Advertisement

Karnataka Govt.,: ಆದಾಯ ಸಂಗ್ರಹಕ್ಕೆ ಸರಕಾರ ಗಣಿಗಾರಿಕೆ

12:51 AM Dec 07, 2024 | Team Udayavani |

ಬೆಂಗಳೂರು: ಖನಿಜ ಹಕ್ಕು ಮತ್ತು ಖನಿಜ ಇರುವ ಭೂಮಿಯ ಮೇಲಿನ ತೆರಿಗೆ, ಉಪಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಹಾಗೂ ಖನಿಜ ಪರವಾನಿಗೆ ಪಡೆಯದೆ ಸಾಗಾಣಿಕೆ ಮಾಡಿದ ಮತ್ತು ಗುತ್ತಿಗೆ ಪ್ರದೇಶ ಒತ್ತುವರಿ ಮಾಡಿದ ಕಲ್ಲು ಗಣಿ ಗುತ್ತಿಗೆದಾರರಿಂದ ದಂಡ ವಸೂಲಿಗೆ ಮುಂದಾಗಿರುವ ರಾಜ್ಯ ಸರಕಾರವು ಈ ಎಲ್ಲ ಪ್ರಕ್ರಿಯೆಗಳಿಂದ ಒಟ್ಟು 11,131.38 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದೆ.

Advertisement

ಪರವಾನಿಗೆ ಪಡೆಯದೆ ಸಾಗಣೆ ಮಾಡಿದ ಮತ್ತು ಒತ್ತುವರಿ ಮಾಡಿದ ಕಲ್ಲು ಗಣಿ ಗುತ್ತಿಗೆದಾರರಿಗೆ ಪ್ರತೀ ಟನ್‌ಗೆ 60 ರೂ.ಗಳಂತೆ 1,221 ರೂ. ರಾಜಧನ ನಿಗದಿ ಪಡಿಸಲಾಗಿತ್ತು. ಇದನ್ನು ಪಾವತಿ ಮಾಡದೆ ಇದ್ದುದರಿಂದ ಇದರ 5 ಪಟ್ಟು ದಂಡ ವಿಧಿಸಿದ್ದ ಸರಕಾರವು, 6,105.98 ಕೋಟಿ ರೂ. ದಂಡವನ್ನು ಒಂದು ಬಾರಿಯ ಪರಿಹಾರ ವಾಗಿ ನಡೆಸಲು ಉದ್ದೇಶಿಸಿದೆ.

ಇದೇ ರೀತಿ ಉಪಖನಿಜಗಳ ಮೇಲಿನ ರಾಜಧನವನ್ನು ಪರಿಷ್ಕರಣೆ ಮಾಡಿದ್ದು, ಇದರಿಂದ 311.55 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದೆ. ಇದಲ್ಲದೆ, ಖನಿಜ ಹಕ್ಕುಗಳ ಮೇಲಿನ ತೆರಿಗೆಯಿಂದ 4,207.95 ಕೋಟಿ ರೂ. ಹಾಗೂ ಖನಿಜ ಇರುವ ಭೂಮಿಯ ಮೇಲಿನ ತೆರಿಗೆಯಿಂಧ 505.90 ಕೋಟಿ ಸೇರಿ ಒಟ್ಟು 11 ಸಾವಿರ ಕೋಟಿ ರೂ.ಗಳಷ್ಟು ಆದಾಯದ ಮೇಲೆ ಸರಕಾರ ಕಣ್ಣಿಟ್ಟಿದೆ.

ಈ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜವಿರುವ ಭೂಮಿಗಳ) ತೆರಿಗೆ ಮಸೂದೆ-2024ನ್ನು ಮಂಡಿಸಲು ತಯಾರಿ ನಡೆಸಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ.

