14 ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವೈಚಾರಿಕತೆಯ ಸ್ಪಷ್ಟತೆ ಹೊಂದಿದ ಹಿರಿಯರು ಅದನ್ನು ಇಂದಿನ ಯುವಸಮೂಹಕ್ಕೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದು ಮುಂದಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಇಂದಿನ ಪಾಲಕರು ತಮ್ಮ ಮಕ್ಕಳನ್ನು ಡಾಕ್ಟರ್ ಮತ್ತು ಇಂಜಿನೀಯರ್‌ಗಳನ್ನಾಗಿ ಮಾಡುವ ಭರದಲ್ಲಿ ಕೋಟ್ಯಂತರ ಪ್ರತಿಭೆಗಳನ್ನು ಹೊಸಕಿ ಹಾಕುತ್ತಿದ್ದಾರೆ. ಆದರೆ ಮನುಷ್ಯತ್ವವನ್ನೇ ಮರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಾತಿ ಎಂಬ ವಿಷದ ವ್ಯವಸ್ಥೆ ಪ್ರಸಕ್ತ ಸಂದರ್ಭದಲ್ಲಿ ಅಗೋಚರ ವ್ಯವಸ್ಥೆಯಲ್ಲೂ ಜೀವಂತವಾಗಿದೆ ಎಂದು ವಿಶ್ಲೇಷಿಸಿದರು. ಪ್ರಾಧ್ಯಾಪಕರು ತರಗತಿಯೊಳಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಆದರೆ ತರಗತಿಯಾಚೆಗೂ ಅವರ ಜವಾಬ್ದಾರಿ ಇದೆ ಎಂಬುದನ್ನು ಮರೆಯುತ್ತಿರುವುದು ಆತಂಕಕಾರಿ ಸಂಗತಿ. ಪ್ರಸಕ್ತ ಸಂದರ್ಭದಲ್ಲಿ ಪ್ರಾಧ್ಯಾಪಕರಿಗಿಂತ ಪತ್ರಕರ್ತರು ಉತ್ತಮ ಸಂವಹನಕಾರರಾಗಿದ್ದಾರೆ ಎಂದರು. ಪಿಎಚ್‌ಡಿ ಮಹಾಪ್ರಬಂಧಗಳ ಪರಿಚಯಿಸಿದ ಸಾಹಿತಿ ಡಾ| ಚನ್ನಪ್ಪ ಕಟ್ಟಿ, ಒಂದು ವಿಶ್ವವಿದ್ಯಾಲಯ ಏನು ಮಾಡಬೇಕು ಎಂದು ಸಮಾಜ ನಿರೀಕ್ಷಿಸುತ್ತದೆಯೋ ಅದನ್ನು ಈ ಮಹಿಳಾ ವಿವಿ ಸಾರ್ಥಕಗೊಳಿಸಿದೆ. ಅಂದರೆ ಬೋಧನೆ, ಶೋಧನೆ, ಪ್ರಕಟಣೆ, ಪ್ರಸರಣ ಮತ್ತು ಜ್ಞಾನದ ಕ್ಷಿತಿಜದ ವಿಸ್ತರಣ ಇವುಗಳು ವಿಶ್ವವಿದ್ಯಾನಿಲಯದ ಮೂಲ ಕಾರ್ಯಗಳು. ಪ್ರಸ್ತುತ ಸಮಾಜದಲ್ಲಿ ಸಕಾರಾತ್ಮಕ ಬೋಧನೆ ಮಾಡುವುದು ಶಿಕ್ಷಣದ ಮುಖ್ಯ ಧ್ಯೇಯವಾಗಬೇಕು ಎಂದು ಹೇಳಿದ ಅವರು, ಮಹಿಳೆಯರಿಂದ ಮಹಿಳೆಯರ ಕುರಿತು ರಚಿತವಾಗಿರುವ ಈ ಕೃತಿಗಳು ಶ್ಲಾಘನೀಯ ಎಂದರು. ಯಾವುದೇ ವಿಶ್ವವಿದ್ಯಾಲಯವು ತನ್ನನ್ನು ನಡುಗಡ್ಡೆಯಂತೆ ಭಾವಿಸಬಾರದು. ಒಂದು ವೇಳೆ ಹಾಗೆ ಭಾವಿಸಿದಲ್ಲಿ, ವಿವಿಯು ಒಂದು