Advertisement
ನಿಗಮ-ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಕಾಂಗ್ರೆಸ್ ತನ್ನ ಪಾಲಿನ ಅನೇಕ ನಿಗಮ-ಮಂಡಳಿಗೆ ನೇಮಕ ಕೈಗೊಂಡಿದ್ದರೂ, ಜೆಡಿಎಸ್‌ನಲ್ಲಿ ನೇಮಕ ಪ್ರಕ್ರಿಯೆ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ-ಆಕ್ರೋಶ ಸ್ಫೋಟದ ಹಂತಕ್ಕೆ ಬಂದಿದೆ ಎನ್ನಲಾಗಿದೆ.
Related Articles
Advertisement
ಇದೀಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹೆಚ್ಚಿನ ಪೈಪೋಟಿ, ಗೊಂದಲದ ನಡುವೆಯೂ ಕಾಂಗ್ರೆಸ್‌ನವರೇ ಅನೇಕ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ, ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಿದ್ದಾರೆ. ಆದರೆ, ಇದುವರೆಗೂ ಜೆಡಿಎಸ್‌ನಿಂದ ಯಾವುದೇ ನಿಗಮ-ಮಂಡಳಿಗಳಿಗೆ ನೇಮಕ ಮಾಡದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
1994-1999ರ ಅವಧಿಯಲ್ಲಿ ಜನತಾದಳ ಅಧಿಕಾರದಲ್ಲಿತ್ತು. ನಂತರ, 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ, 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರಗಳು ಅಧಿಕಾರ ನಡೆಸಿದವು. 2006ರಿಂದ ಇಲ್ಲಿವರೆಗೆ ಜೆಡಿಎಸ್ ಕಾರ್ಯಕರ್ತರು ಯಾವುದೇ ನಿಗಮ-ಮಂಡಳಿಗಳಲ್ಲಿ ಅಧಿಕಾರ ಅನುಭವಿಸದೇ ಚಡಪಡಿಸುತ್ತಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಾದರೂ ವನವಾಸ ಮುಗಿದು ಯಾವುದಾದರೂ ನಿಗಮ-ಮಂಡಳಿಗಳಲ್ಲಿ ಅಧಿಕಾರ ಸ್ಥಾನ ಪಡೆಯಬಹುದೆಂಬ ಜೆಡಿಎಸ್ ಕಾರ್ಯಕರ್ತರ ನಿರೀಕ್ಷೆ, ನಿರೀಕ್ಷೆಯಾಗಿಯೇ ಮುಂದುವರಿದಿದೆ.
23ರ ನಂತರ ಸ್ಫೋಟ ಸಾಧ್ಯತೆ?: ಕಾರ್ಯಕರ್ತರ ಕಡೆಗಣನೆ, ಪಕ್ಷದ ಪಾಲಿಗೆ ಬಂದ ನಿಗಮ-ಮಂಡಳಿ ಹಾಗೂ ಸಚಿವ ಸ್ಥಾನ ಭರ್ತಿ ಮಾಡದಿರುವ ವರಿಷ್ಠರ ಕ್ರಮದ ಬಗ್ಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರದಲ್ಲಿ ಕುದಿಯುತ್ತಿರುವ ಅಸಮಾಧಾನ-ಆಕ್ರೋಶ ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಪಕ್ಷದಲ್ಲಿ ಕಾರ್ಯಕರ್ತರ ನಿರ್ಲಕ್ಷ್ಯದ ಬಗ್ಗೆ ಧ್ವನಿ ಎತ್ತೋಣ, ಅಗತ್ಯವಾದರೆ ರಾಜಕೀಯವಾಗಿ ಬೇರೆ ನಿರ್ಣಯಕ್ಕೂ ಗಂಭೀರ ಚಿಂತನೆ ನಡೆಸೋಣ ಎಂಬ ಕೂಗು ಎದ್ದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿಗಮ-ಮಂಡಳಿಗಳಿಗೆ ನೇಮಕ ಮಾಡುವಲ್ಲಿ ಆಗಿರುವ ವಿಳಂಬದಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನ ಇರುವುದು ನಿಜ. ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದರೂ ಅವಕಾಶ ದೊರೆಯದಿದ್ದರೆ ಹೇಗೆಂಬ ನೋವು ತೋಡಿಕೊಂಡಿದ್ದಾರೆ. ಶೀಘ್ರವೇ ಮುಖ್ಯಮಂತ್ರಿ ಭೇಟಿ ಮಾಡಿ ಕಾರ್ಯಕರ್ತರ ಭಾವನೆ ತಿಳಿಸುತ್ತೇನೆ.-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ. * ಅಮರೇಗೌಡ ಗೋನವಾರ