ಕರ್ನಾಟಕ (ಖನಿಜ ಹಕ್ಕು) ತೆರಿಗೆ ಕಾಯ್ದೆ 1984ರ ಅನ್ವಯ ಗಣಿ ಗುತ್ತಿಗೆದಾರರಿಂದ ಉತ್ಪಾದಿಸುವ ಖನಿಜದ ಮೇಲೆ ತೆರಿಗೆ ವಿಧಿಸಿ, ಸಂಗ್ರಹಿಸುತ್ತಿತ್ತು. ಇದಲ್ಲದೆ ಎಂಎಂಡಿಆರ್‌ ಕಾಯ್ದೆ ಅನ್ವಯ ಗಣಿ ಗುತ್ತಿಗೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಂಜೂರು ಮಾಡಿ ತೆರಿಗೆ ಮತ್ತು ರಾಜಧನ ಸಂಗ್ರಹಿಸಲಾಗುತ್ತಿತ್ತು ಎಂದು ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ವಿವರಣೆ ನೀಡಿದರು.

Advertisement

ಹರಾಜೇತರ ಮಾರ್ಗದಿಂದ ಮಂಜೂರು ಮಾಡಿದ ಗಣಿಗುತ್ತಿಗೆ, 2015ಕ್ಕೆ ಮುನ್ನ ಕೇಂದ್ರ ಅಥವಾ ರಾಜ್ಯ ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್‌ಯು) ಗಳಿಗೆ ಮಂಜೂರು ಮಾಡಿದ ಮತ್ತು ಮೂಲ ಗಣಿ ಗುತ್ತಿಗೆ ದಿನಾಂಕದಿಂದ 50 ವರ್ಷಗಳನ್ನು ಪೂರ್ಣಗೊಳಿಸದೆ ಇರುವ ಗಣಿ ಗುತ್ತಿಗೆ, 2015ರ ಪೂರ್ವದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್‌ಯು) ಗಳಿಗೆ ಮಂಜೂರು ಮಾಡಿದ ಮತ್ತು ಮೂಲ ಗಣಿ ಗುತ್ತಿಗೆ ದಿನಾಂಕದಿಂದ 50 ವರ್ಷಗಳನ್ನು ಪೂರ್ಣಗೊಳಿಸಿ 20 ವರ್ಷಗಳ ಮತ್ತೂಂದು ಅವಧಿಗೆ ವಿಸ್ತರಿಸಿದ ಗಣಿ ಗುತ್ತಿಗೆ, 2015ರ ಅನಂತರ ಕೇಂದ್ರ ಅಥವಾ ರಾಜ್ಯ ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್‌ಯು) ಗಳಿಗೆ ಮಂಜೂರು ಮಾಡಿದ ಗಣಿ ಗುತ್ತಿಗೆ ಹಾಗೂ 2015 ರ ನಂತರ ಹರಾಜು ಮೂಲಕ ಮಂಜೂರು ಮಾಡಿದ ಗಣಿ ಗುತ್ತಿಗೆಗಳಿಗೆ ಇದು ಅನ್ವಯ ಆಗುತ್ತಿತ್ತು.

ಕನಿಷ್ಠ 20 ರೂ.ಗಳಿಂದ ಗರಿಷ್ಠ 100 ರೂ.ವರೆಗೆ ತೆರಿಗೆ ಖನಿಜ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರ ನಡುವಿನ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಅನ್ವಯ ಖನಿಜ ಹಕ್ಕು ಮತ್ತು ಖನಿಜವಿರುವ ಭೂಮಿಯ ಮೇಲೂ ರಾಜ್ಯ ಸರಕಾರಗಳಿಗೆ ಅಧಿಕಾರ ಸಿಕ್ಕಿದ್ದು, ಈ ಮೂಲಕ ತೆರಿಗೆ ವಿಧಿಸುವ ಅಧಿಕಾರವನ್ನು ಕಾಯ್ದಿರಿಸುವ ಉದ್ದೇಶ ಹೊಂದಿದೆ.

ಜಮೀನಿನಲ್ಲಿ ಯಾವುದೇ ಪ್ರಮುಖ ಖನಿಜ ನಿಕ್ಷೇಪಗಳಿದ್ದು, ಗಣಿ ಗುತ್ತಿಗೆ ನೀಡುವ ಪಟ್ಟಾ ಭೂಮಿ ಆಗಿದ್ದರೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಖನಿಜವಿರುವ ಭೂಮಿಯ ಮೇಲಿನ ತೆರಿಗೆ ಕುರಿತಂತೆ ಗಣಿ ಗುತ್ತಿಗೆ ಮಂಜೂರಾದ ವಿಧಾನವನ್ನು ಪರಿಗಣಿಸದೆ ಪ್ರತೀ ಟನ್‌ಗೆ ಕನಿಷ್ಠ 20 ರೂ.ಗಳಿಂದ ಗರಿಷ್ಠ 100 ರೂ.ವರೆಗೆ ತೆರಿಗೆ ವಿಧಿಸಬಹುದಾಗಿರುತ್ತದೆ. ಹರಾಜು ಮಾಡಲಾದ ಗಣಿ ಗುತ್ತಿಗೆಗಳಿಗೆ ಮಾತ್ರ ಪ್ರತೀ ಟನ್‌ಗೆ 1 ರೂ.ನಂತೆ ತೆರಿಗೆ ವಿಧಿಸಲು ಪ್ರಸ್ತಾವಿಸಿದೆ.

ವಾರ್ಷಿಕ 4,700 ಕೋ.ರೂ.
ಹೆಚ್ಚುವರಿ ಆದಾಯದ ನಿರೀಕ್ಷೆ
ವಿವಿಧ ವರ್ಗ ಹಾಗೂ ಖನಿಜಗಳಿಗೆ ಪ್ರಸ್ತುತ ಪಾವತಿಸುತ್ತಿರುವ ರಾಜಧನ ಮತ್ತು ಹೆಚ್ಚುವರಿ ಪಾವತಿಯನ್ನು ಆಧರಿಸಿ ವ್ಯತ್ಯಾಸ ದರದ ತೆರಿಗೆ ವಿಧಿಸಲು ಪ್ರಸ್ತಾಪಿಸಿದ್ದು, ಎಲ್ಲ ವರ್ಗಗಳಿಗೆ ಶೇ.60ರ ಏಕರೂಪದ ತೆರಿಗೆ ವಿಧಿಸಲು ಪ್ರಸ್ತಾವಿಸಿದೆ. ವರ್ಗವಾರು ವಿವಿಧ ದರಗಳಲ್ಲಿ ತೆರಿಗೆ ವಿಧಿಸಿದರೂ ಆಯಾ ವರ್ಗದಲ್ಲಿ ಏಕರೀತಿಯ ತೆರಿಗೆ ವಿಧಿಸಲು ಉದ್ದೇಶಿಸಿದೆ. ಉದಾಹರಣೆಗೆ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಲ್ಲಿ 25 ಗಣಿ ಗುತ್ತಿಗೆಗಳು ಹರಾಜೇತರ ಮಾರ್ಗದಿಂದ ಮಂಜೂರಾಗಿವೆ. 5 ಗಣಿ ಗುತ್ತಿಗೆಗಳು ಮಾತ್ರ ಸರಕಾರಿ ಸ್ವಾಮ್ಯಕ್ಕೆ ಮೀಸಲಾಗಿವೆ. ಇದರ ವಾರ್ಷಿಕ ಉತ್ಪಾದನ ಸಾಮರ್ಥ್ಯವು ಸುಮಾರು 77.36 ದಶಲಕ್ಷ ಟನ್‌ ಆಗಿದ್ದು, ಹೀಗಾಗಿ ಹರಾಜೇತರ ಗಣಿ ಗುತ್ತಿಗೆ ಮೇಲೆ ಖನಿಜ ಹಕ್ಕುಗಳ ತೆರಿಗೆ ವಿಧಿಸಲು ತೀರ್ಮಾನಿಸಿದೆ. ಕಾಲ ಕಾಲಕ್ಕೆ ರಾಜ್ಯ ಸರಕಾರ ಈ ತೆರಿಗೆ ದರವನ್ನು ಪರಿಷ್ಕರಿಸಲೂಬಹುದು. ಇದರಿಂದ ಅಂದಾಜು 4,207.95 ಕೋಟಿ ರೂ. ಖನಿಜ ಹಕ್ಕು ತೆರಿಗೆ ಸಂದಾಯ ಆಗುವ ನಿರೀಕ್ಷೆಯಿದ್ದು, ಖನಿಜವಿರುವ ಭೂಮಿಗಳ ಮೇಲಿನ ತೆರಿಗೆ ಪ್ರಕಾರ ಪ್ರತೀ ವರ್ಷ ಸುಮಾರು 505.90 ಕೋಟಿ ರೂ. ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆ.

