Advertisement
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು “ಸ್ಯಾಟಲೈಟ್ ಸಾಕ್ಷಿ’ಯೊಂದಿಗೇ ನಿಮ್ಮ ಮನೆಗೆ ಎಡತಾಕಲಿದ್ದಾರೆ! ಇದನ್ನು ನೀವು ನಂಬಲೇಬೇಕು. ತಲಾ 50 ಲಕ್ಷ ರೂ. ಕೃಷಿ ಆದಾಯ ಪಡೆಯುತ್ತಿದ್ದರೂ, ಸರ್ಕಾರಕ್ಕೆ ಯಾಮಾರಿಸುತ್ತಾ ತೆರಿಗೆ ವಿನಾಯ್ತಿ ಪಡೆಯುತ್ತಿರುವ 50 ಮಂದಿ ಶ್ರೀಮಂತ ರೈತರ ಪಟ್ಟಿ ಈಗಾಗಲೇ ಐಟಿ ಇಲಾಖೆಯ ಕೈಸೇರಿದೆ. ಇಂಥ ಇನ್ನಷ್ಟು ರೈತರ ಮೇಲೆ ನಿಗಾ ಇಡಲಿರುವ ಇಲಾಖೆ, ತೆರಿಗೆ ತಪ್ಪಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ.
ಜನರು ಇದೇ ವಿನಾಯ್ತಿಯನ್ನು ದುರ್ಬಳಕೆ ಮಾಡಿಕೊಂಡು, ಕಪ್ಪುಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ಭೂಮಾಲೀಕರು ತಮ್ಮ ಜಮೀನನ್ನು ಮಾರಾಟ ಮಾಡುವ ಮೊದಲು ಅದರಲ್ಲಿ ಕೃಷಿ ಮಾಡಲಾಗುತ್ತಿತ್ತು ಎಂದು ಸುಳ್ಳು ಹೇಳಿ, ನಕಲಿ ಪಾವತಿ ಚೀಟಿ ತೋರಿಸಿ ತೆರಿಗೆ ವಿನಾಯ್ತಿ ಪಡೆಯುತ್ತಾರೆ. ಇಂಥವರನ್ನು ಪತ್ತೆ ಹಚ್ಚಲು ಐಟಿ ಇಲಾಖೆ ಅಧಿಕಾರಿಗಳು ಈಗ ಸಖತ್ತಾಗಿರುವ ಪ್ಲ್ರಾನ್ ರೆಡಿ ಮಾಡಿಕೊಂಡಿದ್ದಾರೆ. ಇದಕ್ಕೆ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೋ) ಕೂಡ ನೆರವು ನೀಡಲಿದೆ. ಅದರಂತೆ, ಅಧಿಕಾರಿಗಳು ಮೊದಲು, ನಿರ್ದಿಷ್ಟ ಅವಧಿಯಲ್ಲಿ ಭೂಮಾಲೀಕನ ಜಮೀನಿನಲ್ಲಿ ನಿಜಕ್ಕೂ ಕೃಷಿ ಮಾಡಲಾಗುತ್ತಿತ್ತೇ ಎಂಬುದನ್ನು ಉಪಗ್ರಹ ಚಿತ್ರದ ಮೂಲಕ ದೃಢಪಡಿಸಿಕೊಳ್ಳುತ್ತಾರೆ. ಈ ಚಿತ್ರವು ನಿಖರ ಮಾಹಿತಿ ನೀಡುವ ಕಾರಣ, ಒಂದು ವೇಳೆ ಅಲ್ಲಿ ಕೃಷಿ ಮಾಡಿಯೇ ಇಲ್ಲ ಎಂಬುದು ಸಾಬೀತಾದರೆ ಸಿರಿವಂತ ಭೂಮಾಲೀಕನ ವಿರುದ್ಧ ಕ್ರಮ ಗ್ಯಾರಂಟಿ. ಅದಕ್ಕಾಗಿ, ಸಂಶಯ ವಿರುವ ವ್ಯಕ್ತಿಗಳ ಮನೆಗೆ ಐಟಿ ಅಧಿಕಾರಿಗಳು ಉಪಗ್ರಹ ಚಿತ್ರದೊಂದಿಗೇ ಬರಲಿದ್ದಾರೆ. ಕೃಷಿ ಆದಾಯಕ್ಕೆ ತೆರಿಗೆ?: ಶ್ರೀಮಂತ ರೈತರಿಗೆ ತೆರಿಗೆ ವಿನಾಯ್ತಿ ನೀಡಬಾರದು ಎಂಬ ಕೂಗು ಇತ್ತೀಚೆಗಷ್ಟೇ ಕೇಳಿಬಂದಿತ್ತು. ಆದರೆ, ಇದನ್ನು ಜಾರಿ ಮಾಡಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ರೈತರನ್ನೂ ತೆರಿಗೆ ವ್ಯಾಪ್ತಿಗೆ ತರುವ ಕುರಿತು ನೀತಿ ಆಯೋಗವೂ ಶಿಫಾರಸು ಮಾಡಿದೆ. ಆದರೆ, ಕೃಷಿ ಆದಾಯಕ್ಕೆ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳುವ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀತಿ ಆಯೋಗದ ಸಲಹೆಯನ್ನು ತಿರಸ್ಕರಿಸಿದ್ದರು.
Related Articles
ವ್ಯಕ್ತಿಯೊಬ್ಬರು ತಮ್ಮ ಕೃಷಿ ಭೂಮಿ ಮಾರಾಟ ಮಾಡಿದ್ದರಿಂದ ಸಿಕ್ಕ ಲಾಭಕ್ಕೆ ತೆರಿಗೆ ವಿನಾಯ್ತಿ ಕೋರಿದ್ದರು. ನಿಯಮದ ಪ್ರಕಾರ, ಮಾರಾಟ ಮಾಡುವ ಕನಿಷ್ಠ 2 ವರ್ಷಗಳ ಮುನ್ನ ಆ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆದಿರಬೇಕು. ಹಾಗಿದ್ದರೆ ಮಾತ್ರ ವಿನಾಯ್ತಿ ನೀಡಲಾಗುತ್ತದೆ. ಆದರೆ, ಈತ ನೀಡಿದ ಮಾಹಿತಿ ಬಗ್ಗೆ ಸಂಶಯ ಬಂದ ಕಾರಣ ಐಟಿ ಅಧಿಕಾರಿಗಳು ನೇರವಾಗಿ ಇಸ್ರೋವನ್ನು ಸಂಪರ್ಕಿಸಿದರು. ಆತನ ಭೂಮಿಯ 3 ವರ್ಷಗಳ ಅವಧಿಯ ಉಪಗ್ರಹ ಚಿತ್ರವನ್ನು ಪಡೆದು ಕೊಂಡರು. ಆಗ ಗೊತ್ತಾಗಿದ್ದೇ ನೆಂದರೆ, ಆ ಭೂಮಿ ಬರಡಾಗಿದ್ದು, ಅಲ್ಲಿ ಕೃಷಿ ಚಟುವಟಿಕೆ ನಡೆದೇ ಇಲ್ಲ ಎಂದು.
Advertisement