ಚೆನ್ನೈ: ಕಾಲಿವುಡ್ ಸಿನಿಮಾರಂಗದಲ್ಲಿ ಇಂದು ನಟ ಸೂರ್ಯ (Actor Suriya) ಅವರು ಬಹುದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಗಳಿಸುತ್ತವೆ. ನಟನಾಗಿ ಬೆಳೆಯುವ ಮುನ್ನ ಸೂರ್ಯ ಸಾಗಿದ ಕಷ್ಟದ ದಿನಗಳು ಒಂದೆರೆಡಲ್ಲ.
ಸೂರ್ಯ ಕುಟುಂಬಕ್ಕೆ ಬಣ್ಣದ ಜಗತ್ತು ಹೊಸತಲ್ಲ. ಸೂರ್ಯ ಅವರ ತಂದೆ ಶಿವಕುಮಾರ್ ನಟನಾಗಿಯೇ ಜನರಿಗೆ ಹೆಚ್ಚು ಪರಿಚಯವಾದವರು. ಆದರೆ ಸೂರ್ಯ ಅವರ ಬದುಕು ಬಣ್ಣದ ಲೋಕದಿಂದಲೇ ಆರಂಭವಾದದ್ದಲ್ಲ. ಅವರು ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಕಷ್ಟದ ದಿನಗಳನ್ನು ಜೀವಿಸಿ, ಕಷ್ಟವನ್ನರಿತು ಬೆಳೆದು ಬಂದವರು.
‘ಪಿಂಕ್ ವಿಲ್ಲಾʼ ಜತೆಗಿನ ಸಂದರ್ಶನದಲ್ಲಿ ಅವರು ತನ್ನ ಆರಂಭಿಕ ಜೀವನದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ʼಕಂಗುವʼ ಸಿನಿಮಾದ ಪ್ರಚಾರದ ವೇಳೆ ಅವರು ತಮ್ಮ ಸಿನಿಮಾ ಉದ್ಯಮ ಹಾಗೂ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ.
“ನಾನು ಟ್ರೈನಿಯಾಗಿ ಗಾರ್ಮೆಂಟ್ಸ್ ವೊಂದಕ್ಕೆ ಕೆಲಸಕ್ಕೆ ಸೇರಿದ್ದೆ. 15 ದಿನಕ್ಕೆ ನನಗೆ 750 ರೂ. ಸಂಬಳವಿತ್ತು. ಆ ಬಳಿಕ ತಿಂಗಳಿಗೆ 1200 ತಿಂಗಳ ಸಂಬಳವಿತ್ತು. ಮೂರು ವರ್ಷ ಕೆಲಸ ಮಾಡಿದೆ. ಆಗ ನನ್ನ ಸಂಬಳ ತಿಂಗಳಿಗೆ 8000 ಸಾವಿರ ಆಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದಾಗ 6 ತಿಂಗಳು ನನ್ನೊಬ್ಬ ನಟನ ಮಗವೆಂದು ಯಾರಿಗೂ ಗೊತ್ತಿರಲಿಲ್ಲ. ಒಂದು ದಿನ ನನ್ನ ತಾಯಿ ನಾನು 25 ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದೇನೆ. ಇದು ನಿನ್ನ ತಂದೆಗೆ ಗೊತ್ತಿಲ್ಲ ಎಂದು ಹೇಳಿದ್ದರು. ಏನಮ್ಮ ಹೇಳ್ತಾ ಇದ್ದೀಯಾ, ಅಪ್ಪ ಒಬ್ಬ ನಟ ಆಗಿದ್ರೂ ನೀವು ಯಾಕೆ ಸಾಲ ತೆಗದುಕೊಂಡಿದ್ದೀರಿ, ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅಂಥ ಕೇಳಿದ್ದೆ. ಆದರೆ ಆ ದಿನಗಳಲ್ಲಿ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಒಂದು ಲಕ್ಷ ಅಥವಾ ಅದಕ್ಕಿಂತ ಜಾಸ್ತಿ ಇರಲಿಲ್ಲ. ನನ್ನ ತಂದೆ ಅವರ ಕೆಲಸಕ್ಕಾಗಿ ಸಂಬಳ ನೀಡಿ ಎಂದು ಒತ್ತಾಯ ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ನನ್ನ ತಂದೆಗೆ ಸರಿಯಾದ ಕೆಲಸವೂ ಇರಲಿಲ್ಲ. 6 -10 ತಿಂಗಳು ಕೆಲಸನೇ ಇರಲಿಲ್ಲ. ಎಲ್ಲರ ವೃತ್ತಿ ಬದುಕಿನಲ್ಲಿ ಏರಳಿತಗಳಿರುತ್ತವೆ. ನನ್ನಮ್ಮನ ಸಾಲ ತೀರಿಸಲು ನಾನು ಕಾಯುತ್ತಿದ್ದೆ” ಎಂದು ಹೇಳಿದ್ದಾರೆ.