1. ಕಲ್ಲು ಗಣಿಗಾರಿಕೆ: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜಸ್ವ ಹೆಚ್ಚಿಸಲು ಮುಂದಾಗಿರುವ ಸರಕಾರವು ಪ್ರತೀ ಟನ್‌ಗೆ 70ರಿಂದ 80 ರೂ.ವರೆಗೆ ಸಂಗ್ರಹಿಸಲು ಮುಂದಾಗಿದೆ. ಜತೆಗೆ ಗಣಿಗಾರಿಕೆಗೆ ಭೂಮಿ ಒದಗಿಸುವ ಮಾಲಕರಿಂದಲೂ ತೆರಿಗೆ ವಸೂಲಿಗೆ ನಿರ್ಧರಿಸಿದೆ.
2. ಖನಿಜ ಹಕ್ಕು ತೆರಿಗೆ: ಖನಿಜ ಹಕ್ಕುಗಳ ಮೇಲಿನ ತೆರಿಗೆಯಿಂದ 4,207.95 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿರುವ ರಾಜ್ಯ ಸರಕಾರವು, ಉಪಖನಿಜಗಳ ಮೇಲಿನ ರಾಜಧನವನ್ನು ಪರಿಷ್ಕರಣೆ ಮಾಡಿದೆ. ಇದರಿಂದ 311.55 ಕೋಟಿ ರೂ. ಆದಾಯ ಒದಗುವ ನಿರೀಕ್ಷೆ ಇದೆ. ಜತೆಗೆ ಖನಿಜ ಇರುವ ಭೂಮಿಯ ಮೇಲಣ ತೆರಿಗೆಯಿಂದ ಬರಬಹುದಾದ 505.90 ಕೋಟಿ ರೂ. ಮೇಲೆ ಸರಕಾರ ಕಣ್ಣಿಟ್ಟಿದೆ.
3. ಒಂದೇ ಬಾರಿಗೆ ಇತ್ಯರ್ಥ: ಖನಿಜ ಪರವಾನಿಗೆ ಪಡೆಯದೆ ಸಾಗಣೆ ಮಾಡಿದ ಪ್ರಮಾಣ ಹಾಗೂ ಗುತ್ತಿಗೆ ಪ್ರದೇಶ ಒತ್ತುವರಿ ಪ್ರಮಾಣ ಅನುಸರಿಸಿ ಗಣಿ ಕಂಪೆನಿಗಳಿಂದ 6,105 ಕೋಟಿ ರೂ. ರಾಜಧನ ಹಾಗೂ ದಂಡ ವಸೂಲಿಗೆ ಒಂದು ಬಾರಿಯ ಅವಕಾಶ ನೀಡಲು ಸರಕಾರ ನಿರ್ಧರಿಸಿದೆ.

311 ಕೋ.ರೂ. ಹೆಚ್ಚುವರಿ ಆದಾಯ ನಿರೀಕ್ಷೆ
ಸರಕಾರವು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿ ಯಲ್ಲಿ ಒಮ್ಮೆ ಪರಿಷ್ಕರಿಸಲು ಅವಕಾಶ
ಕಲ್ಪಿಸಿದ್ದು, ಹೆಚ್ಚುವರಿ ರಾಜಸ್ವ ಸಂಗ್ರಹಣೆಗೆ ಇದರಿಂದ ಅನುಕೂಲವಾಗುವುದರಿಂದ ರಾಜಧನ ಪರಿಷ್ಕರಣೆಗೆ ಅನು
ಕೂಲವಾಗುವ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾವಿಸಲಾಗಿತ್ತು. ಕಟ್ಟಡ ಕಲ್ಲು ಉಪಖನಿಜದ ರಾಜಧನ
ವನ್ನು ಪ್ರತೀ ಮೆಟ್ರಿಕ್‌ ಟನ್‌ಗೆ 80 ರೂ.ನಂತೆ ನಿಗದಿಪಡಿಸಲಾಗಿದೆ. ಇದರಿಂದ 311.55 ಕೋ. ರೂ.ಗಳ ಹೆಚ್ಚುವರಿ ಮೊತ್ತ ಅಂದಾಜಿಸಲಾಗಿದೆ.

ಗಣಿ ಕಂಪೆನಿಗಳಿಂದ 6,105 ಕೋಟಿ ರೂ. ದಂಡ ವಸೂಲಿಗೆ ಒಟಿಎಸ್‌
ಬೆಂಗಳೂರು: ಖನಿಜ ಪರವಾನಿಗೆ ಪಡೆಯದೆ ಸಾಗಣೆ ಮಾಡಿದ ಪ್ರಮಾಣ ಹಾಗೂ ಗುತ್ತಿಗೆ ಪ್ರದೇಶ ಒತ್ತುವರಿ ಪ್ರಮಾಣ ಅನುಸರಿಸಿ ಗಣಿ ಕಂಪೆನಿಗಳಿಂದ 6,105 ಕೋಟಿ ರೂ. ರಾಜಧನ ಹಾಗೂ ದಂಡ ವಸೂಲಿಗೆ ಒಂದು ಬಾರಿಯ ಅವಕಾಶ ನೀಡಲು ಸರಕಾರ ನಿರ್ಧರಿಸಿದೆ.

2018-19ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ 2,438 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು ಡ್ರೋನ್‌ ಬಳಸಿ ಸರ್ವೇ ಮಾಡಲಾಗಿದೆ. ಈ ಸರ್ವೇ ಮೂಲಕ ಖನಿಜ ಪರವಾನಿಗೆ ಪಡೆಯದೆ ಸಾಗಣೆ ಮಾಡಿದ ಪ್ರಮಾಣ ಮತ್ತು ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿರುವ ಪ್ರಮಾಣವನ್ನು ಅಂದಾಜಿಸಿ ಪ್ರತೀ ಮೆಟ್ರಿಕ್‌ ಟನ್‌ಗೆ 60 ರೂ. ರಾಜಧನದಂತೆ 1,221 ಕೋಟಿ ರೂ.ಗಳ 5 ಪಟ್ಟು ದಂಡ ವಿಧಿಸಿತ್ತು. ಅಂದರೆ ಈ ಮೊತ್ತವು 6,105.98 ಕೋಟಿ ರೂ. ಆಗಲಿದ್ದು, ಇದನ್ನು ವಸೂಲಿ ಮಾಡಲು ನೋಟಿಸ್‌ ಜಾರಿಗೊಳಿಸಲಾಗಿತ್ತು.
2023-24ರಲ್ಲಿ ಮತ್ತೊಂದು ಸಲ ಗುತ್ತಿಗೆದಾರರುಗಳ ಸಮ್ಮುಖದಲ್ಲಿ ನ್ಯಾಯಾಲಯದ ಆದೇಶದಂತೆ ಇನ್ನೂ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಬಾಕಿಯಿದೆ. ಇದಲ್ಲದೆ 11 ಜಿಲ್ಲೆಗಳ ಡಿಜಿಪಿಎಸ್‌ (ಡಿಫ‌ರೆಂಟ್‌ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ಸರ್ವೆ ವರದಿ ಬರಬೇಕಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಅನಂತರ ದಂಡ ವಸೂಲಿಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಗಣಿ ಕಂಪೆನಿಗಳಿಗೆ ಒಂದು ಬಾರಿಯ ಪರಿಹಾರ (ಒನ್‌ ಟೈಮ್‌ ಸೆಟಲ್‌ಮೆಂಟ್‌)ದಂತೆ ಅವಕಾಶ ಒದಗಿಸಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ-1994 ಕ್ಕೆ ಸೂಕ್ತ ತಿದ್ದುಪಡಿ ಮತ್ತು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು. ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next