ಕಟಪಾಡಿ: ರಾಜ್ಯದ ಉಡುಪಿ ಜಿಲ್ಲೆಯ ಮರ್ಣೆ ಎಂಬ ಗ್ರಾಮೀಣ ಭಾಗದ ಮಹೇಶ್ ಮರ್ಣೆ “ಕಲಾಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗಳ ಜೊತೆಗೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಹಳ್ಳಿಯ ಪ್ರತಿಭೆ.
ಸದಾ ಹೊಸತನದ ಹುಡುಕಾಟದಲ್ಲಿರುವ ಇವರು ಇದೀಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಸುಮಾರು 2 ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು, ಭೂತ ಕನ್ನಡಿಯನ್ನು ಸೂರ್ಯನ ಕಿರಣದ ನೇರಕ್ಕೆ ಹಿಡಿದು, ಕನ್ನಡಿಯಿಂದ ಉತ್ಪತ್ತಿಯಾಗುವ ಶಾಖವು ಮರದ ಹಲಗೆಗೆ ಬೀಳುವಂತೆ ಮಾಡಿ, ಮರವನ್ನು ಸುಟ್ಟು ರಾಷ್ಟ್ರಪತಿಗಳ ಭಾವಚಿತ್ರದ ಕಲಾಕೃತಿಯನ್ನು ರಚಿಸಿದ್ದಾರೆ.
ಕಲಾಕೃತಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸುವಾಗ ಇದನ್ನು ‘ಸೂರ್ಯ ಚುಂಬಿಸಿದ ಕಲಾಕೃತಿ’ ಎಂದು ಹೆಸರು ಇಡಲಾಗಿತ್ತು. ಈಗ ಕಲಾಕೃತಿಯನ್ನು ರಾಷ್ಟ್ರಪತಿಗಳು ಮೆಚ್ಚಿಕೊಂಡು ತಮ್ಮ ಕಚೇರಿಯಿಂದ ಈ-ಮೇಲ್ ಮೂಲಕ ಸಂದೇಶ ಕಳುಹಿಸಿರುವುದು ಹೆಮ್ಮೆಯ ಸಂಗತಿ.
ಮಹೇಶ್ ಅವರು ಮರ್ಣೆಯ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿಗಳ ಸುಪುತ್ರ. ಇವರ ಮೂಲಕ ಕಲಾ ಕ್ಷೇತ್ರದ ಇನ್ನಷ್ಟು ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿದೆ.