ಉಡುಪಿ: ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಗುಣ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದೆ. ಇದು ಎಲ್ಲ ಕಡೆಯೂ ಸಿಗುವಂತಹದ್ದಲ್ಲ. ಆದರೆ ಎಂಜಿಎಂ ಕಾಲೇಜಿನಲ್ಲಿ ಇದರೊಂದಿಗೆ ಜೀವನ ಕೌಶಲ, ನಾಯಕತ್ವಗುಣದಂತಹ ಶಿಕ್ಷಣವೂ ದೊರೆಯುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯ ಎಂದು ನೀತಿ ಆಯೋಗದ ಸದಸ್ಯ ಹಾಗೂ ಹೈದರಾಬಾದ್‌ನ ಪವರ್ ಫೈನಾನ್ಸ್ ಕಾರ್ಪೊರೇಷನ್‌ನ ಸಹಪ್ರಾಧ್ಯಾಪಕ ಪ್ರೊ| ಪ್ರಸನ್ನ ತಂತ್ರಿ ಅಭಿಪ್ರಾಯಪಟ್ಟರು.
ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರವಿವಾರ ನಡೆದ ಹಳೆ ವಿದ್ಯಾರ್ಥಿ ಸಂಘದ ಅಮೃತ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೋಚಿಂಗ್ ಸೆಂಟರ್‌ಗಳಲ್ಲಿ ಇಂದು ಪ್ರತಿಭಾನ್ವಿತ ಹಾಗೂ ಪ್ರತಿಭಾನ್ವಿತರಲ್ಲದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ವಿವಿಧ ಚಿಂತನೆಗಳುಳ್ಳ ವ್ಯಕ್ತಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ನಮ್ಮ ನಿಲುವು ಒಂದೇ ಆಗಿದ್ದಾಗ ನಾವು ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಬಹುದು. ಸಾಮಾಜಿಕ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಬಹಳಷ್ಟು ಪ್ರಾಮುಖ್ಯತೆ ವಹಿಸುತ್ತದೆ.
ಇವುಗಳನ್ನು ಯಾವ ಶಾಲಾ-ಕಾಲೇಜುಗಳಲ್ಲಿಯೂ ಕಲಿಸುತ್ತಿಲ್ಲ. ಆದರೆ ಎಂಜಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗಿರುವಂತಹ ಶಿಕ್ಷಣ ಲಭಿಸುತ್ತಿದೆ. ವಿವಿಧ ಕಂಪೆನಿಗಳು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಆರ್ಥಿಕ ನೆರವು ನೀಡಿದರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ| ಸುರೇಂದ್ರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ| ಮಾಲತಿ ದೇವಿ, ನಿವೃತ್ತ ಪ್ರಾಂಶುಪಾಲ ಪ್ರೊ| ಎಂ.ಎಲ್.ಸಾಮಗ, ಟಿ.ಮೋಹನದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಹಳೆವಿದ್ಯಾರ್ಥಿ ಸಂಘದ ಖಜಾಂಚಿ ದೀಪಾಲಿ ಕಾಮತ್ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ಎಂ.ವಿಶ್ವನಾಥ ಪೈ ಸ್ವಾಗತಿಸಿದರು. ವೀಕ್ಷಿತ್ ವಂದಿಸಿದರು. ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು.