದು ಸುಡುಮದ್ದನ್ನು ಹಚ್ಚಿ ಹಸಿರುಸೀರೆಯ ಪ್ರಕೃತಿಯ ದಿವ್ಯವಾದ ಚಂದ ಹೀರಬೇಕಾದ ಕಣ್ಣುಗಳನ್ನೇ ಕಳಕೊಳ್ಳುತ್ತಿರುವುದು, ಕಾರ್ಖಾನೆಗಳಲ್ಲಿ ಸುಡುಮದ್ದು ತುಂಬಿಸುತ್ತ ಪಕಳೆ ಕೈಗಳು ನಂಜೇರಿ ಇಲ್ಲವಾಗುತ್ತಿರುವುದು ದುರಂತ.
“ಅಟ್ಟಾಳೆ ಉಂಡಾಳೆ ಮತ್ತೆ ಎಸರಿಗಿಟ್ಟಾಳೆ’. ಅಟ್ಟು ಬಡಿಸು ಉಣ್ಣು ತೊಳೆ ತಪ್ಪುವುದಿಲ್ಲ ಹೆಣ್ಣಿಗೆ. ಹುಟ್ಟಿದಮನೆ ಗೋಕುಲಾಷ್ಟಮಿ ಹೊಕ್ಕಮನೆ ಶಿವರಾತ್ರಿ ಯಂತೆ. ಅಷ್ಟಮಿಯಲ್ಲಿ ಮಗನನ್ನು ಅಡವಿಟ್ಟು ಶಿವರಾತ್ರಿಗೆ ಬಿಡಿಸಿದಳಂತೆ. ದುಡ್ಡಿಗೆ ಬಡತನವಿದ್ದರೂ ಹಬ್ಬ ಬಂತೆಂದರೆ ಸಾಕು, ಸೇರುಗಟ್ಟಲೆ ಧಾನ್ಯವರೆದು ತಿಂಡಿ ಮಾಡಿ ಹಂಚುವ ಹೃದಯ ಶ್ರೀಮಂತಿಕೆಯಿತ್ತು ಹಿಂದೆ. ಗದ್ದೆಯಿಂದ ಮುಂಡಗೆಯೆಲೆ ತಂದು, ಮುಳ್ಳು ತೆಗೆದು, ಬೆಂಕಿಯಲ್ಲಿ ಬಾಡಿಸಿ, ಚಕ್ರಮಾಡಿ ಅರ್ಧ ಗೇಣುದ್ದದ ಸಾವಿರಾರು ಕಡುಬುದೊನ್ನೆ ಮಾಡಿ ನಾಲ್ಕಾಣೆಗೆ ಇಪ್ಪತ್ತೈದು ದೊನ್ನೆಗಳಂತೆ ಮಾರುತ್ತಿದ್ದರು. ಕಡುಬು ಬೇಯಿಸಿ ಬಿಡಿಸುವಾಗಲೇ ಘಮಘಮ. ಈಗ ಅವುಗಳ ಗಾತ್ರವೋ, ಸುರ್ಪವೋ! ದೇವರೇಗತಿ. ಹತ್ತಕ್ಕೆ ನೂರು ರೂಪಾಯಿ ಕೊಟ್ಟು ತಂದು ಹಿಟ್ಟು ಸುರಿಯುತ್ತಿದ್ದಂತೆ ಸುರುಳಿ ಬಿಚ್ಚಿಕೊಳ್ಳುತ್ತ ಹಿಟ್ಟು ನೀರುಪಾಲು, ಪರಿಮಳ ಗಾಳಿಪಾಲು. ಹಬ್ಬದ ಮನೆ ತುಂಬ ಸೀರೆಗಳ ಧುಮುಧುಮು ಸಿಟ್ಟು.
ಕೊಯ್ಲು ಮುಗಿದು ಧಾನ್ಯ ರಾಶಿಹಾಕಿದ ಮೇಲೆ ಮತ್ತೇನು ಕೆಲಸ? ಹಬ್ಬಗಳದ್ದೇ ಸುಗ್ಗಿ ಭೂಮಿತಾಯಿಯ ಮಕ್ಕಳಿಗೆ. ನವರಾತ್ರಿ, ಗೌರೀಪೂಜೆ, ತುಳಸಿಪೂಜೆ, ಲಕ್ಷ್ಮೀಪೂಜೆಯೆನ್ನುತ್ತ ಹೆಚ್ಚಿನ ಹಬ್ಬಗಳಲ್ಲಿ ಹೆಣ್ಣು ಪೂಜೆ ಪಡೆಯುತ್ತಾಳೆ, ಗಂಡನೊಂದಿಗೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಾಳೆ. ಮುತ್ತೆ„ದೆಯರಿಗೆ ಬಾಗಿನ ಕೊಡುವ ಕ್ರಮವೂ ಇದೆ. ಭೂಮಿಯೆಂದರೆ ಪ್ರಕೃತಿ ನವನವೋನ್ಮೆàಶ ಶಾಲಿನಿ. ಋತುಮಾನಕ್ಕೆ ತಕ್ಕಂತೆ ದವಸಧಾನ್ಯ ಫಲಗಳನ್ನು ಕೊಡುವ ಪ್ರಕೃತಿ. ಅವುಗಳಿಂದ ತಲೆತಲಾಂತರದಿಂದ ಹರಿದುಬಂದ ತಿಂಡಿತಿನಿಸು ಶಾಕಪಾಕಗಳನ್ನು ಮಾಡಿ ಬಡಿಸುತ್ತ ಪುರುಷರಲ್ಲಿ ಮಕ್ಕಳುಮರಿಗಳಲ್ಲಿ ನವಚೈತನ್ಯವನ್ನು ತುಂಬುತ್ತಾಳೆ ಗೃಹಲಕ್ಷ್ಮೀ. ಹೆಣ್ಣು ಸುಖ ಸಮೃದ್ಧಿಯ ಸಂಕೇತ. ಹೆಣ್ಣುಮಕ್ಕಳು ಇದ್ದರೆ ಮನೆಯಲ್ಲಿ ನಿತ್ಯ ಹುಣ್ಣಿಮೆ. ಸಂಸ್ಕೃತಿಯನ್ನು ಒಡಲಲ್ಲಿ ಹೊತ್ತುಕೊಂಡೇ ಉಗಮವಾಗುವ ನೀರೆ ಶುಭ್ರದೇವತೆಯಂತೆ ಮುಂದೆ ಮುಂದೆ ಹರಿಯುವ ಜೀವನದಿ.
(ಮುಂದಿನ ಸಂಚಿಕೆಯಿಂದ ಈ ಅಂಕಣಕ್ಕೆ ವಿರಾಮ)
ಕಾತ್ಯಾಯಿನಿ ಕುಂಜಿಬೆಟ್ಟು