ದಿಕ್ಕಿನಲ್ಲಿ ಮತ್ತು ತನ್ನನ್ನು ನಂಬಿರುವ ಸಮುದಾಯ ಒಂದು ದಿಕ್ಕಿನತ್ತ ಸಾಗುತ್ತದೆ ಎಂದರು. ಪದವಿ ಭಾಷಾ ಪಠ್ಯ ಪುಸ್ತಕಗಳ ಕುರಿತು ಮಾತನಾಡಿದ ಬೆಂಗಳೂರು ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಡಾ| ರಂಗನಾಥ ಕಂಟನಕುಂಟೆ, ಅಧ್ಯಾಪಕರಿಗೆ ವೈಚಾರಿಕತೆಯ ಸೂಕ್ಷ್ಮತೆ ಇಲ್ಲದಿದ್ದರೆ ನಾವು ಎಷ್ಟೇ ಸಮರ್ಥನೀಯ ಪಠ್ಯಪುಸ್ತಕ ರೂಪಿಸಿದರೂ ಅಂತಿಮವಾಗಿ ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ವಿಫಲರಾಗುತ್ತೇವೆ. ಭಾಷಾ ಸಾಮರ್ಥ್ಯ ಮತ್ತು ಭಾಷಾ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸದಿದ್ದರೆ ಅವರಲ್ಲಿ ಎಷ್ಟೇ ಕ್ರಿಯಾಶೀಲತೆ ಇದ್ದರೂ ಅದು ಕುಂಠಿತಗೊಳ್ಳುತ್ತದೆ ಎಂದು ಹೇಳಿದರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಸಬಿಹಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಭಾಷಾ ಪಠ್ಯ ಪುಸ್ತಕಗಳ ಪ್ರಧಾನ ಸಂಪಾದಕ ಮಹೇಶ ಚಿಂತಾಮಣಿ, ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಇಂಗ್ಲಿಷ್ ಪಠ್ಯಪುಸ್ತಕಗಳ ಪ್ರಧಾನ ಸಂಪಾದಕ ಪಿ.ಕಣ್ಣನ್ ವೇದಿಕೆಯಲ್ಲಿದ್ದರು. ಪದವಿ ಪಠ್ಯಪುಸ್ತಕಗಳ ಲೇಖಕರಾದ ಶಾಂತಾ ಮಠ, ಎಂ.ಟಿ. ಕೊಟ್ನಿ, ಸತ್ಯನಾರಾಯಣ, ಮೀನಾಕ್ಷಿ ಬಾಳೆ, ಪಿಎಚ್‌ಡಿ ಮಹಾಪ್ರಬಂಧಗಳ ಲೇಖಕಿಯರಾದ ಶೋಭಾ ಪಾಟೀಲ, ರೇಣುಕಾ ಆಸಗಿ, ಶ್ರೀದೇವಿ ಎಲ್, ಜ್ಯೋತಿ ಕಣ್ಮಡೆ, ಶಾಹಿನ್ ಕುಡಚಿ, ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು. ಕುಲಸಚಿವ ಕೆ.ಪಿ. ಶ್ರೀನಾಥ ಸ್ವಾಗತಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಪರಿಚಯಿಸಿದರು. ಪ್ರಸಾರಾಂಗದ ನಿರ್ದೇಶಕ ಡಾ| ವಿಷ್ಣು ಶಿಂಧೆ ಪ್ರಾಸ್ತಾವಿಕ ಮಾತನಾಡಿದರು. ಡಾ|ಉದಯಕುಮಾರ ಕುಲಕರ್ಣಿ ನಿರೂಪಿಸಿದರು. ಡಾ| ಭಾಗ್ಯಶ್ರೀ ದೊಡಮನಿ ವಂದಿಸಿದರು.
Advertisement