“ನಾನು ಸಾಕಷ್ಟು ಅನುಭವವನ್ನು ಪಡೆದ ನಂತರ ನಾನೊಂದು ಫ್ಯಾಕ್ಟರಿ ಶುರು ಮಾಡಬೇಕೆಂದುಕೊಂಡಿದ್ದೆ. ಇದಕ್ಕಾಗಿ ನನ್ನ ತಂದೆ ಒಂದು ಕೋಟಿ ಹೂಡಿಕೆ ಮಾಡುತ್ತಾರೆ ಎಂದು ಅಂದುಕೊಂಡಿದ್ದೆ. ಆದರೆ ನನಗೆ ನಟಿಸಲು ಅವಕಾಶ ಸಿಕ್ಕಾಗ ಎಲ್ಲವೂ ಬದಲಾಯಿತು. ಮಣಿರತ್ನಂ ಅವರು ಚಲನಚಿತ್ರವನ್ನು ನಿರ್ಮಿಸುತ್ತಿದ್ದರು ಮತ್ತು ಅವರು ನನ್ನನ್ನು ಪದೇ ಪದೇ ಕೇಳುತ್ತಿದ್ದರು. ಒಬ್ಬ ನಟನ ಮಗನಾಗಿ ಅದು ಸಹಜವಾಗಿತ್ತು. ಆದರೆ ನನಗೆ ನಟನಾಗುವ ಕನಸಿರಲಿಲ್ಲ. ಕನಸಲ್ಲೂ ನಾನು ನಟನಾಗುತ್ತೇನೆ ಅಂದುಕೊಂಡಿರಲಿಲ್ಲ. ಕ್ಯಾಮೆರಾ ಎದುರಿಸುವ 5 ದಿನ ಮುಂಚೆಯೂ ನಾನು ನಟನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ತಾಯಿ ಪಡೆದ 25,000 ರೂ. ಸಾಲವನ್ನು ಮರು ಪಾವತಿಸಲು ಈ ಉದ್ಯಮಕ್ಕೆ ಬಂದೆ. “ನಿಮ್ಮ ಸಾಲ ಮುಗಿದಿದೆ ನೀವು ಇನ್ನು ಚಿಂತಿಸಬೇಕಾಗಿಲ್ಲ” ಎಂದು ನನ್ನ ತಾಯಿಗೆ ಹೇಳಬೇಕಿತ್ತು. ಎಷ್ಟೇ ತಿಂಗಳು ಆಗಲಿ ನೀವು ಇದನ್ನು ಅಪ್ಪನಿಗೆ ಹೇಳಬೇಕಿಲ್ಲ ಎಂದು ನಾನು ಅವರ ಬಳಿ ಹೇಳಿದ್ದೆ” ಎಂದು ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.
ಹೀಗೆಯೇ ನಾನು ನಟನಾಗಿದ್ದು, ಸೂರ್ಯನಾಗಿ ಬೆಳೆದದ್ದು ಎಂದು ಅವರು ಹೇಳಿದ್ದಾರೆ.